Advertisement

ಕಾಣದಕಡಲಿಗೆ ಹಂಬಲಿಸಿದೆ ಮನ…

07:46 PM Sep 30, 2020 | Suhan S |

ಅಮ್ಮಾ! ಸ್ಕೂಲ್‌ನ ಇಷ್ಟು ಬೇಗ ಶುರು ಮಾಡಲ್ವಂತೆ! ಹಾಗಾಗಿ ನಮಗೆ ಇನ್ನಷ್ಟು ದಿನ ರಜ’. “ಕೇಳಿದ್ಯೇನೇ? ನಮ್ಮಕಂಪನಿಯಲ್ಲಿ ವರ್ಕ್‌ ಫ್ರಮ್‌ ಹೋಂ ಸಿಸ್ಟಮ್‌ನ ಮುಂದುವರಿಸಿದ್ದಾರೆ. ಸದ್ಯ, ಒಳ್ಳೆಯದಾಯಿತು.’

Advertisement

ಮಕ್ಕಳು- ಗಂಡ ನೆಮ್ಮದಿಯ ಉಸಿರು ಬಿಡುತ್ತಾ ಈ ಮಾತುಗಳನ್ನು ಆಡುತ್ತಿದ್ದರೆ, ಅವಳಿಗೆ ಒಂದೆಡೆ ಸಮಾಧಾನ, ಮತ್ತೂಂದೆಡೆ ಬೇಸರ! ಹೇಗೋ ಮನೆಯಲ್ಲೇ ಇದ್ದು ಯಾವ ಸೋಂಕೂ ತಾಗದೇ ಎಲ್ಲರೂ ಸುರಕ್ಷಿತವಾಗಿರಲಿ ಎಂಬ ಭಾವ ಸಮಾಧಾನಕ್ಕೆಕಾರಣವಾದರೆ, ಕೋವಿಡ್ ಜತೆ ಕಳೆದು ಹೋಗುತ್ತಿರುವ ತನ್ನ ಬದುಕಿನಕುರಿತು ವಿಷಾದದ ಶ್ರುತಿ, ಮನದಲ್ಲಿ ಬೇಡವೆಂದರೂ ಮೀಟುತ್ತಿದೆ.

ಹೇಗಿತ್ತು, ಹೇಗಾಯ್ತು ಬದುಕು? ಕನಸಿನಲ್ಲೂಊಹಿಸದ ತಿರುವು ಪಡೆದಿದ್ದು, ಕಣ್ಣಿಗೆಕಾಣದ ಕೋವಿಡ್ ಎಂಬ ಕೆಟ್ಟ ಕ್ರಿಮಿಯಿಂದ. ಹಾಗಂತಕಷ್ಟಗಳೇ ಇಲ್ಲದ ಸುಖಮಯ, ಶ್ರೀಮಂತ ಬದುಕು ಅವಳದಾಗಿತ್ತು ಎಂದಲ್ಲ. ನೋವು, ದುಃಖ, ರೋಗ, ಹಣದ ಬಿಕ್ಕಟ್ಟು, ಮುನಿಸು, ಮನಸ್ತಾಪ ಎಲ್ಲವೂ ಇದ್ದವು. ಅದರೊಂದಿಗೇ ಧೈರ್ಯವಾಗಿ ಉಸಿರಾಡುವ, ಸೀನುವ-ಕೆಮ್ಮುವ, ಆತ್ಮೀಯರೊಂದಿಗೆ ಮಾತನಾಡುವ, ತಿರುಗಾಡುವ ಸ್ವಾತಂತ್ರ್ಯವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ತನ್ನಷ್ಟಕ್ಕೇ ತಾನು ಅನುಭವಿಸುವ ಏಕಾಂತವಿತ್ತು. ಹಳೆಯ ನೆನಪನ್ನು ಮೆಲುಕು ಹಾಕುತ್ತಾ, ಹೊಸದಿನಗಳ ಬಗ್ಗೆ ಯೋಚಿಸುತ್ತಾ , ರಾಗ-ಶ್ರುತಿಯಿಲ್ಲದ ಟ್ಯೂನ್‌ ಗುನುಗುತ್ತಾ, ಯಾರನ್ನೋ ನೆನೆದು ಹನಿಗಣ್ಣಾಗಿ, ಯಾವುದೋಕಿತ್ತು ಹೋದ ಜೋಕಿಗೆ ಜೋರಾಗಿ ನಗುತ್ತಾ- ಹೀಗೆ ತಾನು ತಾನಾಗಿರುವ ದಿವ್ಯಕ್ಷಣಗಳನ್ನು ಅವಳಿಂದ ಕಿತ್ತುಕೊಂಡಕ್ರೂರಿ, ಈ ಕೋವಿಡ್! ನಿಜ, ಹಗಲು-ರಾತ್ರಿ ಮುಂಚಿನಂತೆಯೇ ಆಗುತ್ತಿದೆ. ಸೂರ್ಯ ಹುಟ್ಟುತ್ತಾನೆ,

