Advertisement

ವೃತ್ತಿ ವ್ರತವಾದಾಗ ಬದುಕು ಸುಂದರ: ಸಂಸದ

09:48 AM Mar 12, 2018 | |

ಮೂಡಬಿದಿರೆ: ಎಲ್ಲ ವೃತ್ತಿಗಳೂ ಸಮಾನವಾಗಿ ಗೌರವಾರ್ಹ. ವೃತ್ತಿ ವ್ರತವಾದಾಗ ವ್ಯವಸ್ಥೆ ಸುಂದರವಾಗಿರುತ್ತದೆ. ವ್ಯವಸ್ಥೆ ಸುಂದರವಾಗಿದ್ದಾಗ ನಮ್ಮ ಬದುಕು ಸುಂದರವಾಗಿರಲು ಸಾಧ್ಯವಾಗುತ್ತದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಶಿವಮೊಗ್ಗದ ಸೃಷ್ಟಿ ಚಾರಿಟೆಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಮೂಡಬಿದಿರೆ ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಪ್ರತಿಷ್ಠಾನದ ವತಿಯಿಂದ ರವಿವಾರ ಮೂಡಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ಕಾಬೆಟ್ಟು ಓಬಯ್ಯ ಮಡಿವಾಳ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ ಮಡಿವಾಳರ ಸಂಸ್ಕೃತಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಎಲ್ಲ ಸಮುದಾಯಗಳ ಜನರನ್ನು ಶುಭ್ರವಾಗಿ ಕಾಣುವಂತೆ ಮಾಡುವ ಮಡಿವಾಳರು ನಿಷ್ಠೆ ಮತ್ತು ವಿಶ್ವಾಸಕ್ಕೆ ಹೆಸರಾದವರು ಎಂದರು.

ಮಡಿವಾಳರು ಶಿಕ್ಷಣ, ರಾಜಕೀಯ ಮತ್ತು ಉದ್ಯಮಗಳಲ್ಲಿ ಗುರುತಿಸಿಕೊಳ್ಳುತ್ತಿದ್ದು, ಸಮುದಾಯದ ಶ್ರೇಷ್ಠ ಪರಂಪರೆಯನ್ನು ಯುವಜನರು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಅವರು ಕರೆನೀಡಿದರು.

ದಾರಿದ್ರ್ಯಾ,ಆಲಸ್ಯ, ಕೀಳರಿಮೆ ಬಿಡಿ
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ| ವರದಾ ಶ್ರೀನಿವಾಸ್‌ ಮಾತನಾಡಿ, ಮಡಿವಾಳ ಜನಾಂಗವು ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿಯುವಿಕೆ ಜತೆಗೆ ಮೇಲುಜಾತಿಯವರ ಹಿಡಿತ ಈ ಜಾತಿಯ ಹಿಂದುಳಿಯುವಿಕೆಗೆ ಕಾರಣವಾಗಿದೆ. ಈ ಜನಾಂಗದಲ್ಲಿ ಇನ್ನೂ ಜೀವಂತವಾಗಿರುವ ದಾರಿದ್ರ್ಯಾ,ಆಲಸ್ಯ, ಕೀಳರಿಮೆ, ಮೂಢನಂಬಿಕೆ, ಸಂಕುಚಿತ ಮನೋಭಾವ, ದಾಸ್ಯಪರತೆ ಎಲ್ಲವೂ ದೂರವಾಗಬೇಕಾಗಿದೆ. ಈ ದಿಶೆಯಲ್ಲಿ ಮಡಿವಾಳ ಜನಾಂಗದವರು ಆರ್ಥಿಕವಾಗಿ ಸಬಲರಾಗಬೇಕಾದರೆ ಮೊದಲು ಬೇಕಾದುದು ಶಿಕ್ಷಣ. ಆಯಾ ಜನಾಂಗದ ಜಾತಿ ಸಂಘ, ಸಂಸ್ಥೆಗಳು ಶಿಕ್ಷಣಕ್ಕೆ ಹುರಿದುಂಬಿಸಬೇಕು ಎಂದು ಹೇಳಿದರು.

ಶಾಸಕ ಕೆ. ಅಭಯಚಂದ್ರ ಅವರು ಹಿಂದುಳಿದ ವರ್ಗದವರ ಅಭಿವೃದ್ಧಿ ಹಿಂದುಳಿದ ವರ್ಗದವರಿಂದಲೇ ಸಾಧ್ಯ ಎಂದು ಹೇಳಿದರು.

