Advertisement

ಭವಿಷ್ಯವಿರುವುದೇ ಕ್ವಾಂಟಮ್‌ ಕಂಪ್ಯೂಟರ್‌ನಲ್ಲಿ

12:30 AM Oct 07, 2018 | |

ಕಳೆದ ಎರಡು ಮೂರು ದಶಕಗಳಲ್ಲಿ ಜಗತ್ತೇ ಬದಲಾಗಿದೆ. ಇವತ್ತು ಬಳಸುವ ಒಂದು ಟೆಕ್ನಾಲಜಿ ನಾಳೆ ಎನ್ನುವುದರಲ್ಲಿ ಹಳೆಯದಾಗುತ್ತದೆ. ಅಷ್ಟು ವೇಗ! ಟಿವಿ, ಬ್ಯಾಂಕ್‌, ಮೊಬೈಲ್, ಮೆಡಿಸಿನ್‌, ಕಾರು, ಸಿನೆಮಾ, ಟ್ರಾಕ್ಟರ್‌ನಿಂದ ಹಿಡಿದು ಎಲ್ಲವೂ ಇಂದು ನಿಮಿಷದಿಂದ ನಿಮಿಷಕ್ಕೆ ಬದಲಾಗುತ್ತಿವೆ. ಇವತ್ತಿನ ಈ ಜಂಕ್ಷನ್‌ ನಲ್ಲಿ ನಿಂತು “ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದೇನು?’ ಎಂಬ ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರ ಹುಡುಕುವುದು “ಚೇಳಿನ ಹತ್ತಿರ ನೀನು ಯಾವ ಕಾಲಿನಲ್ಲಿ ನಡೆಯುತ್ತೀಯಾ?’ ಎಂದು ಕೇಳಿದಂತೆ. ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ಗ್ರಹಿಸಲೂ ಅಸಾಧ್ಯವಾಗಿರುವ ವಾತಾವರಣ ಸೃಷ್ಟಿಯಾಗಿದೆ. 

