ಸ್ವಾರ್ಥ. ಎಲ್ಲರೊಳಗೂ ಇರುವ ಬೇರು. ಇದ್ದಷ್ಟು ಬೇಕು, ಬೇಕೆನ್ನುವುದು ಸಿಕ್ಕಾಗ ಮತ್ತಷ್ಟು ಬೇಕೆನ್ನುವ ಸ್ವಾರ್ಥದ ಯುಗದಲ್ಲಿ ಇನ್ನೊಬ್ಬರ ಮುಖದಲ್ಲಿ, ಇನ್ನೊಬ್ಬರ ಬದುಕಿನಲ್ಲಿ ನೆಮ್ಮದಿಯ ನಗು ತರುವ ಕೆಲವೊಂದಿಷ್ಟು ವ್ಯಕ್ತಿಗಳ ವ್ಯಕ್ತಿತ್ವ ನಾಲ್ಕು ಜನಗಳ ನಡುವೆ ಇದ್ದರೂ ಬೆಳಕಿಗೆ ಬಾರದೆ ಇರುತ್ತದೆ.
ನೂರಿ ಪರ್ವಿನ್. ವಿಜಯವಾಡದಲ್ಲಿ ಹುಟ್ಟಿ, ಆಂಧ್ರಪ್ರದೇಶದ ಕಡಪದಲ್ಲಿ ಎಂ.ಬಿ.ಬಿ.ಎಸ್ ಕಲಿಕೆಯನ್ನು ಪೂರ್ತಿಗೊಳಿಸುತ್ತಾರೆ. ನೂರಿ, ಕಲಿಯುತ್ತಾ ತನ್ನ ಊರು ಕಡಪದಲ್ಲಿ ಅಲ್ಲಿಯ ಬಡವರ್ಗ ಆಸ್ಪತ್ರೆಯ ದುಬಾರಿ ಚಿಕಿತ್ಸೆಯನ್ನು ಪಡೆಯಲು ಕಷ್ಟ ಪಡುತ್ತಿರುವುದನ್ನು ನೋಡುತ್ತಾರೆ. ಇದು ನೂರಿಯಲ್ಲಿ ಮಾನವೀಯತೆಯ ಮೌಲ್ಯವನ್ನು ಹುಟ್ಟುವಂತೆ ಮಾಡುತ್ತದೆ.
ನೂರಿ ಇರುವ ಊರಿನಲ್ಲಿ ಬಡ ವರ್ಗದ ಜನತೆಗೆ ಆಸ್ಪತ್ರೆ ಚಿಕಿತ್ಸೆ ಕೈಗೆಟುಕುವ ದರದಲ್ಲಿ ಸಿಗಬೇಕು ಎನ್ನುವ ಉಮೇದು ನೂರಿಯಲ್ಲಿ ಇರುತ್ತದೆ. ಅದೇ ಕಾರಣಕ್ಕೆ ನೂರಿ ತಮ್ಮ ಊರು ಕಡಪದಲ್ಲೇ, ಗ್ರಾಮೀಣ ಜನರಿಗೆ ಹತ್ತಿರವಾಗುವಂತೆ ತಮ್ಮದೊಂದು ಪುಟ್ಟ ಕ್ಲಿನಿಕ್ ನ್ನು ತೆರೆಯುತ್ತಾರೆ. ದಿನ ಕಳೆದಂತೆ ನೂರಿಯ ಪುಟ್ಟ ಕ್ಲಿನಿಕ್ ಗೆ ಜನಸಾಮಾನ್ಯರು ಅಂದರೆ ಹೆಚ್ಚಾಗಿ ಬಡ ವರ್ಗದ ಜನ ಸಾಲು ಗಟ್ಟಿ ನಿಲ್ಲುತ್ತಾರೆ. ನೂರಿಯ ಕ್ಲಿನಿಕ್ ಕಡಪದಲ್ಲಿ ಮಾತ್ರವಲ್ಲ ಅಕ್ಕಪಕ್ಕದ ಊರಿಗೂ ವಿಶೇಷವಾಗಿ ಆಕರ್ಷಣೆ ಆಗುತ್ತದೆ. ಅದಕ್ಕೆ ಕಾರಣ ನೂರಿಯ ಮಾನವೀಯತೆಯ ಮನಸ್ಸು.
Related Articles
ರೋಗಿ ಪರೀಕ್ಷೆಗೆ 10 ರೂಪಾಯಿ ಶುಲ್ಕ.! :
ಡಾಕ್ಟರ್ ನೂರಿ ಕ್ಲಿನಿಕ್ ಗೆ ಬರುವ ರೋಗಿಯ ಪರೀಕ್ಷೆಗೆ ಅವರು ತೆಗೆದುಕೊಳ್ಳುವ ಶುಲ್ಕ ಕೇವಲ 10 ರೂಪಾಯಿ ಮಾತ್ರ. ಹೊರ ರೋಗಿಗಳಿಗೆ 10 ರೂಪಾಯಿ ಆದ್ರೆ, ಒಳರೋಗಿಗಳಿಗೆ ಒಂದು ಬೆಡ್ ಗೆ 40 ರೂಪಾಯಿಯಂತೆ ಶುಲ್ಕ ತೆಗೆದುಕೊಳ್ಳುತ್ತಾರೆ.
ನೂರಿ ಕ್ಲಿನಿಕ್ ಗೆ ಹೆಚ್ಚಾಗಿ ಬರುವವರು ಬಡ ಕುಟುಂಬದ ಜನರು. ನೂರಿಯ ಕ್ಲಿನಿಕ್ ಬಗ್ಗೆ ಹಾಗೂ ಅವಳ ಮಾನವೀಯತೆಯನ್ನು ನೋಡಿ ಅಪ್ಪ ಅಮ್ಮನಿಗೆ ತುಂಬಾ ಖುಷಿ ಆಗುತ್ತದೆ. ನೂರಿಯ 10 ರೂಪಾಯಿ ಶುಲ್ಕದ ಯೋಜನೆ ಗೆ ಹಾಗೂ ಮಾನವೀಯತೆಯ ಮೌಲ್ಯ ಮೂಡಲು ಅಪ್ಪ ಅಮ್ಮನೇ ಪ್ರೇರಣೆ ಎನ್ನುತ್ತಾರೆ ನೂರಿ.
ಇದಲ್ಲದೆ ಬಡವರಿಗಾಗಿ ಸರ್ಕಾರದ ಮೆಡಿಕಲ್ ಯೋಜನೆಗಳನ್ನು ಮಾಡಿಕೊಡುತ್ತಾರೆ. ಸರ್ಕಾರದಿಂದ ಇರುವ ಎಲ್ಲಾ ಯೋಜನೆಗಳ ಕುರಿತು ನೂರಿ ಬಡ ಕುಟುಂಬಕ್ಕೆ ಮಾಹಿತಿ ನೀಡಿ ಯೋಜನೆಯನ್ನು ಪಡೆದುಕೊಳ್ಳಲು ನೆರವಾಗುತ್ತಾರೆ.
ನೂರಿ ಕ್ಲಿನಿಕ್ ಆರಂಭಿಸುವ ಮೊದಲು ‘Healthy Inspiring Young India’, ‘Noor Charitable Trust’ ಎಂಬ ಎನ್.ಜಿ.ಓ ಸ್ಥಾಪಿಸಿ ಅದರಲ್ಲಿ ಆರೋಗ್ಯ ಹಾಗೂ ಶಿಕ್ಷಣದ ಕುರಿತು ಸಹಾಯವನ್ನು ಮಾಡುತ್ತಿದ್ದರು.
ನೂರಿ ಮುಂದೆ ಸೈಕಾಲಜಿಯಲ್ಲಿ ಪಿ.ಜಿ ಶಿಕ್ಷಣವನ್ನು ಮಾಡಿ, ಬಡ ಜನರಿಗೆ ಸೂಕ್ತ ಬೆಲೆಯಲ್ಲಿ ಲಭ್ಯವಾಗುವ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದ್ದಾರೆ.
– ಸುಹಾನ್ ಶೇಕ್