Advertisement

ಹೊಂದಾಣಿಕೆಯಿಂದ ಜೀವನ ಸುಖಮಯ

06:03 AM Feb 11, 2019 | Team Udayavani |

ದಾವಣಗೆರೆ: ನವ ದಂಪತಿ ಪರಸ್ಪರ ಕಷ್ಟ-ಸುಖದಲ್ಲಿ ಸಹನೆಯಿಂದ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸಿದ್ದಲ್ಲಿ ಬದುಕು ಸಾರ್ಥಕವಾಗುತ್ತದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ಭಾನುವಾರ ಹದಡಿ ರಸ್ತೆಯ ಎಂ.ಬಿ. ರೈಸ್‌ಮಿಲ್‌ ಆವರಣದಲ್ಲಿ ಭೀಮಸಮುದ್ರದ ಶ್ರೀ ಜಿ. ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ನವ ದಂಪತಿ ಆರಂಭದಲ್ಲಿ ಖುಷಿಯಾಗಿದ್ದು, ಕಾಲಾಂತರದಲ್ಲಿ ಭಿನ್ನಾಭಿಪ್ರಾಯದಿಂದ ದೂರವಾಗುವ ಚಿಂತನೆ ಮಾಡಬಾರದು. ಇಬ್ಬರೂ ಪರಸ್ಪರರ ಸಂತಸ, ದುಃಖದಲ್ಲಿ ಒಂದಾಗಿ, ಸಹನೆಯಿಂದ ವರ್ತಿಸುತ್ತಾ ಧೈರ್ಯದಿಂದ ಜೀವನ ಸಾಗಿಸಬೇಕು. ಆಗ ಜೀವನ ಸುಖಮಯವಾಗಿರುತ್ತದೆ ಎಂದರಲ್ಲದೇ, ನವ ವಧು ಹುಟ್ಟಿದ ಮನೆಗೂ, ಗಂಡನ ಮನೆಗೂ ಕೀರ್ತಿ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ಜೀವನವೆಂದರೆ ಕೀರ್ತಿ ತರುವುದು, ಸಾಧನೆ ಮಾಡುವುದಾಗಿದೆ. ಬಸವಾದಿ ಶರಣರು, ಪೈಗಂಬರ್‌, ಬುದ್ಧ, ಅಂಬೇಡ್ಕರ್‌ ಮೊದಲಾದ ದಾರ್ಶನಿಕರು, ಚಿಂತಕರು, ಶರಣರು ಕಾಯಕ ನಿಷ್ಠೆಯಿಂದಲೇ ಉತ್ತಮ ಸಮಾಜಮುಖೀ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಕೂಡ ತಮ್ಮ ಉಸಿರು ಇರುವವರೆಗೂ ರೂಢಿಸಿಕೊಳ್ಳಬೇಕು. ಒಳ್ಳೆಯ ಆಲೋಚನೆ ಮಾಡುತ್ತಾ ಸತ್ಕಾರ್ಯ ಮಾಡಬೇಕು. ಆಗ ಸಮಾಜದಲ್ಲಿ ಕೀರ್ತಿ, ಹೆಸರು ದೊರೆಯುತ್ತದೆ ಎಂದು ಹೇಳಿದರು.

ಯಾರು ಜನನಾಯಕ ಆಗಿರುತ್ತಾರೋ ಅಂಥವರು ಸಮಾಜದ ಜನರ ಕಷ್ಟಗಳಿಗೆ ಸುಲಭವಾಗಿ ಸಿಗುವಂತಾಗಬೇಕು. ಅಂತಹ ಕೆಲಸವನ್ನು ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾಡುತ್ತಾ ಬಂದಿದ್ದಾರೆ. ಜೊತೆಗೆ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ, ಬಡವರ ವೆಚ್ಚವನ್ನು ಕಡಿಮೆ ಮಾಡುವ ಸಾಮೂಹಿಕ ವಿವಾಹ ಏರ್ಪಡಿಸುತ್ತಿದ್ದಾರೆ. ಇಂತಹ ಜನನಾಯಕರಾದ ಜಿ.ಎಂ. ಸಿದ್ದೇಶ್ವರ್‌ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೂಮ್ಮೆ ವಿಜಯೋತ್ಸವ ಆಚರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಚಿತ್ರದುರ್ಗದ ಮಾದಾರ ಗುರುಪೀಠದ ಶ್ರೀ ಬಸವ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಕಳೆದ ನಾಲ್ಕೈದು ದಶಕಗಳ ಹಿಂದೆ ಸಾಮೂಹಿಕ ವಿವಾಹ ಎಂದರೆ ಜನರಲ್ಲಿ ಕೀಳರಿಮೆ ಭಾವವಿತ್ತು. ಆದರಿಂದು ಯಾವುದೇ ಜಾತಿ, ಧರ್ಮ, ವರ್ಗ, ಪಂಥ, ಭೇದವಿಲ್ಲದ ಭಾವೈಕ್ಯತಾ ವೇದಿಕೆಯಾಗಿವೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಬಡಜನರಿಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ ಎಂದರು.