Advertisement

ಒಂದು ಕಡೆ ನ್ಯಾನೋ ಟೆಕ್ನಾಲಜಿ, ನ್ಯಾನೋ ರೋಬೊಟ್‌ಗಳು ಇನ್ನೊಂದು ಕಡೆ ಕೃತಕ ಬುದ್ಧಿಮತ್ತೆ, ಇವೆಲ್ಲದರ ನಡುವೆ ಸ್ವಯಂಚಾಲಿತ ವಾಹನಗಳು, ಹಾರುವ ಕಾರುಗಳು, ಡ್ರೋನ್‌ಗಳು,  ಭೂಮಿಯ ಒಳಗೆ ಸುರಂಗ ಸೃಷ್ಟಿಸಲು ಹೊರಟಿರುವ ಬೋರಿಂಗ್‌ ತಂತ್ರಜ್ಞಾನ, ಗಾಳಿಯಲ್ಲಿ ಓಡುವ ಹೈಪರ್‌ ಲೂಪ್‌, ಅಂತರಿಕ್ಷ ನೌಕೆ, ಬಯೋಟೆಕ್‌, ಕ್ಲೌಡ್‌ ಕಂಪ್ಯೂಟಿಂಗ್‌, ಸೌರಶಕ್ತಿ ಹೀಗೆ ಎಲ್ಲೆಡೆಯೂ ಮನುಷ್ಯ ತನ್ನ ಬುದ್ಧಿಯನ್ನು ಪ್ರಚೋದಿಸಿ ಪ್ರಯೋಗ ನಡೆಸುತ್ತಿದ್ದಾನೆ. ಇವತ್ತಿನ ಯಾವುದೇ ಒಂದು ತಂತ್ರಜ್ಞಾನ ನಾಳೆಯನ್ನು ಬದಲಾಯಿಸುತ್ತದೆ ಎಂದು ಹೇಳುವ ಹಾಗೆ ಇಲ್ಲ. ಎಲ್ಲಿ ನೋಡಿದರೂ ಎಲ್ಲಿಯೋ ಏನೋ ಮಿಸ್ಸಿಂಗ್‌ ಅನಿಸುತ್ತದೆ. ಸಂಪೂರ್ಣತೆ ಇಲ್ಲ. ಹತ್ತೂಂಬತ್ತನೆಯ ಶತಮಾನದಲ್ಲಿ ಸ್ಟೀಮ್‌ ಇಂಜಿನ್‌ ಬಂದು ಜಗತ್ತನ್ನು ಬದಲಾಯಿಸಿತು, ಇಪ್ಪತ್ತನೆಯ ಶತಮಾನವನ್ನು ಕಂಪ್ಯೂಟರ್‌. ಇಪ್ಪತ್ತೂಂದನೇ ಶತಮಾನದಲ್ಲಿ ಬದಲಾವಣೆಯ ಪಯಣಕ್ಕೆ ಮೊಬೈಲ್‌ ಹಾಗೂ ಇಂಟರ್ನೆಟ್‌ ಸಾರಥ್ಯ ವಹಿಸಿವೆ. ಹಾಗೆಯೇ ಈ ಶತಮಾನದ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಉತ್ತರ ಹುಡುಕುವುದು ಕಷ್ಟವಾಗಿದೆ, ಉತ್ತರ ಒಂದೇ ಇದ್ದರೂ ಅದು ಅಲ್ಲಿ ಇಲ್ಲಿ ಬಿಡಿ ಬಿಡಿಯಾಗಿ ಎಲ್ಲೆಲ್ಲೂ ಹರಡಿವೆ. ಅದನ್ನು ಕೂಡಿಸಿ ನೋಡಿದಾಗ ಕಾಣುವುದೇ ಕ್ವಾಂಟಮ್‌ ಕಂಪ್ಯೂಟಿಂಗ್‌. ಆರ್ಟಿಫಿಷಿಯಲ್‌ ಇಂಟಲಿಜೆನ್ಸ್, ನ್ಯಾನೋ ಟೆಕ್ನಾಲಜಿ ಎಲ್ಲವೂ ಕ್ವಾಂಟಮ್‌ ಕಂಪ್ಯೂಟಿಂಗ್‌ ಮೂಲಕ ಕ್ಷಿಪ್ರವಾಗಿ ಬೆಳೆಯಲಿವೆ. ನೋಡ ನೋಡುತ್ತಿರುವಂತೆ ಕತ್ತಲು ಎನಿಸಿರುವ ಮುಂದಿನ ಶತಮಾನದ ದಾರಿಗೆ ಕ್ವಾಂಟಮ್‌ ಕಂಪ್ಯೂಟರ್‌ ಬೆಳಕಾಗಲಿದೆ.

