Advertisement
ಕಳೆದ ವಾರ ವಾಟ್ಸ್‌ಆ್ಯಪ್ ಬೀಟಾ ಆವೃತ್ತಿಯಲ್ಲಿ ಸ್ಟಿಕರ್‌ಗಳ ಸ್ಟೋರ್ ಅನ್ನು ಪರಿಚಯಿಸಲಾಗಿದೆ. ಈಗಾಗಲೇ ಎಮೋಜಿಗಳು ವಾಟ್ಸ್‌ಆ್ಯಪ್‌ನಲ್ಲಿ ಜನಪ್ರಿಯ. ಇಡೀ ದಿನ ಚಾಟ್ ಮಾಡುತ್ತಲೇ ಕಳೆಯುವ ಯುವ ಜನಾಂಗಕ್ಕಂತೂ ಎಮೋಜಿಗಳ ಚಿತ್ರಗಳು ಕನಸಲ್ಲೂ ಕಣ್ಣ ಮುಂದೆ ಬಂದು ನರ್ತಿಸಬಹುದು. ಅಷ್ಟರ ಮಟ್ಟಿಗೆ ಎಮೋಜಿಗಳು ನಮ್ಮ ಅಕ್ಷರಗಳಿಗೆ ಭಾವನೆಗಳ ಟಚ್ ಕೊಟ್ಟಿವೆ. ನಾವು ಈಗ ಚಾಟ್ ಅಪ್ಲಿಕೇಶನ್‌ಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾ ಗಳಲ್ಲಿ ಎಮೋಜಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೇವೆಂದರೆ, ಒಂದು ವಾಕ್ಯದೊಂದಿಗೆ ಎಮೋಜಿ ಇಲ್ಲ ಎಂದಾದರೆ ಅದು ಯಾವ ಭಾವವನ್ನು ಸೂಚಿಸುತ್ತದೆ ಎಂಬುದೇ ಗೊತ್ತಾಗಲಾರದು.
Related Articles
Advertisement
ಹಾಗಂತ 2010 ಕ್ಕೂ ಮೊದಲೂ ಎಮೋಜಿಗಳಿರಲಿಲ್ಲವೇ ಎಂದು ಕೇಳಿದರೆ… ಆಗಲೂ ಎಮೋಜಿಗಳಿದ್ದವು. ಆದರೆ ಅವು ಇಮೇಜ್ ರೂಪದಲ್ಲಿದ್ದವು. ಅಂದರೆ ಇವುಗಳನ್ನು ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ ಕಾಪಿ ಪೇಸ್ಟ್ ಮಾಡಿ ಅಂಟಿಸಬೇಕಾಗುತ್ತಿತ್ತು. ಕೀಬೋರ್ಡ್‌ನಲ್ಲಿ, ಒಂದು ಬಟನ್ ಒತ್ತಿದ ತಕ್ಷಣ ಅವು ಸಿಗುತ್ತಿರಲಿಲ್ಲ. 2011ರಲ್ಲಿ ಮೊದಲು ಆ್ಯಪಲ್ ತನ್ನ ಐಒಎಸ್ ಕೀಬೋರ್ಡ್‌ನಲ್ಲೇ ಈ ಎಮೋಜಿಗಳನ್ನು ಸೇರಿಸಿತು. ಅಂದರೆ ನಾವು ಈಗ ಆಂಡ್ರಾಯ್ಡನಲ್ಲಿ ಬಳಸುತ್ತೇವಲ್ಲ, ಹಾಗೆ ಕೀಬೋರ್ಡ್‌ನಲ್ಲಿ ಒಂದು ಕೀ ಒತ್ತಿದರೆ ಎಮೋಜಿಗಳ ಸ್ಟೋರ್ ತೆರೆದುಕೊಳ್ಳುತ್ತಿತ್ತು. ಇದೇ ಕ್ರಮವನ್ನು ಒಂದೆರಡು ವರ್ಷದ ಬಳಿಕ ಆಂಡ್ರಾಯ್ಡ ಕೂಡ ನಕಲು ಮಾಡಿತು. ಸ್ಮಾರ್ಟ್‌ಫೋನ್‌ಗಳಲ್ಲಿರುವ ಚಾಟ್ ಅಪ್ಲಿಕೇಶನ್‌ಗಳಲ್ಲಿ ಎಮೋಜಿಗಳನ್ನು ಜನಪ್ರಿಯವಾಗಿಸಿದ್ದೇ ಈ ಕ್ರಮ. ಯಾಕೆಂದರೆ, ಚಾಟ್ ಮಾಡಲೊಂದು ಆ್ಯಪ್ ಹಾಗೂ ಎಮೋಜಿಗಳನ್ನು ಕಳುಹಿಸುವುದಕ್ಕೆಂದು ಇನ್ನೊಂದು ಆ್ಯಪ್ ಬಳಸುವುದು ಕಿರಿಕಿರಿಯ ಸಂಗತಿಯಾಗಿತ್ತು. ಯಾವಾಗ ಒಂದು ವಾಕ್ಯದ ಮುಂದೆ ಭಾವಾಭಿವ್ಯಕ್ತಿಗೆ ಎಮೋಜಿಯನ್ನು ಕೇವಲ ಒಂದು ಟ್ಯಾಪ್ ಮಾಡಿ ಸೇರಿಸಬಹುದಾದ ಅವಕಾಶ ಸಿಕ್ಕಿತೋ, ಜನರು ಎಮೋಜಿಗಳ ಮೂಲಕವೇ ಮಾತನಾಡುವಂತಾದರು.