ಜೀವನದಲ್ಲಿ ಬರೀ ಸಂಪತ್ತಿನ ಕ್ರೋಡೀಕರಣ ಮಾಡಿದರೆ ಸಾಲದು. ಅದರ ಒಂದಿಷ್ಟು ಭಾಗವನ್ನು ಸಮಾಜದ ಒಳಿತಿಗೂ ಮೀಸಲಿಡಬೇಕು. ಅಂತಹ ಕಾರ್ಯವನ್ನು ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾಡುತ್ತಾ ಬಂದಿದ್ದು, ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ಜನನಾಯಕರನ್ನು ಮಧ್ಯಕರ್ನಾಟಕ ದಾವಣಗೆರೆ ಜನರು ಸೋಲಿಲ್ಲದ ನಾಯಕರನ್ನಾಗಿ ಮಾಡಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ನಮ್ಮ ತಂದೆ-ತಾಯಿ ಹೆಸರಿನ ಟ್ರಸ್ಟ್‌ನಿಂದ 2006ರಿಂದಲೂ ಸಾಮೂಹಿಕ ವಿವಾಹ ಮಾಡುತ್ತಾ ಬರಲಾಗಿದೆ. ಈ ಬಾರಿ 44 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಲಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ಪುಸ್ತಕ, ಬ್ಯಾಗ್‌ ವಿತರಣೆ, ಆರೋಗ್ಯ ಸೇವೆ, ಐಎಎಸ್‌. ಕೆಎಎಸ್‌ನಂತಹ ಸ್ಪರ್ಧಾತ್ಮ ಪರೀಕ್ಷೆಗೆ ಓದುವ ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.

ನವ ದಂಪತಿಗಳು ಅನೋನ್ಯವಾಗಿ ಪ್ರೀತಿ, ವಿಶ್ವಾಸದಿಂದ ಬಾಳಿ. ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಸಾಕಿ ಸಲುಹಿದ ಪೋಷಕರನ್ನು ವೃದ್ಧಾಶ್ರಮಗಳಿಗೆ ತಳ್ಳದೇ ನಿಮ್ಮ ಜೊತೆ ಇಟ್ಟಕೊಂಡು ಪ್ರೀತಿಯಿಂದ ನೋಡಿಕೊಳ್ಳಿ ಎಂದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌, ಗಾಯತ್ರಿ ಸಿದ್ದೇಶ್ವರ್‌, ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಕರುಣಾಕರ್‌ರೆಡ್ಡಿ, ಎಸ್‌.ವಿ. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಶಾಸಕ ಬಿ.ಪಿ. ಹರೀಶ್‌, ಡಾ| ಎ.ಎಚ್. ಶಿವಯೋಗಿಸ್ವಾಮಿ, ಜಿ.ಎಂ. ಲಿಂಗರಾಜ್‌, ಪ್ರಭುದೇವ್‌, ಅನಿಲ್‌ಕುಮಾರ್‌, ಪ್ರಸಾದ್‌, ಹನಗವಾಡಿ ವೀರೇಶ್‌, ಸಮಿತಿ ಅಧ್ಯಕ್ಷ ಕೆ.ಬಿ. ಶಂಕರ್‌ನಾರಾಯಣ್‌, ಡಾ| ನಾಗಪ್ಪ ಕಡ್ಲಿ, ಏಕನಾಥ್‌ ಡಿ. ರಾಯ್ಕರ್‌, ವಿಜಯ್‌ಕುಮಾರ್‌, ಎಸ್‌. ಆದಿನಾಥ್‌, ವಿನಾಯಕ ರಾನಡೆ, ಬಿ.ಎಸ್‌. ಜಗದೀಶ್‌, ಕೊಂಡಜ್ಜಿ ಜಯಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next