ಕೊಪ್ಪಳ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಹಿರೇಹಳ್ಳದ ಮಿನಿ ಡ್ಯಾಮ್‌ನಿಂದ ನದಿಪಾತ್ರಕ್ಕೆ ನೀರು ಬಿಡುಗಡೆ ಮಾಡಿದ್ದರಿಂದ ಅಧಿಕ ಪ್ರಮಾಣದ ನೀರು ಹಳ್ಳದ ಪಾತ್ರ ಮೀರಿ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನಿನ ಮೇಲ್ಪದರೇ ನೀರಲ್ಲಿ ಕೊಚ್ಚಿ ಹೋಗಿ ರೈತರ ಬದುಕೇ ದುಸ್ತರವಾಗಿದೆ. ಇದರಿಂದ ರೈತರ ಕಣ್ಣೀರಿನ ಗೋಳು ಹೇಳತೀರದಾಗಿದೆ.
ಹೌದು.. ಮಳೆಯ ಅವಾಂತರ ಅಷ್ಟಿಷ್ಟಲ್ಲ. ಒಂದೆಡೆ ಕೃಷಿ ಬದುಕಿಗೆ ಖುಷಿ ನೀಡಿದ್ದರೆ, ಇನ್ನೊಂದೆಡೆ ರೈತರು ಕಣ್ಣೀರಿಡುವಂತಾಗಿದೆ. ಅಧಿಕ ಮಳೆಯಿಂದ ಫಲವತ್ತಾದ ಭೂಮಿ, ಬೆಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ತಾಲೂಕಿನ ಹಿರೇಹಳ್ಳ ಭರ್ತಿಯಾಗಿತ್ತು. ಮಿನಿ ಡ್ಯಾಂ ನೀರು ಸಂಗ್ರಹಣ ಸಾಮರ್ಥ್ಯ 1.92 ಟಿಎಂಸಿ ಅಡಿಯಷ್ಟಿದ್ದು, ಕೆಲವೇ ದಿನಗಳಿಗೆ ಅದು ತುಂಬಿಕೊಂಡಿತ್ತು. ಒಳ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಡ್ಯಾಂನಿಂದ ಹಳ್ಳಕ್ಕೆ ಹೆಚ್ಚುವರಿ ನೀರು ಬಿಡುವ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳು ಮೊದಲೇ ಮುನ್ನೆಚ್ಚರಿಕೆ ನೀಡಿದ್ದರು. ಆದರೆ ಮಿನಿ ಡ್ಯಾಮ್‌ಗೆ ಅಧಿಕ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ನದಿಪಾತ್ರಕ್ಕೆ ನೀರು ಹರಿಬಿಡಲಾಗಿದೆ. ಏಕಾಏಕಿ ನೀರು ಹರಿಬಿಟ್ಟ ಕಾರಣ ಹಿರೇಹಳ್ಳ ವ್ಯಾಪ್ತಿಯ ಮಾದಿನೂರು, ಕೋಳೂರು, ಕಾಟ್ರಳ್ಳಿ, ವದಗನಾಳ, ಹಿರೇಸಿಂದೋಗಿ, ಮಂಗಳಾಪುರ, ಬೂದಿಹಾಳ ಸೇರಿದಂತೆ ಹಳ್ಳದ ಎಡ ಹಾಗೂ ಬಲ ಭಾಗದ ಜಮೀನಿನ ಮೇಲ್ಪದರೇ ಕೊಚ್ಚಿ ಹೋಗಿದೆ.