 ಕ್ವಾಂಟಮ್‌ ಕಂಪ್ಯೂಟರ್‌ ಅಂದರೆ ಏನು? ಇವತ್ತು ನಾವು ಯಾವ ತಂತ್ರಜ್ಞಾನ ಬಳಸುತ್ತಿದ್ದೇವೆಯೋ ಅದನ್ನು ಕ್ಲಾಸಿಕಲ್‌ ಕಂಪ್ಯೂಟರ್‌ ಎನ್ನುತ್ತಾರೆ. ಅದು ನಡೆಯುವುದು ಬೈನರಿ ಪದ್ಧತಿಯ ಪ್ರಕಾರ. ಅಂದರೆ ಕಂಪ್ಯೂಟಿಂಗ್‌ ಟೆಕ್ನಾಲಜಿ ಕೇವಲ ಒಂದು ಹಾಗೂ ಶೂನ್ಯದ ಬಳಕೆಯ ಮೇಲೆ ಆಧಾರವಾಗಿದೆ. ಅರವತ್ತರ ದಶಕದಲ್ಲಿ ಇಂಟೆಲ್‌ ಕಂಪನಿಯ ಸಂಸ್ಥಾಪಕರಾದ ಗೋರ್ಡನ್‌ ಮೂರ್‌ ಒಂದು ಸಮೀಕರಣ ಹೇಳಿದ್ದರು, ಅದನ್ನು “ಮೂರ್ಸ್‌ ಲಾ’ ಎನ್ನುತ್ತಾರೆ. ಅದರ ಪ್ರಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ಕಂಪ್ಯೂಟರ್‌ನಲ್ಲಿರುವ ಟ್ರಾನ್ಸಿಸ್ಟರ್‌ ದುಪ್ಪಟ್ಟು ಹೆಚ್ಚಾಗುತ್ತದೆ ಹಾಗೆಯೇ ಅದರ ಬೆಲೆ ಅರ್ಧದಷ್ಟು ಕಡಿಮೆ ಆಗುತ್ತದೆ. 8, 16, 32, 64 ಬಿಟ್‌ ಮೈಕ್ರೊಪ್ರೊಸೆಸರ್‌ ಇರುವ ಕಂಪ್ಯೂಟರ್‌ ಒಂದಾದ ಮೇಲೆ ಇನ್ನೊಂದು ಎಲ್ಲವೂ ಮೂರ್ಸ್‌ ನಿಯಮವನ್ನು ಪಾಲಿಸುತ್ತಾ ಬಂದವು. ಇಂದು ಒಂದು ಸಣ್ಣ ಮೊಬೈಲ್‌ ನಲ್ಲಿ ಬಿಲಿಯನ್‌ ಟ್ರಾನ್ಸಿಸ್ಟರ್‌ಗಳು ಜೋಡಣೆಯಾಗಿರುತ್ತವೆ. ಇಂಟೆಲ್‌ ಕಂಪನಿಯ ಖಠಿrಚಠಿಜ್ಡಿ 10 ಮೈಕ್ರೊಪ್ರೊಸೆಸರ್‌ ಚಿಪ್‌ನಲ್ಲಿ ಮೂವತ್ತು ಬಿಲಿಯನ್‌ ಟ್ರಾನ್ಸಿಸ್ಟರ್‌ಗಳಿವೆ! ಆದರೆ ಇಂದು ಇಂಟೆಲ್‌ ಕಂಪನಿಯೇ ಸ್ವತಃ ಹೇಳಿಕೊಂಡಿರುವ ಹಾಗೆ ಮೂರ್ಸ್‌ ನಿಯಮವನ್ನು ಪಾಲಿಸಲು ಚಿಪ್‌ ತಯಾರಿಕಾ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ. ಕ್ಲಾಸಿಕಲ್‌ ಮೆಕ್ಯಾನಿಕ್ಸ್ ಮೂಲಕ ಜಗತ್ತನ್ನು ವಿವರಿಸಲು ಆಗದೇ ಹೋದಾಗ ಹೇಗೆ ವಿಜ್ಞಾನಿಗಳು ಕ್ವಾಂಟಮ್‌ ಮೆಕ್ಯಾನಿಕ್ಸ್ ಕಡೆ ಹೋದರೋ ಹಾಗೆಯೇ ಇಂದು ಕ್ವಾಂಟಮ್‌ ಕಂಪ್ಯೂಟಿಂಗ್‌ ಮೊರೆ ಹೋಗಿದ್ದಾರೆ. 

