ಬೆಳಗಾವಿ: ನಾನೇಕೆ ಮಡದಿ ಮಾತನ್ನು ಕೇಳಬೇಕೆಂಬ ಅಹಂ ಬಿಟ್ಟು. ಸಾಮರಸ್ಯದ ಬದುಕಿಗೆ ಬೇಕಾಗುವಷ್ಟು ಮಡದಿ ಮಾತನ್ನು ಕೇಳಬೇಕು. ಯಾವ ಮಾತನ್ನು ಕೇಳಬೇಕು, ಕೇಳಬಾರದೆಂಬ ಪ್ರಜ್ಞೆ ಪತಿಯಲ್ಲಿರಬೇಕು. ಪತ್ನಿಯೂ ಸಹ ಎಲ್ಲ ಮಾತನ್ನು ಪತಿ ಕೇಳಲೇಬೇಕೆಂಬ ಹಠವಿರಬಾರದು ಒಟ್ಟಿನಲ್ಲಿ ಪತಿ, ಪತ್ನಿಯರ ನಡುವಿನ ಹೊಂದಾಣಿಕೆಯೇ ಜೀವನ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಹೇಳಿದರು.
ನಗರದ ಹಾಸ್ಯಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿಂದವಾಡಿಯ ಐ.ಎಮ್.ಇ.ಆರ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಡದಿ ಮಾತು ಕೇಳಬೇಕೆ? ಎಂಬ ಹರಟೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರು, ಮಡದಿ ಮಾತು ಕೇಳಬೇಕೆ ಎನ್ನುವ ಹರಟೆಯಲ್ಲಿ ನಮಗೆ ಸಿಗುವುದು ಅರ್ಧಸತ್ಯ. ಪತಿ ಪತ್ನಿ ನಡುವಿನ ನಗೆಹನಿಗಳು ನಮಗೆ ಧಾರಾಳವಾಗಿ ಸಿಗುತ್ತವೆ. ಪತಿ ಪತ್ನಿಯರ ನಡುವಿನ ನಂಬಿಕೆಯೇ ಜೀವನ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಂ. ಎಸ್ .ಇಂಚಲ ಮಾತನಾಡಿ, ಸಂಸಾರ ಸಾಗರ ಸುಗಮವಾಗಿ ಸಾಗಲು ಸಂಸಾರ ಸಸಾರವಾಗಲು ತೆಪ್ಪಗಿರಬೇಕು, ಮಡದಿ ಮಾತನ್ನು ಕೇಳಲೇ ಬೇಕು ಎಂದು ಹೇಳಿದರು.
ಎಲ್ಲರೂ ಮಡದಿ ಮಾತನ್ನು ಕೇಳುವವರೇ, ಸ್ವಪ್ರತಿಷ್ಠೆಯಿಂದ ಕೇಳದವರಂತೆ ನಟನೆ ಮಾಡುತ್ತಾರೆ ಅಷ್ಟೇ. ಮನೆ ನಂದಾದೀಪ ಬೆಳಗಲು ಬಂದಿರುವ ಮಡದಿ ಮಾತು ಕೇಳುವುದು ಅತ್ಯವಶ್ಯ. ವರನಟ ಡಾ. ರಾಜಕುಮಾರು, ಇನ್ಫೊಧೀಸಿಸ್ ನಾರಾಯಣಮೂರ್ತಿ ಮುಂತಾದ ಖ್ಯಾತನಾಮರ ಯಶಸ್ಸಿನ ಹಿಂದಿರುವ ಶಕ್ತಿಯೆಂದರೆ ಅವರ ಪತ್ನಿಯರು. ಇವರು ಯಾವ ಅಹಂಗೆ ಒಳಗಾಗದೇ ಮಡದಿ ಮಾತು ಕೇಳಿದ್ದರಿಂದಲೇ ಇಷ್ಟೆಲ್ಲ ಸಾಧಿ ಸಲು ಸಾಧ್ಯವಾಯಿತು ಎಂದು
ಗುಂಡೇನಟ್ಟಿ ಮಧುಕರ, ಎಂ. ಬಿ. ಹೊಸಳ್ಳಿ, ಅನುರಾಧಾ ಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗಂಡನಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಮಡದಿ ಮಾತು ಕೇಳಿ ತನ್ನ ವ್ಯಕ್ತಿತ್ವ ಏಕೆ ಹಾಳು ಮಾಡಿಕೊಳ್ಳಬೇಕು. ಮಾತು ಕೇಳುವುದರಿಂದ ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯೇ ಹೆಚ್ಚು. ಜೀವನದಲ್ಲಿ ಸಾಧಿಸಲು ಮಡದಿ ಮಾತು ಕೇಳಲೇಬೇಕೆಂದಿಲ್ಲ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೋದಿ, ವಾಜಪೆಯಿ, ಕಲಾಂ ಮುಂತಾದವರು. ಅದಕ್ಕಾಗಿ ಮಡದಿ ಮಾತನ್ನು ಕೇಳಬಾರದೆಂದು ಜಿ. ಎಸ್. ಸೋನಾರ, ಅಶೋಕ ಮಳಗಲಿ, ಡಾ. ಶೈಲಜಾ ಕುಲಕರ್ಣಿ ತಮ್ಮ ವಾದ ಮಂಡಿಸಿದರು. ಧನಲಕ್ಷ್ಮೀ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ಹಣ್ಣಿಕೇರಿ ಸ್ವಾಗತಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.