Advertisement

ಕಲಬುರಗಿ ಪಾಲಿಕೆ ಪೌರ ಕಾರ್ಮಿಕರಿಗೆ “ಜೀವವಿಮೆ’ಭಾಗ್ಯ!

08:55 AM Aug 23, 2017 | Team Udayavani |

ಕಲಬುರಗಿ: ಇಲ್ಲಿಯ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ “ಜೀವವಿಮೆ’ ಭಾಗ್ಯ ದೊರಕಿಸಿದೆ. ಪೌರಕಾರ್ಮಿಕರಿಗೆ ಇಂತಹ ಯೋಜನೆಯನ್ನು ಜಾರಿಗೊಳಿಸಿರುವ ರಾಜ್ಯದಲ್ಲೇ ಪ್ರಥಮ ಮಹಾನಗರ ಪಾಲಿಕೆ ಇದಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿಗಳು ಜಾರಿಗೊಳಿಸಿರುವ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ (ವಿಮಾ) ಯೋಜನೆ ಹಾಗೂ
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪಾಲಿಸಿಯನ್ನು ಇಲ್ಲಿನ ಪಾಲಿಕೆ ಪೌರ ಕಾರ್ಮಿಕರ ಹೆಸರಿನಲ್ಲಿ ಈಗಾಗಲೇ ಮಾಡಿಸಿ ಪ್ರೀಮಿಯಂ ತುಂಬಲಾಗಿದೆ.

Advertisement

ಪೌರ ಕಾರ್ಮಿಕರಿಗೆ ಜೀವಕ್ಕೆ ಅಪಘಾತ ಎದುರಾದಲ್ಲಿ ಸಹಾಯಕ್ಕೆ ಬರುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ವಿಶೇಷ ಆಸಕ್ತಿ ವಹಿಸಿ ಈ ಯೋಜನೆ ಕಲ್ಪಿಸಿದ್ದಾರೆ. ಪೌರ ಕಾರ್ಮಿಕರಿಂದ ನಯಾ ಪೈಸೆ ಪಡೆಯದೆ
ಕಾರ್ಮಿಕರ ಕ್ಷೇಮಾಭಿವೃದಿಟಛಿ ನಿಧಿಯಡಿ ಇರುವ ಹಣವನ್ನೇ ಐದು ವರ್ಷಕ್ಕಾಗುವಷ್ಟು ಪ್ರೀಮಿಯಂ ಹಣವನ್ನು ಬ್ಯಾಂಕ್‌ನಲ್ಲಿ ಜಮಾ ಮಾಡಿ ಎಲ್ಲ ಕಾರ್ಮಿಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. 1024 ಪೌರ ಕಾರ್ಮಿಕರಿಗೆ ವರ್ಷಕ್ಕೆ 12
ರೂ. ಪ್ರೀಮಿಯಂ ತುಂಬುವ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪಾಲಿಸಿ ಮಾಡಿಸಿ 12 ಸಾವಿರ ರೂ.ಗಳನ್ನು ಈ ವರ್ಷದ ಪ್ರೀಮಿಯಂ ತುಂಬಿ ಬ್ಯಾಂಕ್‌ನಲ್ಲಿ 60 ಸಾವಿರ ರೂ. ಅಂದರೆ ಐದು ವರ್ಷದ ಪ್ರೀಮಿಯಂ ಹಣ ಜಮಾ
ಇಡಲಾಗಿದೆ. ಅದರಂತೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ (ವಿಮಾ) ಯೋಜನೆಯನ್ನು 300 ಪೌರ ಕಾರ್ಮಿಕರಿಗೆ 330ರೂ. ಪ್ರೀಮಿಯಂ ಮಾಡಿಸಿ ಈ ವರ್ಷ ಲಕ್ಷ ರೂ.ಗೂ ಹೆಚ್ಚು ಪ್ರೀಮಿಯಂ ತುಂಬಿ ಮುಂದಿನ ಐದು ವರ್ಷಗಳಿಗಾಗಿ 5 ಲಕ್ಷ ರೂ.ಗಳನ್ನು ಬ್ಯಾಂಕ್‌ನಲ್ಲಿ ಜಮಾ ಇಡಲಾಗಿದೆ.

ಕಾರ್ಮಿಕರು ಕೆಲಸ ಮಾಡುವಾಗ ಗಂಭೀರ ಗಾಯಗೊಂಡು ಕೈ ಕಾಲು ಕಳೆದುಕೊಂಡರೆ ಇಲ್ಲವೆ ಜೀವ ಕಳೆದುಕೊಂಡಲ್ಲಿ 2 ಲಕ್ಷ ರೂ. ಪರಿಹಾರ ದೊರೆಯುತ್ತದೆ. ಇದು ಬಡ ಪೌರ ಕಾರ್ಮಿಕರ ಕುಟುಂಬಕ್ಕೆ ಸ್ವಲ್ಪವಾದರೂ ಸಹಾಯವಾಗುತ್ತದೆ.

ಹುಮ್ಮಸ್ಸು ಹೆಚ್ಚಿದೆ: ಕೆಲವೊಮ್ಮೆ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತೇವೆ. ಒಮ್ಮೊಮ್ಮೆ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗುವ ಘಟನೆಗಳು ನಡೆದಿರುತ್ತವೆ. ಆದರೆ ಈಗ ನಮಗೆ ಜೀವವಿಮೆ (ಎಲ್‌ಐಸಿ) ಮಾಡಿಸಿರುವುದು ಸಂತಸ ತಂದಿದೆ. ಇದು ಕೆಲಸ ಮಾಡುವ ಹುಮ್ಮಸ್ಸು ಹೆಚ್ಚಿಸಿದೆ ಎಂದು ಪೌರ ಕಾರ್ಮಿಕರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರದಿಂದ ಈಗ ಬಂತು ಪತ್ರ: ಆರು ತಿಂಗಳ ಹಿಂದೆಯೇ ಪೌರ ಕಾರ್ಮಿಕರಿಗೆ ಜೀವ ಭಾಗ್ಯ ಯೋಜನೆ ಕಲ್ಪಿಸಲಾಗಿದೆ. ಆದರೀಗ ಸರ್ಕಾರ ಕಲಬುರಗಿ ಪಾಲಿಕೆಗೆ ಪತ್ರ ಬರೆದು ಪೌರ ಕಾರ್ಮಿಕರಿಗೆ ಜೀವವಿಮೆ ಭಾಗ್ಯ
ಕಲ್ಪಿಸಿ ಎಂಬುದಾಗಿ ತಿಳಿಸಿದೆ. ಇದಕ್ಕೆ ಪಾಲಿಕೆ ಆಯುಕ್ತರು, ಕಲಬುರಗಿ ಪಾಲಿಕೆಯಲ್ಲಿ ಈಗಾಗಲೇ ಕಾರ್ಯಾನುಷ್ಠಾನ ಮಾಡಲಾಗಿದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಪೌರ ಕಾರ್ಮಿಕರಿಗೆ ಬ್ಯಾಂಕ್‌ ಖಾತೆ ಮೂಲಕ ನೇರವಾಗಿ ಸಂಬಳ ಮಾಡುತ್ತಿರುವುದು ಸೇರಿ ಪೌರ ಕಾರ್ಮಿಕ ಸ್ನೇಹಿ ಯೋಜನೆ ಜಾರಿಗೆ ತಂದಿರುವ ಪಾಲಿಕೆಗೆ ಈಗ “ಜೀವವಿಮೆ ಭಾಗ್ಯ’
ಹೊಸದೊಂದು ಸೇರ್ಪಡೆ.

Advertisement

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next