ಇನ್ನೊಂದು ತಮಾಷೆಯ ಸಂಗತಿಯೆಂದರೆ, ಹೊಸ ಹೊಸ ಎಮೋಜಿಗಳು ಬಿಡುಗಡೆಯಾಗುವುದರ ಹಿಂದೆ ಸುಮಾರು ಎರಡು ವರ್ಷಗಳ ಪರಿಶ್ರಮವಿದೆ! ಯೂನಿಕೋರ್ಡ್ ಕನ್ಸಾರ್ಶಿಯಮ್‌ನ ಉಪ ಸಮಿತಿಯು ಈ ಬಗ್ಗೆ ವಾರಕ್ಕೆರಡು ಬಾರಿಯಂತೆ ಸುಮಾರು ಎರಡು ವರ್ಷಗಳವರೆಗೆ ಚರ್ಚಿಸಿ ಪ್ರತಿಯೊಂದು ಎಮೋಜಿಯನ್ನು ಅಂತಿಮಗೊಳಿಸುತ್ತದೆ. ನಮಗೆ ನೋಡಲು ಸುಲಭವೆನಿಸುವ ಈ ಎಮೋಜಿಗಳು ಕಾಲ-ದೇಶ ಹಾಗೂ ಸಂಸ್ಕೃತಿಯನ್ನು ಮೀರಿದವು. ಅಂದರೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರು ಬಳಸುವ ನಗುವಿನ ಎಮೋಜಿಗಳನ್ನು ಅಮೆರಿಕದ ಬಳಕೆದಾರರೂ ಬಳಸುತ್ತಾರೆ. ಹೀಗಾಗಿ ಇಡೀ ಮನುಷ್ಯ ಕುಲವನ್ನು ಪ್ರತಿನಿಧಿಸುವಂತೆ ಈ ಎಮೋಜಿಯನ್ನು ರೂಪಿಸುವುದು ಆರಂಭದಲ್ಲಿನ ಆದ್ಯತೆಯಾಗಿತ್ತು. ಹಾಗಂತ ಇದು ಸುಲಭದ ಸಂಗತಿಯಲ್ಲ. ಉದಾಹರಣೆಗೆ ಒಂದು ಬೀನ್ಸ್‌ನ ಎಮೋಜಿಯನ್ನು ಸೇರಿಸಬೇಕು ಎಂದಾದರೆ ಯಾವ ಬೀನ್ಸ್ ಬಳಸಬೇಕು ಎಂಬುದಕ್ಕೇ ವರ್ಷಗಟ್ಟಲೆ ಚರ್ಚೆ ನಡೆಯುತ್ತದೆ. ಪ್ರತಿ ದೇಶದಲ್ಲೂ ಬೀನ್ಸ್‌ನ ಆಕಾರ, ಗಾತ್ರ ಹಾಗೂ ವ್ಯಾಸ ಬದಲಾಗುತ್ತದೆ. ಇವೆಲ್ಲ ಬೀನ್ಸ್ ಅನ್ನೂ ಪ್ರತಿನಿಧಿಸುವ ಚಿತ್ರವನ್ನು ಆಯ್ಕೆ ಮಾಡುವುದು ಸುಲಭವಲ್ಲ. ಹೀಗಾಗಿ ಒಂದು ಎಮೋಜಿ ಹುಟ್ಟಿ, ಬೆಳೆದು, ನಮ್ಮ ಸ್ಮಾರ್ಟ್‌ಫೋನ್‌ಗೆ ಬರಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ!
