ಕೋಲಾರ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿರುವುದರಿಂದ ಕಳ್ಳಭಟ್ಟಿ ತಯಾರಿಕಾ ದಂಧೆ ಪ್ರಕರಣಗಳು ಬೆಳಕಿಗೆ ಬಂದಿವೆ. ಮದ್ಯವ್ಯಸನಿಗಳು ಇದನ್ನು ಸೇವಿಸಿ ಜೀವಕ್ಕೆ ಕುತ್ತು ತಂದುಕೊಳ್ಳದಿರಿ ಎಂದು ರಾಜ್ಯ ಅಬಕಾರಿ ಸಚಿವ ಎಚ್.ನಾಗೇಶ್ ಮನವಿ ಮಾಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳಬಟ್ಟಿ ತಯಾರಿಕೆಯನ್ನು ತಡೆಯಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಈಗಾಗಲೇ ಹಲವಾರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಳ್ಳಭಟ್ಟಿ ನಾಶಪಡಿಸಲಾಗಿದೆ ಎಂದು ತಿಳಿಸಿದರು. ಕ್ರಿಮಿನಲ್ ಪ್ರಕರಣ: ಲಾಕ್‌ಡೌನ್ ಆರಂಭದ ದಿನದಿಂದ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದ್ದು, ಲಾಕ್‌ಡೌನ್ ಮುಗಿಯುವ ಮುನ್ನಾ ದಾಸ್ತಾನು ಪುಸ್ತಕ ಪರಿಶೀಲನೆ ನಡೆಸಿದಾಗ ವ್ಯತ್ಯಾಸ ಕಂಡುಬಂದರೆ ಬಾರ್ ಲೈಸನ್ಸ್ ರದ್ದುಪಡಿಸುವುದರ ಜೊತೆಗೆ ಮಾಲಿಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಸೂಚಿಸಿರುವುದಾಗಿ ತಿಳಿಸಿದರು.
ಮಾಹಿತಿ ನೀಡಿದರೆ ಕ್ರಮ: ಹೆಂಡ, ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಕೆ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಸಾರ್ವಜನಿಕರು ನಿಖರ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋವಿಡ್ ವೈರಸ್ ನಿಯಂತ್ರಿಸಲು ಪ್ರಧಾನಿ ಮೋದಿ ಮಹತ್ತರ ತೀರ್ಮಾನ ಕೈಗೊಂಡು ಲಾಕ್‌ಡೌನ್ ಜಾರಿಗೆ ತಂದಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವೈರಸ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಕೋರಿದರು.
ಮಾಜಿ ಸಿಎಂ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ: ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ರಾಮನಗರ ಕಾರಾಗೃಹದಿಂದ ಖೈದಿಗಳನ್ನು ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಾರಾಗೃಹಕ್ಕೆ ವರ್ಗಾವಣೆ ಮಾಡುತ್ತಿರುವ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ, ಸರಕಾರಕ್ಕೆ ಏನು ಮಾಡಬೇಕೆಂಬ ಅರಿವಿದೆ. ಈ ಸಂದರ್ಭದಲ್ಲಿ ಯಾರು ಏನೂ ಮಾತನಾಡಿದರೂ ತಲೆಕೆಡಿಸಿ ಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ಲಾಕ್‌ಡೌನ್ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು, ಮಹಾಮಾರಿ ಕೋವಿಡ್ ವೈರಸ್ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.