ಮನಸ್ಸು-ಬುದ್ಧಿ ಸಿಂಕ್ರನೈಸ್ ಆಗ್ತಿಲ್ಲ. ನೀನು ಎದುರಿಗೆ ಇದ್ದಾಗ ನಿನ್ನ ನ್ನು ಅದೆಷ್ಟು ಗೋಳು ಹುಯೊಳ್ತೀನಿ? ಪಾಪ, ನೀನು ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ತೀಯ. ಅದನ್ನೆಲ್ಲ ನೆನೆದರೆ ನನ್ನ ಮೇಲೆ ನನಗೇ ಸಿಟ್ಟು…
ಒಂದು ವಾರವಾಯ್ತಲ್ಲ ನೀನು ಊರು ಬಿಟ್ಟು ? ಯಾಕೋ ಬೇಸರವಾಗ್ತಿದೆ, ನನ್ನ ಕೀಟಲೆಯನ್ನು ನಗುನಗುತ್ತಲೇ ಸ್ವಾಗತಿಸಿ, ಸ್ವೀಕರಿಸುವವನು ನೀನೊಬ್ಬನೇ ಕಣೋ. ಕಾಲೇಜಿನಲ್ಲಿ ಲೆಕ್ಚರ್ಸ್ ಪಾಠ ತಲೆಗೆ ಹೋಗ್ತಿಲ್ಲ, ಮೊನ್ನೆ ಕ್ಯಾಂಟೀನಿನಲ್ಲಿ ತಿಂಡಿನೂ ರುಚಿಸಲಿಲ್ಲ, ಜ್ವರ ಬಂದಿತ್ತಾ ಅಂದ್ರೆ ಇಲ್ಲ, ಅದೆಲ್ಲ ಏನಿಲ್ಲ, ಇಡ್ಲಿಯನ್ನ ಸಾಂಬಾರಿನಲ್ಲಿ ಅದ್ದೋ ಬದಲು ಕಾಫೀಲಿ ಅದ್ದಿದ್ದೆ! ಹೀಗಾದಾಗ, ತಿಂಡಿ ಹೇಗೆ ರುಚಿಸುತ್ತೆ ಹೇಳು ?
ಮನದೊಳಗೆ ನಿನ್ನನ್ನು ಇಟ್ಕೊಂಡು ಹೊರ ಬದುಕಲ್ಲಿ ಒಬ್ಬಂಟಿ ಆದ ಪರಿಣಾಮ ಇದು.
ನಿಜ, ಮನಸ್ಸು ಬುದ್ಧಿ ಸಿಂಕ್ರನೈಸ್ ಆಗ್ತಿಲ್ಲ. ನೀನು ಎದುರಿಗೆ ಇದ್ದಾಗ ನಿನ್ನನ್ನ ಅದೆಷ್ಟು ಗೋಳು ಹುಯೊಳ್ತೀನಿ? ಪಾಪ, ನೀನು ಎಲ್ಲವನ್ನು ಮೌನವಾಗಿ ಸಹಿಸಿಕೊಳ್ತೀಯ. ಅದನ್ನೆಲ್ಲ ನೆನೆದರೆ ನನ್ನ ಮೇಲೆ ನನಗೇ ಸಿಟ್ಟು. ಈವರೆಗೆ ನಿನ್ನಿಂದ ಒಂದು ಮೆಸೇಜ್, ಕಾಲ್, ಇಲ್ಲ ನೋಡು, ಅದೇ ಕಾರಣಕ್ಕೆ ದಿನವೆಲ್ಲ ಸಪ್ಪೆ,ಸಪ್ಪೆ.
ಅಚಾನಕ್, ಈ ಮನಸ್ಸು ಚಿಕ್ಕ ಚಿಕ್ಕ ಸಂಗತಿಗಳಿಗೂ ನಿನ್ನನ್ನೇ ನೆನೆನೆನೆದು ಸೋಲುತ್ತಿದೆ. ಹಾದಿಯಲಿ ಚೆಲ್ಲಿದ್ದ ಕಿರುನಗೆಯ ಕಂಡಾಗ ನಿನ್ನ ನೆನಪೇಕೆ ಬಂತು? ಉತ್ತರ ನಿನಗೆ ಮಾತ್ರ ಗೊತ್ತು ? ನಿನ್ನ ಪರಿಚಯವಾದಾಗಿನಿಂದ ಇಷ್ಟು ದೀರ್ಘಕಾಲ ನಿನ್ನ ದನಿಗೆ ದೂರವಾಗಿ ಇದ್ದದ್ದೇ ಇಲ್ಲ. ನಿರೀಕ್ಷೆಯಂತೆ, ನಾಳೆ ವಾಪಸಾಗಬೇಕು. ಇವತ್ತೇ ಬಂದರೆ ಎಷ್ಟು ಚಂದ ! ಬಂದ ಕೂಡಲೇ ಕರೆ ಮಾಡು, ಇಲ್ಲಿ ವಿಪರೀತ ಮಳೆ, ಕೊಡೆ ತಗೊಂಡು ಬಸ್ ಸ್ಟಾಂಡ್ ಗೆ ಬರ್ತೀನಿ. ಹೀಗೆ ನಿನ್ನದೇ ದನಿಯಿಂದ ಮನದ ಪುಟದಲ್ಲಿ ಗೀಚುತ್ತಿರುವಾಗ ಕರೆಗಂಟೆ ಡಿಂಗ್ ಡಾಂಗ್ ಎಂದಿತು. “ಛೇ, ಕನಸು ಕಾಣಲೂ ಬಿಡಲ್ವಲ್ಲ ಕಿರಾತಕರು’ ಎನ್ನುತ್ತಾ ಬಾಗಿಲು ತೆಗೆದಾಗ, ಹಿತವಾದ ಅಚ್ಚರಿ!
ನಾನು ಬಂದು ಎರಡು ತಾಸಾಯ್ತು, ಟವರ್ ಡೌನ್, ಮೊಬೈಲ್‌ನಲ್ಲಿ ಸಿಗ್ನಲ್ ಕಡ್ಡಿಗಳೇ ಮಾಯ, ಈಗ ಕಡ್ಡಿ ಮಿಣುಕುತ್ತಲೇ ಮೆಸೇಜ್ ಹಾಕೆª, ನಿನ್ನನ್ನು ತಲುಪಿತೋ ಇಲ್ವೋ, ಅದಕ್ಕಿಂತ ಮೊದಲು ನಾನೇ ಬಂದೆ ಅನ್ಸುತ್ತೆ… ಮಿಂಚಿನಂತೆ, ಮಾಯದಂತೆ, ಮೇಘದಂತೆ, ಹೂವಿನಂತೆ ಬಳಿ ಬಂದು ಸಾವಧಾನದಿಂದ ಹೇಳಿದ್ದೆ ನೀನು. ನಿನ್ನ ದನಿಯಲ್ಲಿ ಅದೇ ಆತ್ಮೀಯತೆ, ಅದೇ ಸಡಗರ, ಅದೇ ನಗುಮೊಗ! ನಿಮಿಷಗಳ ಹಿಂದೆ ಬಾಡಿದ್ದ ನನ್ನ ಜೀವ ಒಮ್ಮೆಲೇ ಕಳೆಗಟ್ಟಿತು.
ಕೆ.ವಿ.ರಾಜಲಕ್ಷ್ಮೀ