ಕ್ವಾಂಟಮ್‌ ಕಂಪ್ಯೂಟಿಂಗ್‌ ಅಂದರೆ ಜೀರೊ ಹಾಗೂ ಒಂದರ ನಡುವಿನ ಇನ್ನೊಂದು ಸ್ಥಿತಿಯನ್ನು ಸೃಷ್ಟಿಮಾಡಿ ಅದನ್ನು ಗಣಕಯಂತ್ರದಲ್ಲಿ ಬಳಸುವುದು. ನಾವು ಜೀರೊ ಹಾಗೂ ಒಂದರ ನಡುವಿನ ಎಲೆಕ್ಟ್ರಾನ್‌ ಸ್ಥಿತಿ ಎಂದೆವಲ್ಲ ಅದು ಒಂದಕ್ಕಿಂತ ಹೆಚ್ಚಾ ಇರಬಹುದು. ಹಾಗೆ ಆದಾಗ ಗಣಕಯಂತ್ರದ ತಾಕತ್ತು ತೀವ್ರವಾಗಿ ಹೆಚ್ಚುತ್ತದೆ. ಈ ನಡುವಿನ ಸ್ಥಿತಿ ಅಂದರೆ ಏನು? ಕ್ಲಾಸಿಕಲ್‌ನಲ್ಲಿ ಓನ್‌ ಹಾಗೂ ಆಫ್ ಇರುತ್ತದೆ. ಜೀರೋ ಅಂದರೆ ಆಫ್, ಒನ್‌ ಅಂದರೆ ಓನ್‌. ಕ್ವಾಂಟಮ್‌ ಕಂಪ್ಯೂಟಿಂಗ್‌ನಲ್ಲಿ “ಸುಪರ್‌ ಪೊಸಿಷನ್‌’ ಎಂಬ ಒಂದು ಕನ್ಸೆ±r…ನ್ನು ಬಳಸಲಾಗುತ್ತದೆ. ಓನ್‌ ಹಾಗೂ ಆಫ್ ನಡುವಿನ ಆ ಸ್ಟೇಟ್‌ ಆಗಿದ್ದೂ ಎರಡೂ ಸ್ಟೇಟ್‌ನಲ್ಲಿರುವುದನ್ನೇ ಸುಪರ್‌ ಪೊಸಿಷನ್‌ ಎನ್ನುತ್ತಾರೆ. ಅರ್ಥ ಆಗಿಲ್ವಾ? ಕಷ್ಟ ಇದೆ. ಎಲೆಕ್ಟ್ರಾನ್‌ ಜೀರೊ ಅಥವಾ ಒನ್‌ ಯಾವುದರಲ್ಲಿದೆ ಎನ್ನುವುದನ್ನು ಸೂಚಿಸಲು ಕ್ವಾಂಟಮ್‌ನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಆಗ ಮಾತ್ರ ಅದು ಸುಪರ್‌ ಪೊಸಿಷನ್‌ ಸ್ಟೇಟ್‌ನಲ್ಲಿರುವುದು ಗೊತ್ತಾಗುತ್ತದೆ. ಈಗ ಮತ್ತೂಂದು ವಿಶೇಷವಾದ ಪೃಕ್ರಿಯೆಯ ಪರಿಚಯ ಮಾಡಬೇಕಿದೆ. ಅದಿಲ್ಲದೆ ಕ್ವಾಂಟಮ್‌ ಕಂಪ್ಯೂಟಿಂಗ್‌ ಸಂಪೂರ್ಣ ಆಗುವುದಿಲ್ಲ. ಅದೇನೆಂದರೆ Entanglement. ಎರಡು ಎಲೆಕ್ಟ್ರಾನ್‌ಗಳನ್ನು ಒಂದು ನಿಖರವಾದ ರೀತಿಯಲ್ಲಿ ಸ್ಪಿನ್‌ ಮಾಡಿದಾಗ ಅವೆರಡು ಒಂದಕ್ಕೊಂದು ಸಂಪರ್ಕ ಹೊಂದಿ ತಮ್ಮ ನಡುವಿನ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಎರಡು ಎಲೆಕ್ಟ್ರಾನ್‌ಗಳು ಎಷ್ಟೇ ದೂರವಿರಲಿ, ಒಂದು ಜ್ಯೋತಿರ್‌ವರ್ಷ ದೂರವಿದ್ದರೂ ಒಮ್ಮೆ ಸಂಬಂಧ ಏರ್ಪಟ್ಟರೆ ಅವು ತಮ್ಮ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತವೆ. Superposition ಹಾಗೂ Entanglement ಎರಡೂ ಕ್ವಾಂಟಮ್‌ ಕಂಪ್ಯೂಟಿಂಗ್‌ನ ಮುಖ್ಯ ಭಾಗ. ಇದು ಅರ್ಥ ಆಗಿಲ್ಲ ಎಂದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ಇದನ್ನು ಅರ್ಥ ಮಾಡಿಕೊಳ್ಳಲು ಐನ್‌ಸ್ಟಿನ್‌ ಕೂಡ ಒದ್ದಾಡಿದ್ದರಂತೆ. 