4ರಿಂದ 5 ಅಡಿ ಕೊರಕಲು: ಹಳ್ಳದ ಅಕ್ಕಪಕ್ಕದಲ್ಲಿ ಕೃಷಿಯನ್ನೇ ಜೀವಾಳವಾಗಿಸಿಕೊಂಡು ತುತ್ತಿನ ದುಡಿಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಾವಿರಾರು ರೈತರ ಜಮೀನಿಗೆ ನುಗ್ಗಿರುವ ಹಳ್ಳದ ನೀರು ಬರೊಬ್ಬರಿ 4-5 ಅಡಿ ಆಳಕ್ಕೆ ಕೊರಕಲು ಮಾಡಿದೆ. ಫಲವತ್ತಾದ ಮೇಲ್ಪದರೆ ಕೊಚ್ಚಿ ಹೋಗಿದ್ದಕ್ಕೆ ರೈತರಿಗೆ ದಿಕ್ಕೇ ತೋಚದಂತಾಗಿದೆ. ನೀರಿನ ರಭಸಕ್ಕೆ ದೊಡ್ಡ ದೊಡ್ಡ ಗುಂಡಿ ಬಿದ್ದಿವೆ. ಒಂದೆಡೆ ಹೊಲದಲ್ಲಿದ್ದ ಬೆಳೆಯೂ ಹಾನಿಯಾಗಿದ್ದರೆ, ಇನ್ನೊಂದೆಡೆ ಜೀವನಕ್ಕೆ ಆಸರೆಯಾಗಿದ್ದ ಭೂಮಿಯೇ ಹಾಳಾಗಿ ರೈತರಿಗೆ ಹೇಳಲಾರದಷ್ಟು ನೋವು ತರಿಸಿದೆ. ಸಾವಿರಾರು ರೈತರದ್ದು ಪರಿಸ್ಥಿತಿಯಾಗಿದೆ. ಕಳೆದ ಬಾರಿ ಕೋಳೂರು ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಒಡೆದಾಗಲೂ ಪಕ್ಕದ ಹತ್ತಾರು ರೈತರ ಜಮೀನಿನ ಮೇಲ್ಪದರ ಕೊಚ್ಚಿ ಹೋಗಿತ್ತು. ಈಗಲೂ ಹಳ್ಳದುದ್ದಕ್ಕೂ ಅದೇ ಪರಿಸ್ಥಿತಿ ಉಂಟಾಗಿದೆ.
ಗೇಟ್ ತೆಗೆಯದಿದ್ದಕ್ಕೆ ಹೀಗಾಯಿತು: ಕೆಲ ವರ್ಷಗಳ ಹಿಂದೆ ಅಭಿನವ ಶ್ರೀಗಳು ಹಿರೇಹಳ್ಳವನ್ನು ಸ್ವತ್ಛ ಮಾಡಿ ಹಿರೇಹಳ್ಳಕ್ಕೆ ಅಡ್ಡಲಾಗಿ 11 ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಸಂಕಲ್ಪ ಮಾಡಿ, ಅದರಂತೆ ಹಳ್ಳಕ್ಕೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ ಮಿನಿ ಡ್ಯಾಂನಿಂದ ಹಳ್ಳಕ್ಕೆ ನೀರು ಹರಿ ಬಿಟ್ಟ ವೇಳೆ ಬ್ಯಾರೇಜ್‌ನ ಗೇಟ್‌ಗಳನ್ನು ತೆಗೆಯದೇ ಇರುವುದಕ್ಕೆ ಹೀಗಾಗಿದೆ. ಎನ್ನುವ ಆಪಾದನೆಯೂ ಕೇಳಿ ಬಂದಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಗೇಟ್ ನಿರ್ವಹಣೆಯಲ್ಲಿ ಎಡವಟ್ಟಿನಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಗೇಟ್‌ಗಳಲ್ಲಿ ಮಳೆಗಾಲ ಪೂರ್ವದಲ್ಲೇ ಕಸ ತ್ಯಾಜ್ಯ ತೆರವು ಮಾಡದೇ ಇರುವುದು, ನದಿಪಾತ್ರಕ್ಕೆ ನೀರು ಹರಿಬಿಟ್ಟ ವೇಳೆ ಗೇಟ್‌ಗಳ ನಿರ್ವಹಣೆ ವೈಫಲ್ಯದಿಂದ ಹೀಗಾಗಿದೆ ಎಂದೆನ್ನಲಾಗುತ್ತಿದೆ. ಇಬ್ಬರ ನಡುವೆ ರೈತ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ.
