Advertisement

ಸ್ಥಗಿತಗೊಂಡಿದ್ದ ಕಲ್ಲುಗಣಿಗಾರಿಕೆಗೆ ಮತ್ತೆ ಜೀವ?

09:21 PM Jul 23, 2019 | Lakshmi GovindaRaj |

ದೇವನಹಳ್ಳಿ: ನಂದಿಬೆಟ್ಟದ ಮಾರ್ಗದಲ್ಲಿರುವ ಕಲ್ಲುಗಣಿಗಾರಿಕೆಗೆ ಮತ್ತೆ ಜೀವ ಬಂದಿದ್ದು, ಸ್ಥಳೀಯರಲ್ಲಿ ಮತ್ತೆ ಗಣಿಧೂಳು ಆವರಿಸುವ ಭೀತಿ ಶುರುವಾಗಿದೆ. ಕಲ್ಲುಗಣಿಗಾರಿಕೆ ಎದುರಿಗಿರುವ ಪ್ರಸ್ಟೀಜ್‌ ಗಾಲ್ಫ್ ರೆಸಾರ್ಟ್‌ ತಂಗಿದ್ದ ರಾಜಕಾರಣಿಗಳಿಂದಾಗಿ ಕಲ್ಲುಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ರಾಜಕಾರಣಿಗಳು ತಮ್ಮ ಕ್ಷೇತ್ರಗಳಿಗೆ ಮರಳುವುದರಿಂದ ಮತ್ತೆ ಕಲ್ಲುಗಣಿಗಾರಿಕೆ ಸಂಕಟ ಆರಂಭವಾಗುವ ಸಾಧ್ಯತೆಗಳಿವೆ.

Advertisement

ಗುಂಡಿ, ಕೊರಕಲು ಪ್ರದೇಶ ನಿರ್ಮಾಣ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅರಣ್ಯೀಕರಣ ಯೋಜನೆಗೆ ಗಣಿಗಾರಿಕೆಯಿಂದ ಕುತ್ತು ಬರುತ್ತಿದೆ ಎಂಬ ಆರೋಪ ಒಂದುಕಡೆ. ಇನ್ನೊಂದೆಡೆ ಕರ್ನಾಟಕ ಗೃಹ ಮಂಡಳಿ ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಸ್ವಾಧೀನಪಡಿಸಿರುವ 305.33 ಎಕರೆ ಜಾಗದಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದು ಆಳವಾದ ಗುಂಡಿ ಹಾಗೂ ಕೊರಕಲು ಪ್ರದೇಶ ನಿರ್ಮಾಣವಾಗಿದೆ. ಈ ಜಾಗವನ್ನು ಹರಾಜು ಹಾಕಲು ಗೃಹ ನಿರ್ಮಾಣ ಮಂಡಳಿ ಮುಂದಾಗಿತ್ತು. ಆದರೆ ಬೀಡ್‌ದಾರರು ಖರೀದಿಗೆ ಮುಂದೆ ಬರಲಿಲ್ಲ.ಹೀಗಾಗಿ ಸ್ಥಗಿತಗೊಂಡಿತ್ತು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

ಕಲ್ಲುಗಣಿಗಾರಿಕೆಗೆ ಪರವಾನಗಿ ಬೇಡ: 15-20 ವರ್ಷಗಳಿಂದ ಗಣಿ ಸುತ್ತಮುತ್ತ ಇರುವ ಪ್ರದೇಶದಲ್ಲಿ ಯಾವುದೇ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಫಸಲು ಕಂಡಿಲ್ಲ. ಹೆಚ್ಚು ಗಣಿ ಧೂಳಿನಿಂದ ಬೆಳೆ ನಷ್ಟ ಅನುಭವಿಸುವಂತಾಗಿದೆ. ಗಣಿಗಾರಿಕೆಯಿಂದ ಅಂತರ್ಜಲ ಕುಸಿತವಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಪರವಾನಗಿ ನೀಡಬಾರದು. ಇದರಿಂದ ರೈತರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ರೈತ ರಮೇಶ್‌ ಹೇಳುತ್ತಾರೆ. ದಿನ 24 ಗಂಟೆಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ತೈಲಗೆರೆ ವ್ಯಾಪ್ತಿಯಲ್ಲಿರುವ ಒಟ್ಟು ಸರ್ಕಾರಿ ಗೋಮಾಳ 211 ಎಕರೆ 16 ಗುಂಟೆ ಜಾಗಉಳಿಸಲು ಗ್ರಾಮಸ್ಥರು ರೈತರ ಹೋರಾಟ ನಡೆಸುತ್ತಿದ್ದಾರೆ.