ಹೀಗೆ ಕ್ವಾಂಟಮ್‌ ಕಂಪ್ಯೂಟಿಂಗ್‌ ಬಳಸಿದಾಗ ಪ್ರೊಸೆಸ್ಸಿಂಗ್‌ ಮಿತಿ ಮೌಂಟ್‌ ಎವರೆಸ್ಟ್ ದಷ್ಟು ಎತ್ತರಕ್ಕೆ ಬೆಳೆಯುತ್ತದೆ. ಕ್ಲಾಸಿಕಲ್‌ ಕಂಪ್ಯೂಟಿಂಗ್‌ನಲ್ಲಿ ಬಳಸುವ 1 ಹಾಗೂ 0ವನ್ನು ಬಿಟ್ಸ್‌ ಎಂದರೆ ಕ್ವಾಂಟಮ್‌ ಕಂಪ್ಯೂಟಿಂಗ್‌ನಲ್ಲಿ ಬಳಸುವ ಬೇರೆ ಬೇರೆ ಸ್ಥಿತಿಯನ್ನು ಕ್ಯೂಬಿಟ್ಸ್‌ ಎನ್ನುತ್ತಾರೆ. ಕ್ಲಾಸಿಕಲ್‌ ಕಂಪ್ಯೂಟರ್‌ನಲ್ಲಿ ಬಿಟ್ಸ್‌ ಏನು ಮಾಡುತ್ತವೆಯೋ ಅದೇ ಕೆಲಸವನ್ನು ಕ್ಯೂಬಿಟ್ಸ್‌ಗಳು ಮಾಡುತ್ತವೆ. ಮಾಹಿತಿಯನ್ನು ಸಂಗ್ರಹಿಸುವುದೇ ಅವುಗಳ ಕೆಲಸ. ಬಿಟ್‌ 0 ಅಥವಾ 1ರ ರೂಪದಲ್ಲಿ ಇದ್ದರೆ ಕ್ಯೂಬಿಟ್‌ ಒಂದೇ ಸಲ 0 ಹಾಗೂ 1 ಎರಡೂ ರೂಪದಲ್ಲಿ ಇರಬಹುದು! 0 ಹಾಗೂ 1 ಆನ್‌ ಆಫ್ ಸ್ಥಿತಿಯನ್ನು ಹೇಳಿದರೆ ಇದು ಇಲೆಕ್ಟ್ರಾನ್‌ ತನ್ನ ಆರ್ಬಿಟ್‌ನಲ್ಲಿ ಮೇಲೆ ಅಥವಾ ಕೆಳಗೆ ಇರುವುದನ್ನು ಹೇಳುತ್ತದೆ. ಹೀಗೆ ಎಲೆಕ್ಟ್ರಾನ್‌ಗಳನ್ನು ಅದರ ಆರ್ಬಿಟ್‌ನಲ್ಲಿ ಬೇರೆ ಬೇರೆ ಕಡೆ ಇಟ್ಟು ಹೊಲಿದ ಕ್ವಾಂಟಮ್‌ ಗೇಟ್ಸ್‌ ಸೇರಿಸಿ ಕ್ವಾಂಟಮ್‌ ಕಂಪ್ಯೂಟರ್‌ ಚಿಪ್‌ ತಯಾರಾಗುತ್ತದೆ. ಹಾಗಿದ್ದರೆ ಕ್ವಾಂಟಮ್‌ ಕಂಪ್ಯೂಟರ್‌ ಹೇಗಿದೆ? ನಮ್ಮ ಲ್ಯಾಪ್‌ ಟಾಪ್‌ ಗೆ ಹೋಲಿಸಿದರೆ ಎಷ್ಟು ದೊಡ್ಡದು? ಕ್ವಾಂಟಮ್‌ ಕಂಪ್ಯೂಟಿಂಗ್‌ ಚಿಪ್‌ ಇಡಲು ದೊಡ್ಡದೊಂದು ಕಟ್ಟಡವೇ ಬೇಕು.
ಐಬಿಎಮ್‌ ತಯಾರಿಸಿದ ಕ್ವಾಂಟಮ್‌ ಕಂಪ್ಯೂಟರ್‌ ಇದಕ್ಕೊಂದು ಉದಾಹರಣೆ. ದೊಡ್ಡ ಕೋಣೆಯೊಂದರಲ್ಲಿ ಐಬಿಎಮ್‌ 50 ಕ್ಯುಬಿಟ್‌ ಕ್ವಾಂಟಮ್‌ ಕಂಪ್ಯೂಟರ್‌ ಕೆಲಸ ಮಾಡುತ್ತಿದೆ. ಅದನ್ನು ನೋಡಿದಾಗ 1930ರ ಕಂಪ್ಯೂಟರ್‌ ನೆನಪಾಗುತ್ತದೆ. ಇಂದು ಕ್ವಾಂಟಮ್‌ ಕಂಪ್ಯೂಟರ್‌ ಕೆಲಸ ಮಾಡಲು -273 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಬೇಕು. ಮುಂದೆ ಸಾಮಾನ್ಯ ತಾಪಮಾನದಲ್ಲಿಯೂ ಕೂಡ ಎಲೆಕ್ಟ್ರಾನ್‌ಗಳ ಓಡಾಟವನ್ನು ನಿಯಂತ್ರಿಸುವ ತಂತ್ರಜ್ಞಾನ ಬರದೇ ಇರದು.

