ದಾವಣಗೆರೆ: ಮನುಷ್ಯನ ಕ್ರೌರ್ಯ, ದಾಳಿಯಿಂದ ಪರಿಸರದಲ್ಲಿಂದು ತಲ್ಲಣ ಉಂಟಾಗುತ್ತಿದೆ ಎಂದು ಯುಎನ್ ಇಪಿ ಪರಿಸರ ಪ್ರಶಸ್ತಿ ಪುರಸ್ಕೃತ, ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಹೇಳಿದ್ದಾರೆ. ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ಶುಕ್ರವಾರ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಉದ್ಘಾಟಿಸಿ, ಮಾತನಾಡಿದರು.
ಪರಿಸರ ದಿನಾಚರಣೆ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯ ಪರಿಸರ ಸಂರಕ್ಷಿಸುವ, ಬೆಳೆಸುವ ವಿಷಯದಲ್ಲಿ ಕಾಳಜಿ ವಹಿಸಬೇಕು. ವೇದಿಕೆಗಳ ಭಾಷಣ ಆಚರಣೆಗೆ ತರಬೇಕಿದೆ ಎಂದರು. ಮನುಷ್ಯ ಆರೋಗ್ಯಕರ ಜೀವನ ನಡೆಸುವಂತೆ ಆಗಬೇಕಾದರೆ ಸುತ್ತಮುತ್ತಲ ಪರಿಸರ ಸದಾ ಅಹ್ಲಾದಕರವಾಗಿರಬೇಕು.
ನಮ್ಮ ದೇಶ ವೈವಿಧ್ಯತೆ ಮೈಗೂಡಿಸಿಕೊಂಡಿದೆ. ಕಾಡು, ನದಿ, ಬೆಟ್ಟ, ಗುಡ್ಡ, ಪರ್ವತ ಎಲ್ಲಾ ರೀತಿಯ ಅಂಶಗಳು ನಮ್ಮ ದೇಶದ ಪರಿಸರದಲ್ಲಿವೆ. ಯಾರೇ ಆಗಲಿ, ಒಮ್ಮೆ ಪರಿಸರ ಆಸ್ವಾದಿಸಿದರೆ ಜೀವನ ಉತ್ಸಾಹ ಹಿಗ್ಗಿ ಬರುವಷ್ಟು ಉತ್ತಮ ಪರಿಸರ ನಮ್ಮ ದೇಶದಲ್ಲಿದೆ. ಇದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ಅವರು ತಿಳಿಸಿದರು.
ಸಂಘ, ಸಂಸ್ಥೆ, ಯುವಕರು ಪರಿಸರದ ಕುರಿತು ಕಾಳಜಿ ಬೆಳಸಿಕೊಳ್ಳಬೇಕು. ಪರಿಸರ ಇಲ್ಲದೆ ಬದುಕು ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು. ಬರೀ ದೊಡ್ಡ ದೊಡ್ಡ ಕಟ್ಟಡ ಕಟ್ಟಿ, ಪರಿಸರ ನಾಶಮಾಡಿದರೆ ಮುಂದೆ ಬದುಕಲು ಸಾಧ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗಲಿದೆ ಎಂದು ಅವರು ಎಚ್ಚರಿಸಿದರು.
ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ rನ ಎಂ.ಬಿ. ಸೋಮಶೇಖರಗೌಡ, ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ, ನೂತನ ಪಿಯು ಕಾಲೇಜಿನ ಆಡಳಿತಾಧಿಕಾರಿ ಎಸ್. ಹಾಲಪ್ಪ, ನಿವೃತ್ತ ಪ್ರಾಂಶುಪಾಲ ಎಚ್.ವಿ. ವಾಮದೇವಪ್ಪ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ಯರ್ರಿಸ್ವಾಮಿ ಇತರರು ವೇದಿಕೆಯಲ್ಲಿದ್ದರು.