Advertisement

ಬದುಕು ಅಲ್ಲಿಗೇ ನಿಲ್ಲುವುದಿಲ್ಲ !

06:30 AM Jun 22, 2018 | |

ಒಳಬಂದವಳೇ ಬಾಗಿಲು ಹಾಕಿ ಚಿಲಕವೇರಿಸಿದಳು, ಅಲ್ಲಿಯವರೆಗೂ ತಡೆದು ನಿಲ್ಲಿಸಿದ ಆಕೆಯ ಅಳು ಕಟ್ಟೆಯೊಡೆಯಿತು, ನನ್ನ ಕಸಿನ್‌. ನನಗಿಂತ ತಂಗಿಗೆ ಹೆಚ್ಚು ಹತ್ತಿರ. ಆಕೆ ನೇರವಾಗಿ ಹೇಳಿದ ಸಮಾಧಾನಗಳು ಇವಳಿಗೆ ತಲುಪಿಲ್ಲ ಮತ್ತು ನನ್ನಿಂದ ಆಕೆ ನಿರೀಕ್ಷಿಸುತ್ತಿದ್ದುದರ ಬಗ್ಗೆ ಅರ್ಥವಾಗಲು ತಡವಾಗಲಿಲ್ಲ.

Advertisement

ಹೆಚ್ಚು ಕಡಿಮೆ 20 ನಿಮಿಷಗಳ ಗಟ್ಟಿ ಅಳು. ನಂತರ ಒಂದೆರಡು ಮಾತಾಡುವ ಮಟ್ಟಕ್ಕೆ ಬಂದಳು, ಆದದ್ದು ಇಷ್ಟೇ, ಎರಡು ವರ್ಷಗಳಿಂದ, ಮುಂದೆ ಬದುಕಿಡೀ ಜೊತೆಯಾಗಿ ನಡೆಯೋಣ ಎಂದುಕೊಂಡು ನಡೆದಿದ್ದರು. ಆತ ಮಲೆಯಾಳಿ. ಆತ, ದಿಢೀರನೆ ಮದುವೆ ಮಾಡಿಕೊಂಡು ಪ್ರತ್ಯಕ್ಷವಾಗಿದ್ದಾನೆ!

ಯಾರಿಗಾದರೂ ಇದು ಆಘಾತ ತರುವ ಪರಿಸ್ಥಿತಿಯೇ. ಈಕೆ ಏನೂ ಹೇಳಲಾಗದೇ ಅಲ್ಲಿಂದಲೇ ಈ ಪರಿಸ್ಥಿತಿಯಲ್ಲಿ ಇಲ್ಲಿಗೆ ತಲುಪಿದ್ದಾಳೆ. ಎಲ್ಲದರಲ್ಲೂ ಎ, ಎ ಪ್ಲಸ್‌ ಗ್ರೇಡ್‌ ನೀಡಬಹುದಾದಂಥ ಗಂಭೀರ ಸ್ವಭಾವದ ಹುಡುಗಿ. ಈಕೆಯನ್ನು ಬೇಡ ಎನ್ನಲು ಕಾರಣ ಹುಡುಕುವುದೇ ಕಷ್ಟ.ಆಕೆ ಹೇಳಿದ ವಿವರಗಳನ್ವಯ ಆತನೂ ಸಂಭಾವಿತನೇ. ಅವರ ಕುಟುಂಬದ ಕಟ್ಟುಪಾಡು, ಮಣ್ಣು-ಮಸಿಗಳೇನಿದ್ದವೋ; ಮನೆಮಂದಿಯನ್ನು , ಕುಟುಂಬದವರನ್ನು ಎದುರಿಸುವುದು ಸಾಧ್ಯವೆನಿಸಲಿಲ್ಲವೇನೋ.

ಅವಳನ್ನು ಕೇಳಿದೆ- “ಅವನ ವಿಚಾರ ಪಕ್ಕಕ್ಕಿಡು, ನಿನ್ನ ಭಾವನೆಗಳೆಷ್ಟು ಗಟ್ಟಿ?’ ಆಕೆ ಹತ್ತನ್ನೆರಡು ನಿಮಿಷ ತನ್ನ ಡೆಡಿಕೇಷನ್‌ ಬಗ್ಗೆ, ಇಟ್ಟ ನಂಬಿಕೆ ಬಗ್ಗೆ ಹೇಳಿ ಹೇಳಿ ನಂತರ ಸುಮ್ಮನಾದಳು.

ನಂತರ ಹೇಳಿದೆ- “ಹಾಗಾದರೆ, ಅವನ ಮಂದಹಾಸ ನಿನಗೆ ತಂಪೆನಿಸುವುದಾದರೆ, ನಿನ್ನನ್ನು ಬಿಟ್ಟು ಬೇರೆ ಆಯ್ಕೆ ಅವನಿಗೆ ಖುಷಿ ನೀಡುವುದಾದರೆ ನೀನೇ ಹೊರಬಂದುಬಿಡು’. ಮತ್ತೆ ಹೇಳಿದೆ, “ಅವನಿಗೊಂದು ಮೆಸೇಜು ಮಾಡು: ನೀನು ಒಂದು ಮಾತು  ಹೇಳಿದ್ದರೆ ಖುಷಿಯಾಗಿ ಹಾರೈಸಿ ಕಳುಹಿಸಿರುತ್ತಿದ್ದೆ. ಆಲ್‌ ದಿ ಬೆಸ್ಟ್‌ ಅಂತ’.

Advertisement

ಆಕೆ ರೋಷದಿಂದ ನನ್ನತ್ತ ನೋಡಿದಳು. ಎದ್ದು ಹೊರಡಲು ಹವಣಿಸಿದಳು. ಆಕೆ ನನ್ನಿಂದ ಇಂಥ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ನಾನು ಸುಮ್ಮನುಳಿದೆ. ಮತ್ತೆ ಅಳು ಪ್ರಾರಂಭಿಸಿದಳು. ಕಡೆಗೆ ಮೊಬೈಲ್‌ ಕೈಗೆತ್ತಿಕೊಂಡು ಮೆಸೇಜು ಕಳುಹಿಸಿದಳು. ಸ್ವಲ್ಪ ಹಗುರಾದಂತೆ ಕಂಡಳು. ಆ ಗಳಿಗೆಗಳಲ್ಲಿ ಆಕೆಗೆ ಅಮ್ಮನಾಗಿದ್ದೆ. ನಿನ್ನ ಭಾವನೆಗಳು ನಿನ್ನವೇ, ಅವುಗಳನ್ನು ಅದೆಷ್ಟು ಆಳವಾಗಿ ಬದುಕಿದ್ದೀಯಾ ಎನ್ನುವುದಕ್ಕೆ ಈ ವೇದನೆಯೇ ಸಾಕ್ಷಿ. ಹೆಮ್ಮೆ ಪಡು. ನಿನ್ನ ಭಾವನೆಗಳ ಆಳದ ಬಗ್ಗೆ ಗೌರವಿಸು. ಆತ್ಮದಿಂದ ಧ್ಯಾನಿಸಲು ಸಾಧ್ಯವಾದುದಕ್ಕೆ ದೈವಕ್ಕೂ ಋಣಿಯಾಗು’.

ಇಂಥ ಸಂದರ್ಭದಲ್ಲಿ ಸುಲಭವಾಗಿ ಸಾಧ್ಯವಾಗುವುದು ದ್ವೇಷ. ಏಕೆಂದರೆ, ಇದು ಅತೀ ಸುಲಭ. ಅದೇ ಎದುರಿನವರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಒಪ್ಪಿಕೊಳ್ಳಲು ಹೆಚ್ಚು ಮಾನಸಿಕ ಬಲ ಬೇಕು. ಆದರೆ ಒಮ್ಮೆ ಪ್ರಯತ್ನಿಸಿ ನೋಡಿದರೆ, ಹೆಚ್ಚಿನ ಪ್ರೇಮಕತೆಗಳು ದೇವದಾಸ್‌-ಪಾರೂಗಳಂಥ ಉದಾಹರಣೆಗಳ ಹೆಸರು ಹೇಳುವ ಮಟ್ಟಕ್ಕೂ ತಲುಪುವುದಿಲ್ಲವೇಕೆ?

