ನಮ್ಮ ಭಾರತ ದೇಶದಲ್ಲಿ ಬದುಕುತ್ತಿರುವ ನಾವೇ ಪುಣ್ಯವಂತರು ಎಂದು ಭಾವಿಸಬೇಕು. ಏಕೆಂದರೆ ನಮ್ಮ ದೇಶದಲ್ಲಿ ಇರುವ ಹಬ್ಬಗಳಾಗಲಿ, ಜೀವನ ಶೈಲಿಯಾಗಲಿ, ಆಹಾರ ಪದ್ದತಿಗಳಾಗಲಿ, ಸಾಧನೆ ಮಾಡಿದ ವ್ಯಕ್ತಿಗಳಾಗಲಿ ಬೇರೆ ಯಾವ ದೇಶದಲ್ಲಿಯೂ ಕಾಣ ಸಿಗುವುದಿಲ್ಲ. ನಮ್ಮ ದೇಶವು ವಿವಿಧತೆಯಿಂದ ಕೂಡಿರುವ ದೇಶವಾಗಿದೆ. ಇಲ್ಲಿ ಮಹತ್ತರ ಸಾಧನೆ ಮಾಡುವುದರ ಮೂಲಕ ಆದರ್ಶ ವ್ಯಕ್ತಿಯಾಗಿ ಹೊರಹಮ್ಮಿರುವ ಮಹಾಪುರುಷರಿಗಾಗಿಯೇ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತದೆ. ಇಲ್ಲಿ ಅಂತವರ ಜೀವನವನ್ನೆ ಮಾರ್ಗದರ್ಶನವಾಗಿ ಇಟ್ಟುಕೊಂಡು ತಮ್ಮ ಜೀವನವನ್ನು ನಿರೂಪಿಸಿಕೊಂಡವರು ಎಷ್ಟೋ ಜನರಿದ್ದಾರೆ. ಈ ಮಹಾಪುಷರಿಗೆ ಗೌರವನ್ನು ಸಲ್ಲಿಸುವ ಸಲುವಾಗಿಯೆ ಈ ಆಚರಣೆಗಳನ್ನು ಆಚರಿಸಲಾಗುತ್ತದೆ.
ಇಂದು ನಾವು ಜೀವನ ನಡೆಸುತ್ತಿರುವ ಶೈಲಿಗೂ ಅಂದು ಅವರು ಜೀವನ ನಡೆಸುತ್ತಿರುವ ಶೈಲಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತದೆ. ಇಂದು ನಮಗೆ ಸ್ವಲ್ಪ ಅವಮಾನವಾದರೆ, ಬದುಕಲು ಕಷ್ಟವಾದರೆ, ಸವಾಲುಗಳು ಎದುರಾದರೆ, ಜೀವನದಲ್ಲಿ ಸೋಲು, ನಷ್ಟಗಳಾದರೆ ಅವನೆಲ್ಲವನ್ನು ಎದುರಿಸಿ ಜೀವನ ಮುಂದೆ ನಡೆಸಿಕೊಂಡು ಹೋಗುವ ಶಕ್ತಿ ಕಡಿಮೆ ಪ್ರಮಾಣದಲ್ಲಿ ಇದೆಯೆಂದೇ ಹೇಳಬಹುದು. ಪ್ರಯತ್ನವನ್ನು ಪಡದೆ ಸಾಯುವ ಯೋಚನೆಗಳು ತಲೆಯಲ್ಲಿ ಬರುತ್ತವೆ.
ಆದರೆ ಹಿಂದೆ ಹಾಗಲ್ಲ ಅವರು ಎಷ್ಟೇ ಕಷ್ಟ, ನೋವು ಸವಾಲು ಸೋಲುಗಳು ಎದುರಾದರೂ ಅದರ ವಿರುದ್ಧವಾಗಿ ಹೋರಾಟವನ್ನು ನೆಡೆಸುತ್ತಿದ್ದರು. ತಾವು ಜೀವಿಸುವುದರ ಜೊತೆ ತಮ್ಮವರು ಜೀವನ ನಡೆಸಬೇಕು ಎಂಬ ಉದಾರ ಮನೋಭಾವನೆಯಿತ್ತು. ತಾವು ಶಿಕ್ಷಣ ಪಡೆದು ಅನಕ್ಷರಸ್ಥರಿಗೆ ಮಾಹಿತಿ, ಶಿಕ್ಷಣ, ಪಾಠ ಪ್ರವಚನ ನೀಡುತ್ತಿದ್ದರು, ಆ ಮೂಲಕವಾಗಿ ಎಲ್ಲರಲ್ಲಿಯೂ ಜಾಗೃತಿ ಮೂಡಿಸುತ್ತಿದ್ದರು. ಅವರ ಮಾತುಗಳಿಂದ, ಭಾಷಣಗಳಿಂದ ಸಮಾಜದಲ್ಲಿ ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿ ಪದ್ಧತಿ, ಜಾತಿ ಪದ್ಧತಿ ಇತ್ಯಾದಿಗಳ ಬಗ್ಗೆ ಹೋರಾಟ ತಿಳುವಳಿಕೆ ಜಾಗೃತಿ ಮೂಡಿತ್ತು.
ಭಾರತದಲ್ಲಿ ಮಹಾಪುರುಷರೆನಿಸಿಕೊಂಡ ಬುದ್ಧ, ವಾಲ್ಮೀಕಿ, ಕನಕದಾಸರು, ವಿವೇಕಾನಂದ, ಅಂಬೇಡ್ಕರ್, ಬಸವಣ್ಣ, ಮಹಾವೀರ, ಅಕ್ಕಮಹಾದೇವಿ, ಗಾಂಧಿ, ಅಲ್ಲಮ್ಮ ಪ್ರಭು ಹೀಗೆ ಮೊದಲಾದವರೂ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿ ಯಶಸ್ಸನ್ನು ಪಡೆದಿದ್ದಾರೆ. ಹಾಗೆಯೇ ಇಂದಿನ ಜನರಿಗೂ ಆದರ್ಶಪ್ರಾಯರಾಗಿದ್ದಾರೆ, ಅವರ ಜೀವನ ಶೈಲಿ, ಅವರ ನುಡಿಗಳು ಇಂದಿಗೂ ಪ್ರಸ್ತುತವಾಗಿದೆ. ನಾವು ಧೃತಿಗೆಟ್ಟಾಗ, ಮನಸ್ಸು ಹಾಳಾದಾಗ, ಕಷ್ಟದಲ್ಲಿ ಇರುವಾಗ, ಸೋಲನ್ನು ಅನುಭವಿಸಿದಾಗ ಈ ಮಹಾಪುರುಷರ ನುಡಿಗಳೇ ನಮಗೆ ಧೈರ್ಯವನ್ನು ತುಂಬುತ್ತದೆ. ಒಂದು ಆದರ್ಶ ಜೀವನ ನೆಡೆಸಲು ಇಂತಹ ವ್ಯಕ್ತಿಗಳೇ ನಮಗೆ ಗುರು. ನಾವು ಹಾಕಿಕೊಂಡ ಯೋಜನೆಯನ್ನು ತಲುಪಲು ನಮಗೆ ಒಳ್ಳೆಯ ದಾರಿಯನ್ನು ತೋರಿಸಿದವರು ಇವರೇ. ಹಾಗಾಗಿ ಇಂತಹ ಮಹಾಪುರುಷರ ಜಯಂತಿ ಎಲ್ಲರಿಗೂ ಸ್ಫೂರ್ತಿದಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಮಧುರ ಎಲ್ ಭಟ್ಟ,
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