Advertisement
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಮತ್ತು ಮಹಾಲಿಂಗ ಬಂಧಿತ ಆರೋಪಿಗಳು. ಎರಡು ತಿಂಗಳ ಹಿಂದೆ ಓಲಾ ಕ್ಯಾಬ್ ಚಾಲಕ ಕಪಿನಿಗೌಡ ಅಲಿಯಾಸ್ ಕುಮಾರ್(35) ಎಂಬಾತನನ್ನು ಕೊಲೆಗೈದು ನಾಪತ್ತೆಯಾಗಿದ್ದರು. ಕೊಲೆಯಾದ ಕಪಿನಿಗೌಡ ಆರೋಪಿಗಳ ಸ್ನೇಹಿತನೇ ಆಗಿದ್ದು, ಮೇ 18ರಂದು ಆರೋಪಿಗಳು ಆತನನ್ನು ಉಸಿರುಗಟ್ಟಿಸಿ ಸಾಯಿಸಿದ್ದರು. ಕಾರಿನಲ್ಲಿಯೇ ಶವ ಇಟ್ಟುಪರಾರಿಯಾಗಿದ್ದರು.
ಅದು ಕೊಲೆ ಎಂದು ತಿಳಿದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಸಿಂಗಲ್ ಪೆಗ್ ತಂದ ಆಪತ್ತು: ಸ್ನೇಹಿತರಾಗಿರುವ ಕಪಿನಿಗೌಡ, ಮಲ್ಲಿಕಾರ್ಜನ ಹಾಗೂ ಮಹಾಲಿಂಗ ಪ್ರತಿನಿತ್ಯ ರಾತ್ರಿ ಒಟ್ಟಾಗಿ ಮದ್ಯ ಸೇವಿಸುತ್ತಿದ್ದರು. ಅದರಂತೆ ಮೇ 18ರಂದು ಬಾರ್ ಒಂದರಿಂದ ಮದ್ಯದ ಬಾಟಲಿ ತಂದು ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಓಲಾ ಕ್ಯಾಬ್‌ನಲ್ಲೇ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಬಾಟಲಿ ಖಾಲಿಯಾಗುತ್ತಾ ಕೊನೆಯ ಪೆಗ್
ಉಳಿದುಕೊಂಡಿದ್ದು, ಇದನ್ನು ಯಾರು ಕುಡಿಯಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
Related Articles
ಜಗಳದ ನಶೆಯಲ್ಲೂ ಇದ್ದ ಮಲ್ಲಿ ಕಾರ್ಜುನ ಮತ್ತು ಮಹಾಲಿಂಗ ಇನ್ನಷ್ಟು ಕೋಪಗೊಂಡು ಕಪಿನಿಗೌಡನ ಮೂಗು ಮತ್ತು ಬಾಯಿಯನ್ನು ಬಿಗಿಯಾಗಿ ಅದುಮಿ ಹಿಡಿದುಕೊಂಡಿದ್ದಾರೆ. ಇದರಿಂದ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದ. ಇದನ್ನು ಗಮನಿಸಿದ ಇಬ್ಬರೂ ಕಪಿನಿಗೌಡನ ಮೃತದೇಹವನ್ನು ಕಾರಿನಲ್ಲೇ ಮಲಗಿಸಿ ಬಾಗಿಲು ಲಾಕ್ ಮಾಡಿ ಪರಾರಿಯಾಗಿದ್ದರು.
Advertisement
ಸ್ಥಳೀಯರಿಂದ ಮಾಹಿತಿ: ಓಲಾ ಕ್ಯಾಬ್ ಚಾಲಕನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಕಾರಿನ ಬಾಗಿಲು ಲಾಕ್ ಆಗಿದ್ದು, ಒಳಗೆ ಗಾಳಿ ಹೋಗುತ್ತಿರಲಿಲ್ಲ. ಹೀಗಾಗಿ ಕುಡಿದ ಮತ್ತಿನಲ್ಲಿ ಮಲಗಿದ್ದಾಗಲೇ ಕಪಿನಿಪತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದು ಅಸ್ವಾಭಾವಿಕ ಪ್ರಕರಣ ಕೂಡ ದಾಖಲಿಸಿಕೊಂಡಿದ್ದರು.
ಆದರೆ, ಕಪಿನಿಗೌಡ ಸಾವಿನ ಕುರಿತಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಾಗ ಅದು ಅಸ್ವಾಭಾವಿಕ ಸಾವಲ್ಲ, ಕೊಲೆ ಎಂಬುದು ಗೊತ್ತಾಯಿತು. ಅದರಂತೆ ಜುಲೈ 3ರಂದು ಪ್ರತ್ಯೇಕವಾಗಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಕಾರಿನ ನಂಬರ್ ಆಧರಿಸಿ ಮತ್ತು ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಗಿದೆ.ಬಳಿಕ ಅವರನ್ನು ಬಂಧಿಸಲಾಯಿತು ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ.