ಬೆಂಗಳೂರು: ಈ ಫಲಿತಾಂಶದ ಮೂಲಕ ಜನ ಕೊಟ್ಟಿರುವ ಸಂದೇಶ ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪು ಪ್ರಶ್ನಿಸುವುದಿಲ್ಲ. ನಮಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಾಗಿತ್ತು. ಯಾಕೆ ಕಡಿಮೆ ಬಂದಿದೆ ಎಂದು ಚಿಂತನೆ ಮಾಡುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ…
-ಮಂಗಳವಾರ ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಪ್ರತಿಕ್ರಿಯೆ ಇದು.
ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಕಾಂಗ್ರೆಸ್ ಅಧ್ಯಕ್ಷನಾಗಿ ರಾಜ್ಯ ಹಾಗೂ ದೇಶದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಂತಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ನಾವು ಒಂದು ಸ್ಥಾನದಿಂದ ಒಂಬತ್ತು ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ಬೆಂಗಳೂರು, ಮುಂಬೈ ಕರ್ನಾಟಕ ಸೇರಿದಂತೆ ಇನ್ನು ಕೆಲವು ಕಡೆ ನಮಗೆ ನಿರೀಕ್ಷಿತ ಮಟ್ಟದ ಫಲಿತಾಂಶ ಬಂದಿಲ್ಲ. ಯಾವ ವರ್ಗ ಯಾಕೆ ನಮ್ಮಿಂದ ದೂರವಾ ಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಹೀಗಾಗಿ ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಕೈಹಿಡಿದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
“ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ. ಮೋದಿ ಅವರ ಜನಪ್ರಿಯತೆ ಕುಗ್ಗಿರುವುದು ಸಾಬೀತಾಗಿದೆ. ಹಿಂದಿ ಭಾಷಿಗರ ಭಾಗದಲ್ಲೂ ಕುಗ್ಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕು’ ಎಂದು ಹೇಳಿದರು.