ಕುಳಗೇರಿ ಕ್ರಾಸ್: ಆಂಗ್ಲರ ಸಂಸ್ಕೃತಿ ಮತ್ತು ಶಿಕ್ಷಣ ಪದ್ಧತಿಯ ಜತೆಗೆ ಅವರ ಭಾಷೆಯನ್ನು ಪ್ರೀತಿಸುತ್ತಿರುವುದು ದುರ್ದೈವದ ಸಂಗತಿ. ಆಂಗ್ಲ ಭಾಷೆ ಕಲಿಯಿರಿ. ಆದರೆ, ಮಾತೃಭಾಷೆ ಎಂದಿಗೂ ಬಿಟ್ಟು ಕೊಡಬೇಡಿ ಎಂದು ನಿಸರ್ಗ ತಜ್ಞ ಡಾ| ಎಚ್ ಟಿ ಮಳಲಿ ಹೇಳಿದರು.
ಸುಕ್ಷೇತ್ರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವರಾಜ್ಯ ಶ್ರಾವಣ ಸಂಭ್ರಮ-30 ದೇಶ ಭಕ್ತರ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ದಾಸ್ಯ ಸಂಕೋಲೆಯಿಂದ ತಾಯಿ ಭಾರತಾಂಬೆ ಮುಕ್ತಿಗೊಳಿಸಲು ಹೋರಾಡಿದ ಹುತಾತ್ಮರ ತ್ಯಾಗ ಸ್ಮರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಶ್ರಾವಣ ಮಾಸದಲ್ಲಿ ಸ್ವಾತಂ ತ್ರ್ಯ ನಾಯಕರ ಜೀವನ ಸಂದೇಶವನ್ನು ಸಾರುವ ಅಪರೂಪದ ಕಾರ್ಯಕ್ರಮ ಹಮ್ಮಿಕೊಂಡಿರುವ ಭೈರನಹಟ್ಟಿ ಶಾಂತಲಿಂಗ ಶ್ರೀಗಳ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.
ಉಮೇಶಗೌಡ ಪಾಟೀಲ ಮಾತನಾಡಿ, ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಧೋರಣೆ ವಿರುದ್ಧ ಬಂಡೆದ್ದು ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ನರಗುಂದದ ವೀರ ಬಾಬಾಸಾಹೇಬರ ಸ್ವಾತಂ ತ್ರ್ಯ ಹೋರಾಟವನ್ನು ಮರೆಯುವಂತಿಲ್ಲ. ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ ಮಹಾನ್ ದೇಶಭಕ್ತ ಮತ್ತು ಅಸಾಧಾರಣ ಸಂಘಟನಾ ಕೌಶಲ್ಯ ಹೊಂದಿದ್ದ ಅವರು ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಗೋವಾ ವಿಮೋಚನಾ ಚಳವಳಿಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ಅಪ್ರತಿಮ ಸಂಘಟಿಕರಾಗಿದ್ದರು ಎಂದು ಹೇಳಿದರು. ಶ್ರೀ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬ್ರಿಟಿಷರಿಗೆ ಭಾರತ ಮಹಿಳೆಯರ ದೇಶ ಪ್ರೇಮ ಹಾಗೂ ಶೌರ್ಯ ಐತಿಹಾಸಿಕವಾದುದು.
ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳ ಮೂಲಕ ಮಾತ್ರ ದೇಶದ ಭವಿಷ್ಯವನ್ನು ಪ್ರಕಾಶಮಾನಗೊಳಿಸಬಹುದು ಎಂದರು. ರಾಜು ಕಲಾಲ, ಅಪ್ಪಣ್ಣ ನಾಯ್ಕರ, ಶಿವಾನಂದ ಮುತವಾಡ, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಮಂಗಳಾ ಪಾಟೀಲ, ಪ್ರೊ| ಬಿ.ಸಿ. ಹನಮಂತಗೌಡ್ರ, ಚಂದ್ರು ದಂಡಿನ, ಬಿ ಬಿ ಐನಾಪುರ, ಮಂಜು ಮೆಣಸಗಿ, ಕಿಷ್ಟಣ್ಣ ಬಿಜಾಪುರ, ಡಾ| ವೈ.ಎಂ. ಹಡಪದ, ಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು. ಪ್ರೊ| ರಮೇಶ ಐನಾಪುರ ನಿರೂಪಿಸಿದರು. ಶಿಕ್ಷಕ
ಮಹಾಂತೇಶ ಹಿರೇಮಠ ವಂದಿಸಿದರು.