Advertisement
ಜೀವನದಲ್ಲಿ ಎದುರಾಗುವ ಅಡ್ಡಿಗಳಲ್ಲಿ ನಕಾರಾತ್ಮಕತೆಯೂ ಒಂದು. ಸಣ್ಣ ಸಣ್ಣ ನೆಪಗಳಿಗೆ ಸಂಬಂಧಗಳ ನಡುವೆ ಬಿರುಕು ಮೂಡುತ್ತಿರುವುದು ನಾವು ಕಾಣುತ್ತೇವೆ. ನಕಾರಾತ್ಮಕತೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವನದಲ್ಲಿ ಹೊಂದಾಣಿಕೆ ಅತ್ಯಗತ್ಯ. ಹೊಂದಾಣಿಕೆಗೆ ಸಕಾರಾತ್ಮಕತೆ ಇರಲೇಬೇಕು. ಇಲ್ಲವಾದರೆ ಜೀವನ ದುಸ್ತರವಾಗುತ್ತದೆ. ಕಲಹಗಳು ಸಾಮಾನ್ಯ. ಸಂಬಂಧಗಳ ನಡುವೆ ಕಂದಕವೇರ್ಪಡುತ್ತದೆ.
ಹೊಂದಾಣಿಕೆಗೆ ಒಪ್ಪಿಕೊಳ್ಳುವುದು ಅಗತ್ಯ. ಇನ್ನೊಬ್ಬರನ್ನು ಅವರ ರೀತಿಯಲ್ಲೇ ಒಪ್ಪಿಕೊಳ್ಳುವುದರಿಂದ ಸಂಬಂಧಗಳು ಸ್ಥಿರವಾಗುತ್ತವೆ. ನಾವು ಬಯಸಿದಂತೆ ಇತರರು ಇರಬೇಕೆಂದು ಆಲೋಚಿಸುವುದು ತಪ್ಪು. ಇತರರ ಬದುಕನ್ನೂ ನಾವು ಗೌರವಿಸುವುದು ನಮ್ಮ ಧರ್ಮ ಎನಿಸುತ್ತದೆ. ಹಾಗೆಂದು ಬೇಕಾಬಿಟ್ಟಿ ಇರುವುದನ್ನು, ಸ್ವೇಚ್ಛಾಚಾರವನ್ನು ಒಪ್ಪಿಕೊಳ್ಳಲಾಗದು. ಜತೆಗಾರರು, ನಿತ್ಯ ಸಂಪರ್ಕದಲ್ಲಿರುವವರೊಂದಿಗೆ ವಿಶ್ವಾಸ ಹೊಂದಿ ನಡೆದುಕೊಂಡಾಗ ಒಪ್ಪಿಕೊಳ್ಳುವಿಕೆ ಸಾಧ್ಯ. ಕೆಲವೊಂದು ಸಾರ್ವತ್ರಿಕ ನೀತಿ, ನಿಯಮಗಳ ಪಾಲನೆ ವಿಚಾರದಲ್ಲಿ ಒಪ್ಪಿಕೊಳ್ಳುವಿಕೆಗಿಂತಲೂ ಹೊಂದಾಣಿಕೆಯೇ ಮೇಲ್ಮಟ್ಟದ ಮೌಲ್ಯವಾಗುತ್ತದೆ. ನಾಲ್ಕು ಜನರು ಒಂದೆಡೆ ವಾಸ ಮಾಡುವಾಗ ಕೆಲವೊಂದು ವಿಚಾರಗಳಲ್ಲಿ ಹೊಂದಾಣಿಕೆ ಅಗತ್ಯ. ತಾನಿ ರುವುದೇ ಹೀಗೆ, ಬೇಕಿದ್ದರೆ ಹೊಂದಿಕೊಳ್ಳಲಿ ಎಂಬ ಮನೋಭಾವ ಘರ್ಷಣೆಗೆ ಕಾರಣವಾಗುತ್ತದೆ. ನಮ್ಮ ಕಷ್ಟ-ಇಷ್ಟಗಳೊಂದಿಗೆ ಜತೆ ಗಾರರ ಕಷ್ಟ-ಇಷ್ಟಗಳೂ ನಮಗೆ ತಿಳಿದಿದ್ದರೆ ಬಾಂಧವ್ಯ ವೃದ್ಧಿಯಾಗುತ್ತದೆ. ಸಮಸ್ಯೆ ಎದುರಿಸುವುದಕ್ಕೆ ಶಕ್ತಿ ದೊರೆ ಯುತ್ತದೆ. ಹೊಂದಾಣಿಕೆಗೆ ಪರಸ್ಪರ ಸಂವಹನ ಅತ್ಯಗತ್ಯ. ನಿತ್ಯ ಒಂದಿಷ್ಟು ಮಾತು, ನಗು ಬಾಂಧವ್ಯವೃದ್ಧಿಗೆ ಪೂರಕ. ಕಾರಣವಲ್ಲದ ಕಾರಣಕ್ಕೆ ಮಾತು ಬಿಡುವುದು, ಸಂಬಂಧಗಳೊಳಗೆ ಒಳರಾಜಕೀಯ, ಬಣ ರಾಜಕೀಯ ಮಾಡುವುದು ಪರಿಸ್ಥಿತಿಯನ್ನು ಗಂಭೀರ ಸ್ಥಿತಿಗೆ ಒಯ್ದುಬಿಡುತ್ತದೆ!
Related Articles
ಸಂಬಂಧಗಳ ನಡುವೆ ಗೋಡೆ ಗಳನ್ನು ಕಟ್ಟಿಕೊಂಡು ಬಾಳುವುದರಿಂದ ವೈಯಕ್ತಿಕವಾಗಿ ಸುಖೀಗಳಾಗಬಹುದು. ಆದರೆ, ಸಾಮಾಜಿಕವಾಗಿ ನಮ್ಮ ಬಳಗ ಬಲು ಸಣ್ಣದಾಗುತ್ತದೆ. ಗೋಡೆಗಳು ಎತ್ತರವಾದಂತೆ ಮನಸುಗಳು ಸಣ್ಣವಾಗುತ್ತವೆ. ನಕಾರಾತ್ಮಕತೆ ಮನೆ ಮಾಡುತ್ತದೆ. ಒಂದೊಮ್ಮೆ ಸಮಾಜಕ್ಕೆ ಸಹಾಯ ಮಾಡುವವರಾಗಿದ್ದೂ, ತನ್ನವರ ಜತೆಗೆ ಉತ್ತಮ ಬಾಂಧವ್ಯ ಹೊಂದಿರದಿದ್ದರೆ ಬದುಕಿನ ಉದ್ದಿಶ್ಯ ಈಡೇರಿದಂತಾಗದು; ಬದುಕು ಸುಂದರ ಎನಿಸದು.
Advertisement
- ಕುದ್ಯಾಡಿ ಸಂದೇಶ್ ಸಾಲ್ಯಾನ್