ಬೆಳಗಾವಿ: ಮಹಾಮಾನವತಾವಾದಿ ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಮೌಲಿಕವೆನಿಸಿವೆ. ಅವುಗಳು ನಮ್ಮ ಅನುಕರಣೆಯ ಭಾಗವಾಗಬೇಕಾಗಿದೆ. ಜೀವನ ಪಥವನ್ನು ಬದಲಾಯಿಸುವ ಶಕ್ತಿ ಬಸವಣ್ಣನವರ ವಚನಗಳಲ್ಲಿ ಅಡಗಿದೆ ಎಂದು
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಹೇಳಿದರು.
Advertisement
ಇಲ್ಲಿಯ ಶಹಾಪುರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಬಸವೇಶ್ವರ ಪೀಠ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ, ಶ್ರೀ ದಾನಮ್ಮದೇವಿ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ವಾಹಿನಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶತಶತಮಾನಗಳವರೆಗೆ ನಾವು ಬಸವಣ್ಣನವರನ್ನು ರಾಜ್ಯದ ಆಚೆಗೆ ಬಿಟ್ಟುಕೊಡಲಿಲ್ಲ.ಇಂದು ಅವರ ಸಂದೇಶಗಳು ವಿಶ್ವಮಾನ್ಯವೆನಿಸಿವೆ.
ಸುಜಲವನ್ನು ತುಂಬಿದವರು ಬಸವಣ್ಣನವರು. ಕನ್ನಡ ಕುಲಕೋಟಿಯ ಸಂಸ್ಕೃತಿಯ ಕುಲಪತಿ ಬಸವಣ್ಣ. ನಡೆ ನುಡಿಯ ಮೂಲಕ ಬದುಕಲು ಕಲಿಸಿದವ ಬಸವ.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಡಾ| ಕೆ.ಬಿ.ಗುಡಸಿ ಮಾತನಾಡಿ, ಬಸವಣ್ಣನವರನ್ನು ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತಗೊಳಿಸುವ ಕಾರ್ಯ ನಡೆಯುತ್ತಿದೆ. ಅದು ಸಲ್ಲದು.ಅವರು ಸಮಾನತೆಯ ಹರಿಕಾರರು. ಬಸವಪೀಠ ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳಿಂದ ಮಹತ್ತರ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿಯವರು ಆಶೀರ್ವಚನ ನೀಡಿ, ಬಸವಣ್ಣನವರದು ಮಾತೃಹೃದಯಿನಡೆನುಡಿಯಾಗಿತ್ತು. ಒಂದು ಕಾಲಘಟ್ಟದಲ್ಲಿ ನಿಂತು ಸಮಾಜ ಧರ್ಮಗಳನ್ನು ತಿದ್ದಿ ತೀಡುವ ಕಾರ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಿದರು ಎಂದು ಹೇಳಿದರು. ಧಾರವಾಡ ಮುರಘಾಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಾಯಕದಾಸೋಹ ಸಿದ್ಧಾಂತಗಳು ವ್ಯಕ್ತಿಕಲ್ಯಾಣ ಹಾಗೂ ಸಮಾಜಕಲ್ಯಾಣದಲ್ಲಿ, ರಾಷ್ಟ್ರನಿರ್ಮಾಣದಲ್ಲಿ ಮಹತ್ವವನ್ನು ಪಡೆದಿವೆ. ಅಂತೆಯೆ ಯುಗ ಯುಗಗಳು ಕಳೆದರೂ ಸತ್ಯದರ್ಶನ ಅಡಗಿದೆ ಎಂದರು. ಮುರಗೋಡ ದುರದುಂಡೀಶ್ವರಮಠದ ನೀಲಕಂಠ ಸ್ವಾಮಿಗಳು, ಮುರಗೋಡದ ಮಹಾಂತಜ್ಜನವರು, ಎ.ಎಸ್.ಪಾಟೀಲ, ಎಂ.ಜಿ.ಬೊಳಮಲ್ಲ, ಡಾ.ಎಂ. ಎಸ್.ಉಮದಿ, ಎಸ್.ವಿ. ಬಾಗಿ, ಸಚಿನ ಖಡಬಡಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕೆಎಲ್‌ಇ
ಸಂಸ್ಥೆಯಲ್ಲಿ 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಡಾ| ಪ್ರಭಾಕರ ಕೋರೆ ಅವರನ್ನು ಟ್ರಸ್ಟ್ ವತಿಯಿಂದ ಸತ್ಕರಿಸಲಾಯಿತು. ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಸವಪೀಠದ ಸಂಯೋಜಕರಾದ ಡಾ| ಸಿ.ಎಂ. ಕುಂದಗೋಳ ಪ್ರಾಸ್ತಾವಿಕ ಭಾಷಣ ಮಾಡಿದರು. ದಾನಮ್ಮದೇವಿ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಂ. ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.