ಕೊಪ್ಪಳ: ಮನುಷ್ಯನ ಜೀವನವೆಂಬುದು ಸಾಧನೆ ಮಾಡುವುದಲ್ಲ. ನಮ್ಮೊಳಗೆ ನಾವು ಶೋಧನೆ ಮಾಡಬೇಕು. ಆದರೆ ಇಂದಿನ ವ್ಯವಸ್ಥೆಯಲ್ಲಿ ನಾವೆಲ್ಲರೂ ಹೊರಗೆ ಮನುಷ್ಯರಂತೆ ನಟನೆ ಮಾಡುತ್ತಿದ್ದೇವೆ. ಆದರೆ ನಿಜವಾದ ಮನುಷ್ಯರಲ್ಲ. ಆದ್ದರಿಂದ ಪ್ರತಿಯೊಬ್ಬರು ಭಗವದ್ಗೀತೆ ಪಠಿಸಿದರೇ ಸಾಲದು, ಅದನ್ನು ಅನುಸರಿಸಬೇಕು ಎಂದು ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.
ತಾಲೂಕಿನ ಕಿಡದಾಳ ಗ್ರಾಮದಲ್ಲಿನ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ದೇಶವು ಮಮ್ಮಿ, ಡ್ಯಾಡಿ ಸಂಸ್ಕೃತಿಯಿಂದ ಹಾಳಾಗುತ್ತಿದೆ. ಶಾಲೆಗಳಲ್ಲಿ ನಾವು ಬದುಕು, ಸಂಸ್ಕಾರ ಕಲಿಸುತ್ತಿಲ್ಲ. ಇದರಿಂದ ಕಲಿಯುವ ಮಕ್ಕಳು ತಪ್ಪಾಗಿ ಬದುಕು ಸಾಗಿಸಲು ನಿರ್ಧರಿಸುತ್ತಾರೆ. ಆದ್ದರಿಂದ ಅವರಿಗೆ ನಾವು ಸಂಸ್ಕಾರ ಕೊಡಬೇಕಾಗಿದೆ.
ಪ್ರತಿಯೊಂದು ಶಾಲೆಯಲ್ಲೂ ಭಗವದ್ಗೀತೆಯ ಪಾಠವಾಗಬೇಕಾಗಿದೆ. ಪ್ರತಿದಿನ ಅರ್ಧ ಗಂಟೆಅದನ್ನು ಪಠಣ ಮಾಡಿ ಅನುಸರಿಸುವುದನ್ನು ಮಕ್ಕಳಿಗೆ ಕಲಿಸಿಕೊಡುವ ಅಗತ್ಯವಿದೆ ಎಂದರು.
ಭಾರತ ನಿರ್ಮಾಣವಾಗಿರುವುದು ಕಾಸು, ಬಂಗಾರ, ವಜ್ರದಿಂದಲ್ಲ, ಸಂಸ್ಕಾರದಿಂದ. ಆದ್ದರಿಂದ ಆ ಸಂಸ್ಕಾರವನ್ನು ನಾವು ಮಕ್ಕಳಿಗೆ ಕಲಿಸಬೇಕಾಗಿದೆ. ದುಡ್ಡು ಮಾಡುವುದು ದೊಡ್ಡದಲ್ಲ, ಮಾಡಿದ ದುಡ್ಡನ್ನು ಸಂಸ್ಕಾರಯುತವಾಗಿ ಹೇಗೆ ಬಳಕೆ ಮಾಡಬೇಕು ಎನ್ನುವುದು ಮುಖ್ಯ. ಕಲ್ಲು ದೇವರಿಗೆ ಅರ್ಧ ಕೆಜಿ ತುಪ್ಪ ಸುರಿಯುವ ಬದಲು ಬಡ ಮಕ್ಕಳಿಗೆ ಆ ತುಪ್ಪ ನೀಡಿದರೇ ಅದುವೇ ಸಂಸ್ಕಾರ. ಆದರೆ, ನಾವು ಅದನ್ನು ಮಾಡುತ್ತಿಲ್ಲ. ಸಂಸ್ಕಾರ ನೀಡುವಾಗಲು ತಾರತಮ್ಯ ಮಾಡಲಾಗುತ್ತದೆ ಎಂದರು.
ಯಾವ ದೇವರು ಸಹ ನಮಗೆ ಬಂಗಾರದ ಕಳಸ ಮಾಡಿಸಿ, ಗೋಪುರ ಕಟ್ಟಿಕೊಡಿ ಎಂದು ಕೇಳಿಲ್ಲ. ನೀವು ಮಾಡುವ ತಪ್ಪಿನಿಂದಾಗಿ ಇಂದು ದೇವರ ಬಗ್ಗೆ ತಪ್ಪು ಕಲ್ಪನೆ ಮೂಡಿದೆ. ಯಾವ ದೇವರು ಸಹ ಇದನ್ನು ಕೊಡಿ ಎಂದು ಕೇಳುವುದೇ ಇಲ್ಲ. ಇದನ್ನು ಭಗವದ್ಗೀತೆ ಹೇಳುತ್ತದೆ. ಆದರೆ ನಾವು ಅದನ್ನು ಅನುಸರಿಸದೆ ಅದನ್ನು ತಪ್ಪಾಗಿ ಅರ್ಥೈಸಿ, ತಪ್ಪು ಸಂದೇಶ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಯುವ ಮೋರ್ಚಾದಿಂದ ಸ್ವತ್ಛತಾ ಕಾರ್ಯಕ್ರಮ
ಉತ್ತರ ಕರ್ನಾಟಕದಲ್ಲಿ ಇಂದಿಗೂ ದಾಸೋಹ ಪರಂಪರೆಯಿದೆ. ಇದರಿಂದ ಇಲ್ಲಿ ದೇವರು ನೆಲೆಸಿದ್ದಾನೆ. ಇಂತಹ ದಾಸೋಹ ಪರಂಪರೆ ತೀರಾ ಅಗತ್ಯವಾಗಿದೆ. ನಿಮ್ಮ ದುಡಿಮೆಯಲ್ಲಿ ಒಂದಿಷ್ಟು ಪಾಲನ್ನು ದಾಸೋಹ ಅಥವಾ ಬಡ ಮಕ್ಕಳ ಕಲ್ಯಾಣಕ್ಕೆ ಮೀಸಲು ಇಟ್ಟರೆ ಅದುವೇ ನಿಜವಾದ ಸೇವೆ. ಪಾಲಕರೂ ಮಕ್ಕಳಿಗೆ ಬದುಕಿನ ಮೌಲ್ಯಗಳ ಪಾಠ ಹೇಳಿಕೊಡಬೇಕು. ಯಾವುದು ಮಾಡಬೇಕು ಯಾವುದು ಮಾಡಬಾರದು ಎನ್ನುವುದನ್ನು ತಿಳಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಚಕ್ರವರ್ತಿ ಅವರು ಶ್ರೀವಿನಯ ಗುರೂಜಿ ಅವರು ಪರಿಚಯಿಸಿದರು. ಆಡಳಿತ ಮಂಡಳಿಯ ಸಂಸ್ಥಾಪಕ ವಿ.ಆರ್. ಪಾಟೀಲ್, ಎಸ್.ಆರ್. ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.