ಪರೀಕ್ಷೆಗಳು ಇಡುಗಂಟು ಅಂದರೆ ಅದು ಬದುಕು, ನೀವು ಏನಂತೀರಿ…? ನಾವು ಹೀಗೆ ಬದುಕಬೇಕು ಅಂತ ಪ್ಲಾನ್ ಮಾಡಿಕೊಂಡಿರುವಾಗಲೇ ಅದು ನಮ್ಮನ್ನು ಮತ್ಯಾವುದೋ ರೀತಿಯಲ್ಲಿ ಬದುಕುವ ಹಾಗೆ ಮಾಡಿಬಿಡುತ್ತದೆ. ಊಹಿಸಿರದ ತಿರುವುಗಳಲ್ಲಿ ನಮ್ಮನ್ನು ನಿಲ್ಲಿಸಿಬಿಡುತ್ತದೆ. ಅದನ್ನು ಸರಿಪಡಿಸಿಕೊಂಡು ಮತ್ತೆ ವಾಪಸ್ಸು ಹಳೇ ಯೋಚನೆಗಳಿಗೆ ಬರುವ ಹೊತ್ತಿಗೆ, ಮತ್ತೇನೇನೋ ಬದಲಾವಣೆಗಳು ಆಗಿರುತ್ತವೆ. ಇದೂ ಒಂದು ಥರದ ಪರೀಕ್ಷೆಯೇ ತಾನೇ? ಹೊಸ ಕಾಲಮಾನದ ಪರಿಭಾಷೆಯಲ್ಲಿ ಹೇಳುವುದಾದರೆ, ಹೊಸ ಟಾಸ್ಕ್ ಅಂತಲೇ ಹೇಳಬೇಕು.
ಈ ಟಾಸ್ಕ್ ಗಳಿಗೆ ಅಂಕಗಳೂ ಉಂಟು. ಅದನ್ನು ಕೊಡುವಾತ- ಮೇಲಿರುವ ಬಿಗ್‌ಬಾಸ್ ಎಂಬ ದೇವರು ಅನ್ನೋರೂ ಇದ್ದಾರೆ. ವಿಚಾರ ಅದಲ್ಲ, ಬದುಕಿನ ಅನಿರೀಕ್ಷಿತ ತಿರುವುಗಳೆಂಬ ಈ ಪರೀಕ್ಷೆಯಲ್ಲಿ ಹೇಗೆ ಪಾಸ್ ಆಗುತ್ತೇವೆ ಅನ್ನೋದರ ಮೇಲೆಯೇ ನಮ್ಮ ನೆಮ್ಮದಿಯ ಅಂಕಗಳು ಎಷ್ಟು ಅನ್ನೋದು ತೀರ್ಮಾನವಾಗುತ್ತದೆ. ಎಲ್ಲವೂ ಸಾವಧಾನವಾಗಿ ಯಾವುದೇ ಏರುಪೇರಿಲ್ಲದೆ ನಡೆಯುತ್ತಿದೆ ಎನ್ನುವಾಗಲೇ ಕಲ್ಲೊಂದು ಸಿಗುತ್ತದೆ. ಅದನ್ನು ಬದಿಗೆಸೆದು ನಡೆಯಲು ಸಾಗಿದರೆ ಮರಳಿನ ಹಾದಿ. ಆ ಮರಳು ಮುಗಿದರೆ ಮಂಜಿನ ದಾರಿ… ಹೀಗೆ ಸಾಗುತ್ತಿರುವ ಬದುಕಿನಲ್ಲಿ ಅದ್ಯಾವುದೊ ಗಳಿಗೆಯಲ್ಲಿ ನಮ್ಮವರೆಲ್ಲರನ್ನೂ ಬಿಟ್ಟು, ಒಬ್ಬರೇ ನಡೆಯುವ ದುರ್ಗಮ ಹಾದಿ ಎದುರಾಗಬಹುದು. ಆಗ ಹೆದರಿ, ಕಾಲ್ಕಿತ್ತಿರೋ… ಈ ಪರೀಕ್ಷೆಯಲ್ಲಿ ಅಂಕ ಸಿಗದೇ, ಬದುಕಿನುದ್ದಕ್ಕೂ ಒದ್ದಾಡಬೇಕಾಗುತ್ತದೆ. ದುರ್ಗಮ ಹಾದಿಯನ್ನು ಸವೆಸಿದ ಅನುಭವ ಇದೆಯಲ್ಲ; ಇದು ನಮ್ಮ ಜೀವನದ ಸ್ಟ್ರೀಟ್‌ಲೈಟ್‌ನಂತೆ. ಮುಂದೆ ಇಡಬಹುದಾದ ಎಲ್ಲಾ ಹೆಜ್ಜೆಗಳಿಗೆ ಬೆಳಕು ಕೊಡುತ್ತದೆ. ಆತ್ಮವಿಶ್ವಾಸ ತುಂಬುತ್ತದೆ. ಆ ಕಷ್ಟವನ್ನೇ ಎದುರಿಸಿದ್ದೀನಂತೆ, ಇದೇನು ಮಹಾ ಅನ್ನೋ ಹುಂಬತನ ಕಲಿಸಿಬಿಡುತ್ತದೆ. ನಾವು ಆ ಕಠಿಣ ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತೇವೆ ಅನ್ನೋದನ್ನು ಇಡೀ ಜಗತ್ತು ನೋಡುತ್ತಿರುತ್ತದೆ. “ಬಿಡ್ರೀ, ಅವನು ಒಳ್ಳೆ ಹುಡುಗ. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾನೆ ಅಂತೆಲ್ಲಾ ಹೇಳ್ತಾರಲ್ಲ; ಇದೇನು ಕನಿಕರದ ಮಾತಲ್ಲ. ನಮ್ಮ ಬದುಕಿಗೆ ಕೊಟ್ಟ ಅದ್ಭುತ ಸರ್ಟಿಫೀಕೆಟ್. ಜೀವನ ಪರ್ಯಂತ ನಮ್ಮನ್ನು ಕಾಯೋದು ಇದೇ.
ಒಂದು ಸಲ ಇಂಥ ರ್‍ಯಾಂಕ್ ಪಡೆದು ಬಿಟ್ಟರೆ- ಆನಂತರದಲ್ಲಿ ನಿಮ್ಮ ಚಿಕ್ಕ ಗೆಲುವೂ ಸುದ್ದಿಯಾಗುತ್ತದೆ. ಅದನ್ನು ಸಂಭ್ರಮಿಸಲೂ ಜನ ಸಿಗುತ್ತಾರೆ. ಅವನು ಬಿರ್ಲಿಯಂಟ್ ರೀ… ಕಷ್ಟಪಟ್ಟು, ಯಾರ ನೆರವಿಲ್ಲದೆ ಮೇಲೆ ಬಂದಿದ್ದಾನೆ ಅಂತೆಲ್ಲ ಹೊಗಳಿ ನಿಮ್ಮನ್ನು ಸ್ವೀಕರಿಸುತ್ತಾರೆ. ನೀವು ಏನು ಹೇಳಿದರೂ ಆ ಮಾತಿಗೇ ಮೊದಲ ಮಣೆ. ಅವನು ಸುಮ್ಮಸುಮ್ಮನೆ ಮಾತಾಡಲ್ಲ. ಏನಾದರೂ ಇದ್ದರೇನೇ ಮಾತೋಡೋದು ಎಂಬ ಪ್ರಶಂಸೆ ಬೇರೆ! ಇದೆಲ್ಲ ಸಿಗೋದು, ಕಷ್ಟಪಟ್ಟು ಮೇಲೆ ಬಂದಿದ್ದಾನೆ ರೀ.. ಅನ್ನೋ ಸರ್ಟಿಫೀಕೆಟ್‌ನಿಂದ. ಎಷ್ಟೋ ಸಲ, ತಪ್ಪು ನಿರ್ಧಾರಗಳಿಂದಲೋ, ತಪ್ಪು ನಡವಳಿಕೆಗಳಿಂದಲೋ ಬದುಕೇ ಡೋಲಾಯಮಾನವಾಗಿ ಬಿಡುತ್ತದೆ. ಆಗೆಲ್ಲ ಹಳಿ ತಪ್ಪುವ ಮೊದಲೇ ಅದನ್ನು ಸರಿದಾರಿಗೆ ತರುವ ಪ್ರಯತ್ನ ನಿರಂತರವಾಗಿದ್ದರೆ ಮುಂದೆ ಎದುರಾಗುವ ಬಂಡೆಯಂಥ ಕಷ್ಟಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲಬಹುದು. ಆ ಕ್ಷಣ, ನಾವು ಸೋಲಲಿ ಗೆಲ್ಲಲಿ. ಬದುಕೆಂಬ ಮೇಷ್ಟ್ರು ಮಾಡುವ ಪಾಠವನ್ನು ಕೇಳಿಸಿಕೊಳ್ಳಬೇಕು. ಅದನ್ನು ಜಾರಿ ಮಾಡಲೇಬೇಕು.
