Advertisement

ಬದಲಾಗಬೇಕಿರುವುದು ಜಗತ್ತಲ್ಲ…ನಾವು

05:40 PM Jun 06, 2020 | sudhir |

ಒಂದೂರಲ್ಲಿ ಒಬ್ಬ ರಾಜನಿದ್ದ. ರಾಜ್ಯವೂ ಸಿರಿಸಂಪತ್ತಿನಿಂದ ಕೂಡಿತ್ತು. ಅಕ್ಕ ಪಕ್ಕದ ರಾಜ್ಯಗಳಿಗಿಂತಲೂ ಈ ರಾಜ್ಯವೇ ಶ್ರೇಷ್ಠ ಮತ್ತು ಉತ್ತಮ ಆಡಳಿತ ಹೊಂದಿದೆ ಎಂಬ ಮಾತುಗಳಿದ್ದವು. ಹೀಗಿರುವಾಗ ರಾಜನಿಗೆ ಒಂದು ದಿನ ರಾಜ್ಯ ಸುತ್ತಾಡಬೇಕೆಂಬ ಮನಸ್ಸಾಯಿತು. ತನ್ನ ಆಸೆ ಇಡೇರಿಕೆಗಾಗಿ ರಾಜ್ಯದಲ್ಲಿ ಪ್ರವಾಸ ಹೊರಟ. ಆತ ಸಾಗಿದ ದಾರಿಗಳೆಲ್ಲ ಬರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಇದರಿಂದಾಗಿ ಬರಿಗಾಲಿನಲ್ಲಿ ಸಾಗಿದ್ದ ರಾಜನ ಕಾಲುಗಳಲೆಲ್ಲ ಬೊಬ್ಬೆಗಳು ಉಂಟಾದವು. ಇನ್ನೆರಡು ಹೆಜ್ಜೆ ಇಡಲೂ ತನ್ನಿಂದ ಸಾಧ್ಯವಿಲ್ಲ ಎಂಬುದು ರಾಜನಿಗೆ ಅರಿವಾಯಿತು. ತನ್ನ ರಾಜ್ಯದ ರಸ್ತೆಗಳು ಇಷ್ಟು ದುಸ್ಥಿತಿಯಲ್ಲಿವೆಯೇ ಎಂಬ ಖೇದವೂ ಉಂಟಾಯಿತು.

Advertisement

ಕೂಡಲೇ ಮಂತ್ರಿಗಳನ್ನು ಕರೆದ ರಾಜ, ರಾಜ್ಯದ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಿಸುವಂತೆ ಆದೇಶಿಸಿದ. ರಾಜಾಜ್ಞೆಯಂತೆ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಲು ಸಾವಿರಾರು ಪ್ರಾಣಿಗಳ ವಧೆಮಾಡಲೇ ಬೇಕಿತ್ತು. ಇದನ್ನು ಮನಗಂಡ ಮಂತ್ರಿಯೋರ್ವ ರಾಜನಿಗೆ ಸಲಹೆಯೊಂದನ್ನು ನೀಡಿದ. ರಾಜನೂ ಇದಕ್ಕೆ ಒಪ್ಪಿದ. ಆ ಸಲಹೆಯೇ ರಸ್ತೆಗಳಿಗೆ ಚರ್ಮ ಹೊದಿಸುವ ಬದಲು ತುಂಡು ಚರ್ಮದಿಂದ ರಾಜ ತನ್ನ ಪಾದಗಳನ್ನು ಮುಚ್ಚಿಕೊಳ್ಳಬಹುದು. ಇದರಿಂದ ಅನಗತ್ಯ ಖರ್ಚು ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮಂತ್ರಿ ತಿಳಿ ಹೇಳಿದ್ದ. ಹಾಗಾಗಿ ಅಂದಿನಿಂದಲೇ ರಾಜ ಪಾದರಕ್ಷೆ ಧರಿಸುವುದನ್ನು ಅಭ್ಯಸಿಸಿಕೊಂಡ.

ತಮ್ಮ ಪ್ರವಚನವೊಂದರಲ್ಲಿ ಸಂತರೋರ್ವರು ಹೇಳಿದ ಚಿಕ್ಕ ಕಥೆಯಿದು. ಜಗತ್ತನ್ನು ಬದಲಾಯಿಸುವ ಬದಲು ನಾವು ಬದಲಾಗಬೇಕು ಎಂಬುದು ಈ ಕಥೆಯ ನೀತಿ. ನಮ್ಮ ಸಮಾಜದಲ್ಲಿ ಅದು ಸರಿ ಇಲ್ಲ, ಇದು ಹೀಗಾಗಬೆಕಿತ್ತು ಎಂದು ಪುಂಖಾನುಪುಂಖವಾಗಿ ಹೇಳಿಕೊಂಡು ತಿರುಗುವ ಅನೇಕರು ಇದ್ದಾರೆ. ಆದರೆ ಆ ಬದಲಾವಣೆಗಾಗಿ ತಮ್ಮನ್ನೆಷ್ಟು ಅವರು ಬದಲಾಯಿಸಿಕೊಂಡಿದ್ದಾರೆ ಎಂಬುದು ಪ್ರಶ್ನೆ. ಕೇವಲ ಸಮಾಜದ ದೃಷ್ಟಿಯನ್ನು ಮಾತ್ರ ಇಟ್ಟುಕೊಂಡು ಈ ಕಥೆಯಿಲ್ಲ.

ಪ್ರತಿಯೊಬ್ಬರ ವೈಯಕ್ತಿಕ ಜೀವನಕ್ಕೂ ಇದು ಅನ್ವಯವಾಗುತ್ತದೆ. ಸದಾ ಬೇರೆಯವರ ತಪ್ಪನ್ನೇ ಹುಡುಕುತ್ತ ಬದುಕುವ ಬದಲು ನಮ್ಮ ತಪ್ಪನ್ನು ನಾವು ತಿದ್ದುಕೊಂಡು ಬಾಳುವ ಮನಃಸ್ಥಿತಿ ಎಲ್ಲರೂ ರೂಢಿಸಿಕೊಂಡರೆ ಬೇರೆಯವರ ತಪ್ಪು ಹುಡುಕುವವರಾದರೂ ಯಾರಿರುತ್ತಾರೆ? ಲೋಕದ ಡೊಂಕು ಸರಿಪಡಿಸುವ ಬದಲು ನಿಮ್ಮ ತನವನ್ನು, ಮನವನ್ನು ಸಂತೈಸಿಕೊಳ್ಳಿ ಎಂದು ವಚನಕಾರರೇ ಹೇಳಿಲ್ಲವೆ?

Advertisement

Udayavani is now on Telegram. Click here to join our channel and stay updated with the latest news.

Next