ಮುಳುಗುತ್ತಾನೆ. ಅವರಿಗೂ ಸದ್ಯ ಕೋವಿಡ್ ತಾಗಿಲ್ಲವಲ್ಲ ಎಂಬುದೇ ದೊಡ್ಡ ಸಮಾಧಾನ. ಆದರೆ ಬೆಳಗಿನಲ್ಲಿ ಸೊಗಸಿಲ್ಲ. ಗುಂಪುಗುಂಪಾಗಿ ಪಾರ್ಕಿಗೆ ಬಂದು ವಾಕಿಂಗ್‌- ಟಾಕಿಂಗ್‌ಮಾಡುತ್ತಿದ್ದ ಸ್ನೇಹಿತರೆಲ್ಲ ಈಗ ಮನೆಯ ಟೆರೇಸಿನಲ್ಲಿ ಬಂಧಿಗಳು. ಅಕಸ್ಮಾತ್‌ ಒಬ್ಬರನ್ನೊಬ್ಬರು ನೋಡಿದರೂ ಬೆಚ್ಚಿ ಓಡುತ್ತಾರೆ. ಪ್ರತಿಯೊಬ್ಬರ ಮನಸ್ಸಿನಲ್ಲೂ “ಅವರಿಗೇನಾದರೂ ಕೋವಿಡ್ ಇದ್ದರೆ…’ ಎಂಬ ಸಂಶಯದ ನೆರಳು. “ಅಕ್ಕಾ, ತಿಂಡಿ ಆಯ್ತಾ!’ ಎನ್ನುತ್ತಾ ಬಾಯಿ ತುಂಬಾ ಮಾತನಾಡುತ್ತಾ ಪಟಪಟ ಕೆಲಸ ಮಾಡುತ್ತಿದ್ದ ಮನೆ ಸಹಾಯಕಿ, ಕೋವಿಡ್ ಭಯಕ್ಕೆ ಬೆಂಗಳೂರು ಬಿಟ್ಟು ಹಳ್ಳಿ ಸೇರಿದ್ದಾಳೆ. ಹೊಸದಾಗಿ ಮನೆಕೆಲಸ ಮಾಡುವುದು ದೇಹಕ್ಕೆ ಸ್ವಲ್ಪಕಷ್ಟವೇ; ಆದರೂ ರೂಢಿಯಾಯಿತು. ಬರೀ ಕೆಲಸವಾಗಿದ್ದರೆ ಸರಿ,ಕಷ್ಟ-ಸುಖ ಹಂಚಿ ಕೊಂಡು ಹಗುರಾಗುವ ಗೆಳತಿಯೂ ಆಗಿದ್ದಳಲ್ಲ- ಮನಸ್ಸು ಮರುಗುತ್ತಿದೆ.

ಅಚ್ಚುಕಟ್ಟಾಗಿ ಅಡುಗೆ ಮಾಡುವುದು ಮೊದಲಿನಿಂದಲೂ ಆಕೆಗೆ ಇಷ್ಟವೇ. ಆದರೆ ಈಗೀಗ ಮನೆಯವರ ಪ್ರೀತಿಯ ಡಿಮ್ಯಾಂಡ್‌ ಆಕೆಗೆಕಿರಿಕಿರಿ ಎನಿಸುತ್ತದೆ. ಗಂಡಕೇಳುತ್ತಾನೆ: “ಈ ವೀಕ್‌ ಏನೆಲ್ಲಾ ತಿಂಡಿ-ಸ್ಪೆಷಲ್‌ ಪ್ಲಾನ್‌ ಮಾಡಿದ್ದೀಯಾ?’. ಅದರ ಬೆನ್ನಿಗೇ ಮಕ್ಕಳು- “ಹೋಟೆಲ್ಗೆಹೋಗುವಂತಿಲ್ಲ, ಮನೆಯಲ್ಲೇ ಚೈನೀಸ್‌- ಮೆಕ್ಸಿಕನ್‌ ಮಾಡಮ್ಮಾ’ ಎಂಬ ಆಗ್ರಹದ ಮಾತು ಹೇಳಿದಾಗ ಸಿಟ್ಟು ನೆತ್ತಿಗೇರುತ್ತದೆ. ಬಿಸಿಲಿದ್ದರೆ ಮಿಲ್ಕ್ ಶೇಕ್‌, ಮಳೆಯಿದ್ದರೆ ಬೋಂಡ, ಚಳಿಯಿದ್ದರೆ ಸೂಪ್‌, ದಿನ ಬಿಟ್ಟು ದಿನ ಸ್ವೀಟು, ಇಷ್ಟು ಸಾಲದೆಂಬಂತೆ ದಿನಕ್ಕೆರಡು ಬಾರಿ ಕಷಾಯ ಮಾಡುವಾಗ ಅವಳಿಗೆ ತನ್ನನ್ನೇ ಅರೆದು, ಹುರಿದು,ಕುಟ್ಟಿ, ಪುಡಿ ಮಾಡಿದ ಅನುಭವ. ಆಗಾಗ್ಗೆ

Advertisement

ಟಿವಿಯಲ್ಲಿ, ಹೊತ್ತು ಹೊತ್ತಿಗೆ ಬಿಸಿ-ಬಿಸಿಯಾಗಿಊಟ-ತಿಂಡಿ ತಿನ್ನುವುದು ಒಳ್ಳೆಯದು ಎಂಬ ಸಲಹೆ ಬಂದಾಗ ಅದಕ್ಕೆ ಮನೆಯವರೆಲ್ಲರ ಅನುಮೋದನೆ. ಎದುರಿಗೆ ಸುಮ್ಮನಿದ್ದರೂ ಇವಳಿಗೆ ಮನಸ್ಸಿನಲ್ಲೇ ” ಕೋವಿಡ್ ಗೆ ಉಪವಾಸ ಮದ್ದು ಅಂತ ಹೇಳಿದ್ರೆ ಏನಾಗುತ್ತಿತ್ತು ?’ ಎಂಬ ಪ್ರಶ್ನೆ ಮೂಡುತ್ತದೆ. ಜತೆಗೇಕೂಲಿ ಕಾರ್ಮಿಕರ ಕಾಮ್‌ ಮಾಡ್ದೆ

ಇದ್ರೆ ಖಾನಾ ಇಲ್ಲೇ,ಕಾಮ್‌ ಮಾಡಿದ್ರೆ ಕೋವಿಡ್ ಒಟ್ಟಿನಲ್ಲಿ ಸಾಯೋದೇ ಎಂಬ ಮಾತು ನೆನಪಾಗಿ ಸಂಕಟವೂ ಆಗುತ್ತದೆ. ಆಫೀಸಿಗೆ ಹೋಗದಕಾರಣ, ಅವಳೂ ಸದಾಕಣ್ಣಿಗೆ ಬೀಳುವಕಾರಣ, ಎಲ್ಲರಿಗೂ ಮನೆಕ್ಲೀನ್‌ ಮಾಡಬೇಕೆಂಬ ಉಮೇದು ಹುಟ್ಟಿಕೊಂಡಿದೆ. ಅಲ್ಲಿ ಧೂಳು, ಇಲ್ಲಿಕಸ ಎನ್ನುತ್ತಾ ಎಲ್ಲವನ್ನೂಕಿತ್ತಾಡಿ-ಬಿಸಾಡಿ, ಬೇಕಾದಷ್ಟನ್ನೇ ಇಟ್ಟುಕೊಳ್ಳುವ ಅವಸರ. ಹಾಗೆ ಮೊದಲು ರದ್ದಿಗೆ ಹೋಗಿದ್ದು ಅವಳ ಹಳೆಯ ಟ್ರಂಕ್‌. ಅದರಲ್ಲಿದ್ದದ್ದು ಓಬೀರಾಯನಕಾಲದ ಪೆನ್ನು, ಬಣ್ಣ ಮಾಸಿದ ಸ್ವೆಟರ್‌, ಹರಿದ ಪುಟಗಳ ಡೈರಿ, ಕಾಲೇಜಿನ ಆಟೋಗ್ರಾಫ್ ಅದನ್ನೆಲ್ಲ ಕಂಡು ಮನೆಯವರಿಗೆ ನಗು. ಅವೆಲ್ಲಾ ಅವಳ ಭಾವಕೋಶವನ್ನು ಜೀವಂತವಾಗಿಟ್ಟಿದ್ದ

ಅಮೂಲ್ಯ ವಸ್ತುಗಳು. ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ? ಯಾರೂ ಇಲ್ಲದ ಮಧ್ಯಾಹ್ನ,ಊಟ ಮುಗಿಸಿ ಆ ಟ್ರಂಕ್‌ ತೆಗೆದುಕುಳಿತರೆ, ನೆನಪುಗಳಕಟ್ಟು ತಾನಾಗಿ ಬಿಚ್ಚುತ್ತಿತ್ತು. ಈಗ, ಆ ಟ್ರಂಕೇ ಇಲ್ಲದ ಮೇಲೆ, ಆ ಹೊತ್ತುಕೈ ಜಾರಿದ ಮುತ್ತಿನ ಹಾಗೆ! ಯಾಕೋ ತಾನೇ ಸಿನಿಕಳಾಗುತ್ತಿದ್ದೇನೆ, ಸುಖಾ ಸುಮ್ಮನೇ ಮನೆಯವರೆಲ್ಲರ ಮೇಲೆ ಗೂಬೆಕೂರಿಸುತ್ತಿದ್ದೇನೆ ಎಂದೂ ಅವಳಿಗೆ ಒಮ್ಮೊಮ್ಮೆ ಅನ್ನಿಸುವುದುಂಟು. ಇದ್ಯಾವುದೂ ಬೇಡ ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಓದಬೇಕೆಂದು ಆಸೆಪಟ್ಟುಕೊಂಡ ಪುಸ್ತಕಗಳನ್ನುಕೈಗೆತ್ತಿಕೊಂಡರೆ, ಒಂದೆರಡು ಪುಟ ಓದುವಷ್ಟರಲ್ಲಿ ಸಾಕು ಎಂಬ ಭಾವನೆ.

ಹೊಸ ಸಿನಿಮಾ ನೋಡಲುಕುಳಿತರೂ ಇದೇ ಕತೆ. ಯಾವುದೂ ಚೆನ್ನಾಗಿಲ್ಲ ಎಂದು ಗೊಣಗಿದರೂ, ಅದು ಪುಸ್ತಕ/ ಸಿನಿಮಾದ ದೋಷವಲ್ಲ, ತನ್ನ ಮನಸ್ಸಿನದ್ದು ಎಂಬ ಅರಿವು ಅವಳಿಗೂ ಇದೆ. ಅದಕ್ಕೆಲ್ಲಾ ಕಾರಣವೇನು? ಅದನ್ನು ಸರಿ ಮಾಡುವುದು ಹೇಗೆ ಎಂಬ ದಾರಿ ಗೊತ್ತಿಲ್ಲದೇ ಅಸಹಾಯಕತೆ ಅಷ್ಟೇ. ಯಾಕೋ ತನಗೆ ಮಾತ್ರವಲ್ಲ, ಇಡೀ ಜಗತ್ತಿಗೆ- ಕಾಲಕ್ಕೇ ಉಸಿರುಗಟ್ಟಿದೆ ಎಂಬ ಭಾವ ಮೂಡುತ್ತಿರುವಾಗಲೇ ಫೋನಿನ ರಿಂಗಣ. ಅತ್ತಕಡೆಯಿಂದಕೇಳಿಸಿದ ಗೆಳತಿಯಪ್ರೀತಿಯ ದನಿಯಿಂದ ಎಂಥದೋ ಉತ್ಸಾಹ. ಅಷ್ಟರಲ್ಲೇ ಕಿಟಕಿ ಯಿಂದ ಕಂಡಿದ್ದು ಬಿರು ಬಿಸಿಲಿಗೆ ಬಾಡಿ, ನಂತರ ಅನಿರೀಕ್ಷಿತವಾಗಿ ಬಿದ್ದ ಧಾರಾಕಾರ ಮಳೆಗೆ ಕೊಳೆತು, ದಾರಿಹೋಕರ ಕಾಲ ತುಳಿತಕ್ಕೆ ಮುರಿದು ಬಿದ್ದಿದ್ದ ದಾಸವಾಳ ಗಿಡದಲ್ಲಿ ಹೊಸ ಚಿಗುರು; ಬದುಕಲು ಪುಟ್ಟ ಬೇರು!!­

 

-ಡಾ.ಕೆ.ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next