Advertisement

ಲಸಿಕೆ ಹಾಕಿಸದಿದ್ದರೆ ಜೀವನಪೂರ್ತಿ ಅಂಗವೈಕಲ್ಯ

07:41 AM Mar 11, 2019 | |

ಚಾಮರಾಜನಗರ: ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಸಹ 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸುವಂತೆ ಪೋಷಕರು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದರು.

Advertisement

ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕಿ ಅವರು  ಮಾತನಾಡಿದರು.

ಮಾರಕ ರೋಗ: ಪೋಲಿಯೋ ಒಂದು ಮಾರಕ ರೋಗವಾಗಿದ್ದು, ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲೇಬೇಕು. ಒಂದು ವೇಳೆ ಪೋಲಿಯೋ ಲಸಿಕೆ ಹಾಕಿಸದಿದ್ದರೆ ಜೀವನ ಪರ್ಯಂತ ಅಂಗವಿಕಲತೆ ಕಾಡಬಹುದು. ಈ ನಿಟ್ಟಿನಲ್ಲಿ ಮಕ್ಕಳ ತಂದೆ, ತಾಯಿ ಹಾಗೂ ಪೋಷಕರು ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.

ಮನೆ ಮನೆ ಭೇಟಿ: ನಗರದ ವಿವಿಧ ಬಡಾವಣೆಗಳಲ್ಲಿ ಪೋಲಿಯೋ ಹನಿ ಹಾಕಲು ಬೂತ್‌ ಗಳನ್ನು ತೆರೆಯಲಾಗಿದೆ. ಬೂತ್‌ಗಳಲ್ಲಿ ಆರೋಗ್ಯ, ಅಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಪೋಲಿಯೋ ಹನಿ ಹಾಕುವ ಕಾರ್ಯಕ್ಕೆ ನಿಯೋಜಿಸಲಾಗಿದೆ. ಗ್ರಾಮೀಣ ಹಾಗೂ ನಗರಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ.

ಭಾನುವಾರ ಪೋಲಿಯೋ ಲಸಿಕೆ ಹಾಕಿಸಲು ಸಾಧ್ಯವಾಗದಿದ್ದವರು ಮಾರನೆಯ ದಿನ ಮನೆಮನೆಗೆ ಬರುವ  ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪೋಲಿಯೋ ಲಸಿಕೆ ಹಾಕಿಸಬಹುದು ಎಂದರು. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 72 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಎಲ್ಲರೂ ಕೈಜೋಡಿಸಿ: ಪೋಲಿಯೋ ಮುಕ್ತ ಸಮಾಜಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸತತವಾಗಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಪೋಲಿಯೋ ಲಸಿಕೆಯಿಂದ ಯಾವ ಮಕ್ಕಳು ಸಹ ವಂಚಿತರಾಗದಂತೆ ತಡೆಯಲು ನಿಮ್ಮ ಸ್ನೇಹಿತರಿಗೆ, ನೆರೆಹೊರೆಯವರಿಗೂ ಸಹ ಮಾಹಿತಿ ನೀಡಿ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರು ಕೈಜೋಡಿಸೋಣ ಎಂದು ಜಿಲ್ಲಾಧಿಕಾರಿ ಕಾವೇರಿ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್‌. ಪ್ರಸಾದ್‌, ಆರ್‌.ಸಿ.ಎಚ್‌ ಅಧಿಕಾರಿ ಡಾ. ವಿಶ್ವೇಶ್ವರಯ್ಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.  

ಮೊದಲ ದಿನ ಶೇ.94 ಸಾಧನೆ: ಚಾಮರಾಜನಗರ ಜಿಲ್ಲೆಯಲ್ಲಿ ಇಂದು ನಡೆದ ಮೊದಲ ಸುತ್ತಿನ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಶೇ.94ರಷ್ಟು ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 22,865 (ಶೇ.96), ಗುಂಡ್ಲುಪೇಟೆ ತಾಲೂಕಿನಲ್ಲಿ 13971, (ಶೇ 95), ಕೊಳ್ಳೇಗಾಲ ತಾಲೂಕಿನಲ್ಲಿ 25883 (ಶೇ. 92), ಯಳಂದೂರು ತಾಲೂಕಿನಲ್ಲಿ 5793 (ಶೇ.97)  ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ 68512 (ಶೇ. 94) ಮಕ್ಕಳಿಗೆ ಮೊದಲ ದಿನ ಪೋಲಿಯೋ ಹನಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಮೊದಲ ದಿನ  ಬೂತ್‌ಗಳ ಮೂಲಕ ಪೋಲಿಯೋ ಹನಿ ಹಾಕಲಾಗುತ್ತದೆ.

ಯಾವುದಾದರೂ ಮಕ್ಕಳಿಗೆ ಪೋಲಿಯೋ ಹನಿ ಲಸಿಕೆ ಹಾಕಿಲ್ಲವೇ ಎಂಬುದನ್ನು ಸೋಮವಾರ, ಮಂಗಳವಾರ, ಬುಧವಾರ ಮನೆಮನೆಗಳಿಗೆ  ಆರೋಗ್ಯ ಕಾರ್ಯಕರ್ತರು ತೆರಳಿ ಪರಿಶೀಲಿಸಲಿದ್ದಾರೆ. ಒಂದು ವೇಳೆ ಯಾವುದಾದರೂ ಮಗುವಿಗೆ  ಕಾರಣಾಂತರದಿಂದ ಹಾಕಿಸಿಲ್ಲವಾದರೆ ಮನೆಯಲ್ಲೇ ಲಸಿಕೆ ಹಾಕಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next