Advertisement

 ಮನುಷ್ಯನ ಮಿದುಳೇ ಹೀಗೆ. ಸಮಸ್ಯೆಗಳು ಸೃಷ್ಟಿಯಾದ ಹಾಗೆ ಅದನ್ನು ಬಗೆಹರಿಸುತ್ತಾ ಮನುಕುಲವನ್ನು ಮುಂದಕ್ಕೆ ದೂಡುತ್ತದೆ. 2016ರಲ್ಲಿ  ಬಿಲ್‌ ಗೇಟ್ಸ್‌ ಒಂದು ಮಾತನ್ನು ಹೇಳಿದ್ದರು. ಅವರ ಪ್ರಕಾರ ಮುಂದಿನ ದಶಕದೊಳಗೆ ಕ್ಲೌಡ್‌ನ‌ಲ್ಲಿ ಕ್ವಾಂಟಮ್‌ ಕಂಪ್ಯೂಟರ್‌ ಬರುತ್ತದೆ ಎನ್ನುವುದು ಭವಿಷ್ಯವಾಣಿಯಾಗಿತ್ತು. ಕಂಪ್ಯೂಟರ್‌ ವಿಜ್ಞಾನಿಗಳ ವೇಗವನ್ನು ನೋಡಿ, ಬಿಲ್‌ ಗೇಟ್ಸ್‌ ಹೇಳಿದ ದಶಕ ದೂರ, ಕೇವಲ ಎರಡೇ ವರ್ಷಗಳಲ್ಲಿ ಕ್ಲೌಡ್‌ ಕ್ವಾಂಟಮ್‌ ಕಂಪ್ಯೂಟಿಂಗ್‌ ಬಳಕಗೆ ಸಿದ್ಧವಾಗಿದೆ! ಇವತ್ತು ಐಬಿಎಮ್‌ ಕ್ವಾಂಟಮ್‌ ಕಂಪ್ಯೂಟರ್‌ ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಲಭ್ಯವಿದೆ. ಅದನ್ನು ಕ್ಲೌಡ್‌ ಕಂಪ್ಯೂಟಿಂಗ್‌ ಮೂಲಕ ಬಳಸಲಾಗುತ್ತಿದೆ. ಗೂಗಲ್, ಮೈಕ್ರೋಸಾಫಸ್ಟ್, ರಿಗೆಟ್ಟಿ, ಐಬಿಎಮ್‌ ಈಗಾಗಲೇ ಕ್ವಾಂಟಮ್‌ ಕಂಪ್ಯೂಟಿಂಗ್‌ನಲ್ಲಿ ಸಂಶೋಧನೆಯ ಸಾವಿರ ಮೈಲಿ ದೂರ ಕ್ರಮಿಸಿವೆ. ಚೀನಾದ ಕೆಲವು ಕಂಪನಿಗಳಂತೂ ಇನ್ನೂ ಒಂದು ಹೆಜ್ಜೆ ಮುಂದಿವೆ. ಆದರೆ ಅಲ್ಲಿ ಕ್ರಮಿಸಬೇಕಾದ ದೂರ ಇನ್ನೂ ಬಹಳಷ್ಟಿದೆ. ಕೇವಲ ಸಿಲಿಕಾನ್‌ ವ್ಯಾಲಿಯ ಸಾಫ್ಟ್ವೇರ್‌ ಕಂಪನಿಗಳು ಮಾತ್ರವಲ್ಲ, ಬ್ಯಾಂಕುಗಳು, ಆಟೋಮೊಬೈಲ್‌ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು, ಸಪ್ಲೆ ಚೈನ್‌ ಮ್ಯಾನೇಜೆಮೆಂಟ್  ಉದ್ಯಮಗಳು, ಫಾರ್ಮಾ, ಬ್ಯಾಟರಿ ಕಂಪನಿಗಳು ಹಾಗೂ ಕೆಮಿಕಲ್‌ ಲ್ಯಾಬ್‌ ಇವೆಲ್ಲವೂ ಇಂದು ಕ್ವಾಂಟಮ್‌ ಕಂಪ್ಯೂಟರ್‌ ಬಳಸಿ ಹೇರಳವಾಗಿ ಪ್ರಯೋಗ ನಡೆಸುತ್ತಿವೆ. 