ಅಲ್ಲಿ ಇಬ್ಬರ ತಪನೆ, ತ್ಯಾಗ, ಆದರಣೆ ಒಂದೇ ಮಟ್ಟದ್ದಾಗಿದ್ದು, ಜಗತ್ತಿನ ಯಾವ ಮೂಲೆಗಳಲ್ಲಿದ್ದರೂ ಸಾಸಿವೆಯ ವ್ಯತ್ಯಾಸವಾಗದಷ್ಟು ಮಾನಸಿಕ ಹತ್ತಿರಗಳು. ನಿಜಕ್ಕೂ ಭೂಮಿಯ ಮೇಲೆ ಪಡೆಯಲಾರದ್ದು ಯಾವುದೂ ಇಲ್ಲ. ಎಷ್ಟು ಬೆಲೆ ತೆರಲೂ ಸಿದ್ಧರಿದ್ದೇವೆ. ಕನಿಷ್ಠ ತ್ಯಾಗಗಳನ್ನು ಮಾಡಲು ಸಿದ್ಧರಿಲ್ಲದಿರುವಾಗ ಬರುವ ಫ‌ಲಿತಾಂಶವೂ ಮಧ್ಯಮ ದರ್ಜೆಯಷ್ಟೇ ಆಗಿರುತ್ತದೆ.

ಆಕೆಯ ಬದುಕು ಅಲ್ಲಿಗೇ ನಿಲ್ಲುವುದಿಲ್ಲ. ಗುರುವು ತೋರಿದ ದಾರಿಯನ್ನೇ ಹಿಡಿಯುತ್ತದೆ. ಸಮಯ  ತೆಗೆದುಕೊಂಡು ಆಕೆಯೂ ದಾರಿ ಕಂಡುಕೊಳ್ಳುತ್ತಾಳೆ ಅಥವಾ ಭೂಮಿಯ ಮೇಲಿನ ಪ್ರತ್ಯಕ್ಷ ದೈವಗಳಾದ ಅಮ್ಮಂದಿರು, ಭ್ರಮೆಹಿಡಿದ ಬ್ರೇನ್‌ ಸೆಲ್‌ಗ‌ಳನ್ನು ದಿನಕ್ಕಿಷ್ಟರಂತೆ ತೊಳೆದು ಮರುಜೋಡಿಸಿದಂತೆ ದಿಕ್ಕುಗಾಣಿಸದೇ ಬಿಡುವುದಿಲ್ಲ. ಅಲ್ಲಿಗೆ ಆ ಭಾವನೆಗಳ ಅಧ್ಯಾಯಗಳು ಮುಕ್ತಾಯಗೊಳ್ಳುತ್ತವೆ.

ಇದಕ್ಕೆ “ಅನುಭವ’, ಇತ್ಯಾದಿ ಹೆಸರುಗಳು ಇಷ್ಟವೇ ಆಗುವುದಿಲ್ಲ. ಒಂದು ಸಲ ಹೆಜ್ಜೆಯಿಟ್ಟು ಹಿಂತೆಗೆದರೆ, ಅದನ್ನು ಏನೆಂದು ಹೆಸರಿಸಬಹುದು? ಬಹುಶಃ ಅವರವರ ಬದುಕಿಗೆ ಅವರವರು ಬರೆದುಕೊಂಡ ಪ್ರಮೇಯಗಳು ಅನ್ನಬಹುದೇನೋ.

ಅದೇಕೋ ತೀವ್ರವಾಗಿ ಅಸಹನೀಯವೆನಿಸಿತು. ಎದ್ದು ಬಾಲ್ಕನಿಗೆ ಬಂದೆ. ಅವಳು ಬಿಕ್ಕುತ್ತಲೇ ಇದ್ದಳು. ಕೆಳಗೆ ಟಿವಿಯು ತನ್ನಷ್ಟಕ್ಕೆ ಹಾಡೊಂದನ್ನು ಗುನುಗುತ್ತಿತ್ತು… ರಾಜಧಾನಿಯ ಜಗಮಗಿಸುವ ದೀಪಗಳು ತುಂಬಿದ ಕಂಗಳಿಂದ ಮಸುಕಾದಂತೆ.

“ಫಿರ್‌ ತೊ ಇಹಸಾಸ್‌ ಯೆ ಹೈ
ರೂಹ್‌ ಸೆ ಮೆಹಸೂಸ್‌ ಕರೋ
ಪ್ಯಾರ್‌ ಕೊ ಪ್ಯಾರ್‌ ಹಿ ರೆಹನೇದೊ
ಕೊಯಿ ನಾಮ್‌ ನಾ ದೋ…’

– ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next