ಪರಿಹಾರಕ್ಕಾಗಿ ಮೊರೆಯಿಟ್ಟ ರೈತರು: ಹಳ್ಳದ ಅಕ್ಕಪಕ್ಕದಲ್ಲಿ ಸಾವಿರಾರು ರೈತರ ಜಮೀನಿನಲ್ಲಿ ಇದೇ ಸ್ಥಿತಿಯಾಗಿದೆ. ಒಂದೆಡೆ ಪೈರು ಕೊಚ್ಚಿ ಹೋಗಿದ್ದರೆ, ಇನ್ನೊಂದೆಡೆ ಮಣ್ಣು ಕೊಚ್ಚಿ ಹೋಗಿದೆ. ಹಾಗಾಗಿ ರೈತಾಪಿ ವಲಯ ತಮಗೆ ಪರಿಹಾರ ಕೊಡಿ ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದೆ. ಜಿಲ್ಲಾಡಳಿತ ಆ ಎಲ್ಲ ರೈತರ ಜಮೀನು ಸರ್ವೇ ನಡೆಸಿ ಅವರಿಗೆ ಪರಿಹಾರ ಕೊಡುವ ಅಗತ್ಯವಿದೆ.
ಹಿರೇಹಳ್ಳ ಭಾಗದಲ್ಲಿ ರೈತರ ಜಮೀನು ಕೊಚ್ಚಿ ಹೋಗಿರುವ ಕುರಿತು ಸರ್ವೇ ನಡೆಸಲು ಸೂಚಿಸಿದ್ದೇನೆ. ಅಂತಹ ರೈತರಿಗೆ ಎನ್‌ಡಿಆರ್‌ಎಫ್, ಎಸ್ ಡಿಆರ್‌ಎಫ್‌ನಡಿ ಪರಿಹಾರ ಕೊಡಲು ಅವಕಾಶವಿದೆ. ಅಲ್ಲದೇ ಮಿನಿ ಡ್ಯಾಮ್‌ನಿಂದ ನೀರು ಬಿಟ್ಟಾಗ ಬ್ಯಾರೇಜಿನ ಗೇಟ್‌ಗಳು ಹಾಕಲಾಗಿತ್ತು. ಅವುಗಳನ್ನು ತೆಗೆಯದೇ ಇರುವ ಕಾರಣ ಹೀಗಾಗಿದೆ. ಗೇಟ್‌ಗಳನ್ನು ಅಟೋಮ್ಯಾಟಿಕ್ ಆಗಿ ತೆರೆಯುವ ತಂತ್ರಜ್ಞಾನ ಬಳಕೆಗೆ ಪ್ರಸ್ತಾವನೆ ಸಿದ್ಧ ಮಾಡಲಾಗುತ್ತಿದೆ. ಅಲ್ಲದೇ, ಗೇಟ್‌ನ ಎತ್ತರ ಪ್ರದೇಶದಲ್ಲಿನ ಜಮೀನಿನ ಸರ್ವೇ ನಡೆಯಲಿದೆ. –
ವಿಕಾಸ್ ಕಿಶೋರ್, ಕೊಪ್ಪಳ ಡಿಸಿ
ಕೃಷಿ ಭೂಮಿಯನ್ನೇ ನೆಚ್ಚಿ ಜೀವನ ಮಾಡುತ್ತಿದ್ದ ನಮಗೆ ದಿಕ್ಕೇ ತೋಚದಂತಾಗಿದೆ. ಹಳ್ಳದ ಪಕ್ಕದಲ್ಲೇ ನಮ್ಮ ಜಮೀನು ಇದೆ. ನೀರಿನ ರಭಸಕ್ಕೆ ಅಪಾರ ಪ್ರಮಾಣದ ಮೇಲ್ಪದರ ಕೊಚ್ಚಿ ಹೋಗಿದೆ. ಬೆಳೆಯೂ ಅದರೊಟ್ಟಿಗೆ ಕೊಚ್ಚಿ ಹೋಗಿದೆ. ಸ್ಥಳಕ್ಕೆ ಸಂಸದರು, ಶಾಸಕರು ಸೇರಿ ಅಧಿ ಕಾರಿಗಳು ಭೇಟಿ ನೀಡಿ ಅವರೇ ಪರಿಸ್ಥಿತಿ ಅವಲೋಕಿಸಿದ್ದಾರೆ. ಪರಿಹಾರ ಕೊಡಿ ಎಂದು ನಾವು ಒತ್ತಾಯವನ್ನೂ ಮಾಡಿದ್ದೇವೆ. ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಲಿ. –
ಅಜಿತ್ ರಡ್ಡಿ ಮಾದಿನೂರು, ಹಿರೇಸಿಂದೋಗಿ ರೈತ ದತ್ತು ಕಮ್ಮಾರ