 ಒಂದು ವಿಷಯ ನೆನಪಿರಲಿ ಇಂದು ಕ್ವಾಂಟಮ್‌ ಕಂಪ್ಯೂಟಿಂಗ್‌ನಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅಪಾಯವೂ ಇದೆ. ಇವತ್ತು ನಾವು ಬಳಸುತ್ತಿರುವ ಎನಕ್ರಿಪ್ಷನ್‌ ಅಲ್ಗೊರಿದಮ್‌ ಇದೆಯಲ್ಲ ಅದನ್ನು Shor’s algorithm ಎನ್ನುತ್ತಾರೆ. ನಮ್ಮ ಬ್ಯಾಂಕ್‌ ಖಾತೆಯ ಮಾಹಿತಿಗಳು, ವಾಟ್ಸಾಪ್‌ ಮೆಸೇಜ್‌ಗಳು, ರಾಷ್ಟ್ರೀಯ ಭದ್ರತಾ ವಿಷಯಗಳು ಯಾವುದೇ ಆಗಲಿ ನಮ್ಮ ಕ್ಲಾಸಿಕಲ್‌ ಕಂಪ್ಯೂಟರ್‌ನಲ್ಲಿ ಬಿಡಿಸಲಾಗದ ರೀತಿಯಲ್ಲಿ ಎನಕ್ರಿಪ್ಷನ್‌ ಕೋಡ್‌ ಮೂಲಕ ಗೌಪ್ಯವಾಗಿ ಇಡಲಾಗುತ್ತದೆ. ಆದರೆ ಕ್ವಾಂಟಮ್‌ ಕಂಪ್ಯೂಟರ್‌ ಬಂದಮೇಲೆ? ಸೂಕ್ಷ್ಮವಾಗಿ ಹೇಳಬೇಕು ಅಂದರೆ ಇವತ್ತು ಕ್ವಾಂಟಮ್‌ ಕಂಪ್ಯೂಟರ್‌ ನಮ್ಮ ಜಗತ್ತಿನ ಯಾವುದೇ ರಹಸ್ಯವಾದ ಮಾಹಿತಿಯನ್ನು ಸೆಕೆಂಡು ಗಳಲ್ಲಿ ಜನರೆದುರು ತರಬಲ್ಲದು. ಅಷ್ಟೇ ಅಲ್ಲ ಜಗತ್ತಿನ ಎಲ್ಲಾ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಅಳಿಸಿಹಾಕಬಲ್ಲದು. 