ಆಗ ಬದುಕು ಸುಂದರ ಅನಿಸತೊಡಗುತ್ತದೆ. ಈ ಸುಂದರ ಜೀವನವನ್ನು ಪರೀಕ್ಷೆ ಮಾಡಲು ಆಗಾಗ ಕಠಿಣ ಸಂದರ್ಭಗಳು ಬರುತ್ತಲೇ ಇರುತ್ತವೆ. ಆಗೆಲ್ಲಾ, ತಾಳ್ಮೆಯಿಂದ ವರ್ತಿಸಬೇಕು. ಸಮಸ್ಯೆಗಳಿಂದ ಬಿಡಿಸಿಕೊಳ್ಳದೇ ಇದ್ದರೆ, ಮತ್ತೆ ಬದುಕಿನ ಮೇಲೆ ಬರೆ ಎಳೆದು ಕೊಳ್ಳಬೇಕಾಗುತ್ತದೆ. ಸಮಸ್ಯೆಗಳ ಬಲೆಯನ್ನು ಬಿಡಿಸುವ ಕಲೆ ಹೇಳಿಕೊಡುವುದು ಕೂಡ ಬದುಕು ಎಂಬ ಮೇಷ್ಟ್ರೇ ಅನ್ನೋದನ್ನು ಮರೆಯಬಾರದು. ನಿಮಗೆ ಗೊತ್ತಿರಲಿ, ಈ ಬದುಕಲ್ಲಿ ಎಲ್ಲವೂ ಉಚಿತವಾಗಿ ದೊರೆಯುವುದಿಲ್ಲ. ಅದಕ್ಕಾಗಿ ಎಲ್ಲರೂ ಒಂದಿಷ್ಟು ಬೆಲೆ ತೆರಲೇಬೇಕು. ಈ ಮೂಲಕ ಗಳಿಸಿದ ನೆಮ್ಮದಿ ಇದೆಯಲ್ಲ, ಅದರ ಸವಿಯೇ ಬೇರೆ. ಹೌದು, ನೆಮ್ಮದಿ ಅನ್ನೋದು ಯಾರೂ ತಂದು ಕೊಡುವಂಥದ್ದಲ್ಲ. ಬದುಕಿನಲ್ಲಿ ಸೆಮಿಸ್ಟರ್ ಗಳಂತೆ ಆಗಾಗ ಎದುರಾಗ್ತವಲ್ಲ ಕಷ್ಟಗಳು; ಅದರಲ್ಲಿ ಪಡೆದಿರುವ ಅಂಕಗಳೇ ನಮ್ಮ ನೆಮ್ಮದಿಯನ್ನು ನಿರ್ಧಾರ ಮಾಡೋದು. ಹೀಗಾಗಿ, ಬದುಕೆಂಬ ಮೇಷ್ಟ್ರು ಮಾಡುವ ಪಾಠವನ್ನು ಸರಿಯಾಗಿ ಗಮನಕೊಟ್ಟು ಕೇಳಬೇಕು.