ಇಷ್ಟು ಚರ್ಚೆ ಮಾಡಿ ಎಮೋಜಿಗಳನ್ನು ಅಂತಿಮಗೊಳಿಸಿದರೂ, 2014 ರ ಹೊತ್ತಿಗೆ ಈ ಬಗ್ಗೆ ದೊಡ್ಡ ರಾಜಕೀಯ ರಾದ್ಧಾಂತವೇ ಶುರುವಾಗಿತ್ತು. ಸಾಮಾಜಿಕ ಹೋರಾಟಗಾರರು ಎಮೋಜಿ ಲಿಂಗ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ವೈದ್ಯರು, ಅಡುಗೆ ಮಾಡುವವರು, ಪೊಲೀಸರ ಎಮೋಜಿಗಳೆಲ್ಲ ಯಾಕೆ ಪುರುಷರನ್ನೇ ಪ್ರತಿನಿಧಿಸುತ್ತವೆ? ಮಹಿಳಾ ವೈದ್ಯರು ಹಾಗೂ ಪೊಲೀಸರೂ ಇರುವುದಿಲ್ಲವೇ ಎಂಬ ಪ್ರಶ್ನೆ ಕೇಳತೊಡಗಿದರು. ಬಹುತೇಕ ಎಮೋಜಿಗಳು ಬಿಳಿಯ ವ್ಯಕ್ತಿಗಳನ್ನೇ ಯಾಕೆ ಪ್ರತಿನಿಧಿಸುತ್ತವೆ? ಕರಿಯರು ಯಾಕಿಲ್ಲ ಎಂಬ ಎಲ್ಲ ಪ್ರಶ್ನೆಗಳೂ ಉದ್ಭವಿಸಿದವು. ಹೀಗಾಗಿ ಯೂನಿಕೋರ್ಡ್ ಕನ್ಸಾರ್ಶಿಯಮ್‌ನ ಉಪ ಸಮಿತಿಗೆ ತಲೆ ಬೇನೆ ಶುರುವಾಗಿ ಎಲ್ಲ ವಿಧದ ಎಮೋಜಿಗಳಿಗೂ ಮಾನದಂಡ ರೂಪಿಸಿದವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ 2-3 ವರ್ಷದ ಹಿಂದೆ ಎಮೋಜಿಗಳ ಚರ್ಮದ ಬಣ್ಣವನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಿತು. ಅಲ್ಲಿಗೆ ಎಮೋಜಿಗಳು ವೈವಿಧ್ಯವಾಗುತ್ತ ಸಾಗಿದವು.
ಒಂದು ಹಂತಕ್ಕೆ ಎಮೋಜಿಗಳ ನಿರ್ಲಿಪ್ತತೆಯೇ ಜನರಿಗೆ ಬೇಸರ ಬಂತೋ ಗೊತ್ತಿಲ್ಲ. ಸ್ಟಿಕರ್‌ಗಳು ಚಾಲ್ತಿಗೆ ಬಂದವು. ಈ ಸ್ಟಿಕರ್‌ಗಳಂತೂ ಒಂದಕ್ಕಿಂತ ಒಂದು ವಿಶಿಷ್ಟ. ಇವು ಚಿತ್ರಗಳಷ್ಟೇ. ಇವುಗಳ ಹಿಂದೆ ಶಿಷ್ಟ ಭಾಷೆಯಿಲ್ಲ. ಸ್ನ್ಯಾಪ್‌ಚಾಟ್‌ನಲ್ಲಂತೂ ನಾವು ಬಳಸುವ ಸ್ಟಿಕರ್‌ಗೆ ನಮ್ಮ ಮುಖವನ್ನೇ ಇಡಬಹುದು. ನಮ್ಮನ್ನೇ ಪ್ರತಿನಿಧಿಸುವ ಸ್ಟಿಕರ್ ರಚಿಸಿ ಅದನ್ನು ಬಳಸಬಹುದು. ಇವೆಲ್ಲವೂ ಅಭಿವ್ಯಕ್ತಿಯ ಹೊಸ ಮಗ್ಗಲುಗಳಾದವು. ಇದೇ ವಿಧಾನವನ್ನು ಆ್ಯಪಲ್ ಕೂಡ ಎಮೋಜಿಯಲ್ಲೇ ಪ್ರಯತ್ನಿಸಿದೆ. ಹಂದಿಯ ಎಮೋಜಿಗೆ ಆ್ಯಪಲ್‌ನ ಫೇಸ್‌ಟೈಮ್ ಬಳಸಿ ನಮ್ಮ ಮುಖವನ್ನೇ ಲಗತ್ತಿಸಬಹುದು. ಅಂದರೆ ನಮ್ಮಂತೆಯೇ ಕಾಣುವ ಹಂದಿಯನ್ನು ನಾವು ಸೃಷ್ಟಿಸಬಹುದು ಕಾಲಕಾಲಕ್ಕೆ ಎಮೋಜಿಗಳು ಹೊಸ ರೂಪ ಪಡೆದುಕೊಳ್ಳಬಹುಷ್ಟೇ, ಆದರೆ ಇವು ನಮ್ಮ ಭಾವನೆಗಳ ಮೂಲಕ ಶಬ್ದವನ್ನು ವರ್ಗಾಯಿಸುವ ಅನುವಾದಕನಾಗಿ ಇನ್ನಷ್ಟು ವರ್ಷ ಇರುತ್ತದೆ ಎಂಬುದಂತೂ ಖಚಿತ.
ಕೃಷ್ಣ ಭಟ್