 ಅದಕ್ಕೆ ಅಲ್ಲವೇ ಅಮೆರಿಕ ಹಾಗೂ ಚೀನಾ ಕ್ವಾಂಟಮ್‌ ಕಂಪ್ಯೂಟಿಂಗ್‌ನಲ್ಲಿ ಹೊಸ ಯುಗದ ಶೀತಲ ಸಮರ ನಡೆಸಿವೆ. ಚೀನಾ ಈಗಾಗಲೇ ಕ್ವಾಂಟಮ್‌ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸಿದೆ. ಅಲ್ಲಿಯ ಸರಕಾರ ಕ್ವಾಂಟಮ್‌ ಕಂಪ್ಯೂಟಿಂಗ್‌ ಸಂಶೋಧನೆಗೆ 10 ಶತಕೋಟಿ ಡಾಲರ್‌ ಹಣವನ್ನು ವೆಚ್ಚ ಮಾಡಲು ಸಿದ್ಧವಾಗಿದೆ. ಅಮೆರಿಕದ ಕಾಂಗ್ರೆಸ್‌ ಇತ್ತೀಚೆಗಷ್ಟೇ ಮಹತ್ವಾಕಾಂಕ್ಷೆಯ “ನ್ಯಾಷನಲ್‌ ಕ್ವಾಂಟಮ್‌ ಇನಿಷಿಯೇಟಿವ್‌’ ಬಿಲ್‌ ಪಾಸ್‌ ಮಾಡಿದೆ. ಇದನ್ನು ಕೆಲವರು ಅಮೆರಿಕದ 1940ರ ಪರಮಾಣು ಕಾರ್ಯಕ್ರಮಕ್ಕೆ ಹೋಲಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟ ಕೂಡ ಒಂದು ಶತಕೋಟಿ ಡಾಲರ್‌ ವೆಚ್ಚದಲ್ಲಿ ಕ್ವಾಂಟಮ್‌ ಕಂಪ್ಯೂಟಿಂಗ್‌ ಸಂಸ್ಥೆಯನ್ನು ಶುರುಮಾಡಿದೆ. ಇದು ಶತಮಾನದ ತಂತ್ರಜ್ಞಾನ. ಒಂದು ಕಾಲದಲ್ಲಿ ಅಣ್ವಸ್ತ್ರ ಹೇಗೆ ಒಂದು ದೇಶದ ಪ್ರಾಬಲ್ಯವನ್ನು ವ್ಯಕ್ತಪಡಿಸುತ್ತಿತ್ತೋ ಹಾಗೆಯೇ ಮುಂದೆ ಕ್ವಾಂಟಮ್‌ ಕಂಪ್ಯೂಟಿಂಗ್‌ ದೇಶದ ಪ್ರಬಲತೆಯನ್ನು ಅಳೆಯುವ ಮಾಪನವಾಗಲಿದೆ. ಇವೆಲ್ಲದರ ನಡುವೆ ಭಾರತವು ಎಂದು ಈ ಕ್ವಾಂಟಮ್‌ ಕಂಪ್ಯೂಟರ್‌ ಸಮರದಲ್ಲಿ ಪಾಲ್ಗೊಳ್ಳುತ್ತದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ಒಂದು ಮಾತಂತೂ ನಿಜ – ಭವಿಷ್ಯವಿರುವುದೇ ಕ್ವಾಂಟಮ್‌ ಕಂಪ್ಯೂಟರ್‌ನಲ್ಲಿ! 

ವಿಕ್ರಮ್‌ ಜೋಶಿ 

Advertisement

Udayavani is now on Telegram. Click here to join our channel and stay updated with the latest news.

Next