ಜೀವನದ ಪರೀಕ್ಷೆಯಲ್ಲಿ ಗೆದ್ದೆನೆಂದು ಬೀಗಿದವರು ಯಾರೂ ಇಲ್ಲ. 100ಕ್ಕೆ 100 ಅಂಕ ಪಡೆಯುವುದು ಅಸಾಧ್ಯ. ಒಂದು ಗೆಲುವಿನ ಹಿಂದೆ ಸಾವಿರ ಕಣ್ಣೀರ ಹನಿಗಳು ಇರುತ್ತವೆ ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು. ಎಷ್ಟೋ ಸಲ ನಾವು ಮಾಡುವ ತಪ್ಪುಗಳಿಂದ, ಬದುಕು ಚೆಲ್ಲಾಪಿಲ್ಲಿಯಾಗುತ್ತದೆ. ಇದೊಂಥರ ಬಿಬಿಎಂಪಿಯ ಕಸದ ಡಪಿಂಗ್ ಯಾರ್ಡ್ ಇದ್ದಂತೆ. ಎಲ್ಲವನ್ನೂ ಸ್ವಚ್ಛಗೊಳಿಸುವ ಕಾರ್ಯ ಬದುಕನ್ನು ಹೊತ್ತ ನಮ್ಮದೇ. ಸ್ವಚ್ಛಗೊಳಿಸುವುದು ಹೇಗೆ ಅನ್ನೋದು ಕೂಡ ಬದುಕು ಕಲಿಸುವ ಪಾಠದಿಂದಲೇ ತಿಳಿಯೋದು.
ಒಂದಿಷ್ಟು ತಾಳ್ಮೆ, ಗಟ್ಟಿತನ, ಮೌನ, ವರ್ತನೆಗಳ ಅವಲೋಕನ, ನಡವಳಿಕೆಗಳಲ್ಲಿ ತಿದ್ದುಪಡಿ ಇವಿಷ್ಟನ್ನು ಒಂದಷ್ಟು ಕಾಲ ಅನುಸರಿಸಿದರೆ ನೆಮ್ಮದಿಯ ವಿಳಾಸ ಸಿಗಬಹುದು. ನೆಮ್ಮದಿ ವಿಳಾಸವನ್ನು ನಾವು ಹುಡುಕುತ್ತಿರುವಂತೆ ಅದೂ ನಮ್ಮನ್ನು ಅರಸುತ್ತಿರುತ್ತದೆ. ಅದು ಊರು ಕೇರಿ ಸುತ್ತಿ ನಮ್ಮ ಬಳಿಗೆ ಬರುವವರೆಗೂ ತಾಳ್ಮೆ ಬೇಕಷ್ಟೆ. ಸುಮ್ಮನೆ ಲೆಕ್ಕ ಹಾಕಿ. ಎಲ್ಲರ ಬದುಕಲ್ಲೂ ಸುಖದ ಅವಧಿ ಹೆಚ್ಚಿರಲ್ಲ. ಇದ್ದರೂ ಅಂಥವರ ಸಂಖ್ಯೆ ವಿರಳ. ಉದಾಹರಣೆಗೆ- ತಿಂಗಳಲ್ಲಿ ಮೂರು ದಿನ ಸುಖವಿದ್ದರೆ 27 ದಿನ ಕಷ್ಟವಿರುತ್ತದೆ. ಆದರೆ, ನಾವು ಮೂರು ದಿನಗಳ ಸುಖಕ್ಕಾಗಿಯೇ ಉಳಿದ ದಿನಗಳು ಕಷ್ಟ ಪಡ್ತೀವಿ. ಒಳ್ಳೆ ಟೈಂ ಬರ್ತದೆ ಬಿಡಯ್ನಾ… ಅಂತೆಲ್ಲ ಹೇಳ್ತಾರಲ್ಲ. ಅದೇ ಇದು. ನೆಮ್ಮದಿಯ ಬದುಕನ್ನು ತೀರ್ಮಾನ ಮಾಡುವುದು ನಮ್ಮ ವರ್ತನೆಗಳು. ಅದು ಸರಿ ಇದ್ದರೆ, ಪರಿಸ್ಥಿತಿಗೆ ತಕ್ಕಂತೆ ಬದಲಿಸಿಕೊಳ್ಳುವ ಮನೋಭಾವವಿದ್ದರೆ ನೆಮ್ಮದಿ ನಮ್ಮ ಮನೆಯ ರೆಗ್ಯುಲರ್ ಅತಿಥಿಯಾಗಿಬಿಡುತ್ತದೆ. ನಿಮ್ಮ ಮನೆಯಲ್ಲಿ ಇದೆಯಾ, ನೋಡಿಕೊಳ್ಳಿ…
-ಕೆ.ಜಿ