Advertisement

ಉದ್ಘಾಟನೆ
ಕಲ್ಲಬೆಟ್ಟು ಎಕ್ಸಲೆಂಟ್‌ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್‌ ಸಮ್ಮೇಳನವನ್ನು ಉದ್ಘಾಟಿಸಿ, ಸಮ್ಮೇಳನಾಧ್ಯಕ್ಷೆ ಸಾಹಿತಿ ವರದಾ ಶ್ರೀನಿವಾಸ್‌ ಅವರ ‘ಮಡಿವಾಳ ಮಾಚಿದೇವ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ, ‘ಬಡವನಾಗಿ ಜನಿಸುವುದು ತಪ್ಪಲ್ಲ, ಆದರೆ, ಬಡವನಾಗಿಯೇ ಸಾಯದೆ, ಜೀವನದಲ್ಲಿ ಛಲದಿಂದ ಮುಂದೆ ಬರಲು ಮನಸ್ಸು ಮಾಡಬೇಕು’ ಎಂದರು.

ವಿಜಯಪುರದ ಉದ್ಯಮಿ ಸೂರಜ್‌ ಸಾಲ್ಯಾನ್‌, ಭದ್ರಾವತಿ ಮಡಿವಾಳ ಸಂಘದ ಅಧ್ಯಕ್ಷ ಬಿ. ವೆಂಕಟೇಶ್‌, ಕಾರ್ಕಳದ ಸುರೇಶ್‌ ಮಡಿವಾಳ, ಗಣೇಶ್‌ ಸಾಲ್ಯಾನ್‌, ಸೃಷ್ಟಿ ಚಾರಿಟೆಬಲ್‌ ಟ್ರಸ್ಟ್‌ನ ಪ್ರ.ಕಾರ್ಯದರ್ಶಿ ನಾಗರಾಜ್‌, ಶಿವಮೊಗ್ಗ ಜಿಲ್ಲಾ ಸಂಘದ ಪ್ರ. ಕಾರ್ಯದರ್ಶಿ ದಯಾನಂದ ಬಾಬು ಅತಿಥಿಗಳಾಗಿ ಭಾಗವಹಿಸಿದ್ದರು. ಎಚ್‌.ಟಿ. ಸೋಮಯ್ಯ ಮಡಿವಾಳ ಪ್ರತಿಷ್ಠಾನದ ಅಧ್ಯಕ್ಷ ಸಾಣೂರು ಸತೀಶ ಸಾಲ್ಯಾನ್‌ ಸ್ವಾಗತಿಸಿ, ಪ್ರಸ್ತಾವಿಸಿದರು. 

ದೀಕ್ಷಾ   ಮತ್ತು ಚಂದ್ರಕಾಂತ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಮುಂಜಾನೆ ಎ. ಸುರೇಶ್‌ ತಂಡದವರಿಂದ ಮಂಗಳವಾದ್ಯ ಗೋಷ್ಠಿ, ರಾಮಕೃಷ್ಣ ಕಾಟುಕುಕ್ಕೆ ತಂಡದವರಿಂದ ವಚನಗಾಯನ, ದಾಸ ವಾಣಿ, ಪುರಸಭಾಸದಸ್ಯೆ ಪ್ರೇಮಾ ಎಸ್‌. ಸಾಲ್ಯಾನ್‌ ಅವರಿಂದ ಧ್ವಜಾರೋಹಣ ನಡೆಯಿತು. ಮಂಜೇಶ್ವರ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ತಂಡದವರಿಂದ ನೃತ್ಯ ಸಿಂಚನ, ಅಪರಾಹ್ನ ಸೋಮಯ್ಯ ಮಡಿವಾಳ ಪ್ರಶಸ್ತಿ, ಬಸವ ಮಾಚಿದೇವ ಪ್ರಶಸ್ತಿ, ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಮಡಿವಾಳ ಸಮಾಜಕ್ಕೆ ಪ್ರತ್ಯೇಕ ನಿಗಮಕ್ಕೆ ಆಗ್ರಹ 
ಅಖಿಲ ಭಾರತ ಮಡಿವಾಳ ಮಹಾಸಭಾದ ಅಧ್ಯಕ್ಷ ಎಂಜೀರಪ್ಪ ಮಾತನಾಡಿ, ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ದ್ರೋಹ ಮಾಡುತ್ತಿವೆ. ಮಡಿವಾಳ ಸಮಾಜಕ್ಕೆ ಪ್ರತ್ಯೇಕ ನಿಗಮವನ್ನು ನೀಡಬೇಕೆಂದು ಆಗ್ರಹಿಸಿದರು. ರಾಜ್ಯ ಸಂಘಟನೆಯು ಐ.ಎ.ಎಸ್‌. ಮತ್ತು ಕೆ.ಎ.ಎಸ್‌. ಓದುವವರಿಗೆ ಉಚಿತ ಊಟ, ವಸತಿಯನ್ನು ಒದಗಿಸುವುದು ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಚುನಾವಣಾ ಖರ್ಚನ್ನು ಮಹಾಮಂಡಲದಿಂದ ನಿರ್ವಹಿಸಲಾಗುವುದು ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next