ಅಧಿಕಾರಿಗಳ ಪತ್ರಕ್ಕೆ ಬೆಲೆಯಿಲ್ಲ: 2015ರ ಆ.20 ರಂದು ಕರ್ನಾಟಕ ಗೃಹ ಮಂಡಳಿ ಜಿಲ್ಲ ಕಾರ್ಯಪಾಲಕ ಇಂಜಿನಿಯರ್‌ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೊಣ್ಣೇನಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ, ಕೊಡಗುರ್ಕಿ ಗ್ರಾಮಗಳ ವ್ಯಾಪ್ತಿಯ ಜಮೀನಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಮರಳು ದಂಧೆ ನಡೆಯಿತ್ತಿದೆ. ಜಲ್ಲಿ ಕ್ರಷರ್‌ನಿಂದ ವಸತಿ ಯೋಜನೆಗೆ ಧಕ್ಕೆಯಾಗಿದೆ. ಸದರಿ ಸರ್ವೆನಂಬರುಗಳ 200 ಮೀ. ವ್ಯಾಪ್ತಿ ಸುತ್ತವಲಯದಲ್ಲೂ ಇಂತಹ ಕಾರ್ಯಕ್ಕೆ ಅನುಮತಿ ನೀಡಲಾಗಿದೆ. ಹಲವು ಬಾರಿ ರದ್ದುಪಡಿಸುವಂತೆ ಕೋರಿದ್ದರೂ ಅಧಿಕಾರಿಗಳ ಪತ್ರಕ್ಕೂ ಬೆಲೆ ಕೊಡದ ಅಂದಿನ ಜಿಲ್ಲಾಧಿಕಾರಿ ವಾರ್ಷಿಕವಾಗಿ ನವೀಕರಣ ಮಾಡುತ್ತಲೇ ಇದ್ದರು ಎಂದು ದಾಖಲೆ ಸಹಿತ ಆರ್‌.ಟಿ.ಐ. ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಆರೋಗ್ಯದ ಮೇಲೆ ದುಷ್ಪರಿಣಾಮ: ಗಣಿಗಾರಿಕೆಯಿಂದ ಅದರ ಶಬ್ಧದಿಂದ ಮನೆಗಳಲ್ಲಿ ನಡುಕ, ಒಂದು ಕಡೆ ಬೆಳೆ ನಷ್ಟ ಇದರ ಸಮೀಪದಲ್ಲಿಯೇ ಇರುವ ಸೊಣ್ಣೇನಹಳ್ಳಿಯ ಶಾಲೆ ಮಕ್ಕಳಿಗೆ ಧೂಳಿನಿಂದ ಬಂದಂತ ಕಾಯಿಲೆಗಳ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಹ ಪತ್ರ ನೀಡಿತ್ತು. ಆ ಭಾಗದ ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಶಬ್ದಗಳು ಹೆಚ್ಚಾಗಿರುವುದರಿಂದ ಜಾನುವಾರುಗಳು ಸಾವನ್ನಪ್ಪಿರುವ ಉದಾಹರಣೆಗಳು ಸಹ ಇವೆ.

Advertisement

ಮತ್ತೇ ಆರಂಭವಾಗುವ ಭೀತಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಾ ಪ್ರಾಧಿಕಾರದ ಅರಣ್ಯೀಕರಣ ಯೋಜನೆಯಲ್ಲಿ ತೈಲಗೆರೆ, ಮೀಸಗಾನಹಳ್ಳಿ, ಸೊಣ್ಣೇನಹಳ್ಳಿ, ಕೊಡಗುರ್ಕಿ ಗ್ರಾಮದ ಕೆಲ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಲಾಗಿತ್ತು. ನಂದಿಬೆಟ್ಟದ ಬುಡದಿಂದ ಪ್ರಾರಂಭವಾಗುವ ಅರ್ಕಾವತಿ ಕ್ಯಾಚ್‌ಮೆಂಟ್‌ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಗಣಿಗಾರಿಕೆ ವ್ಯಾಪ್ತಿ 2 ಕಿ.ಮೀ. ಕನಿಷ್ಠ ಮಿತಿಯಲ್ಲಿ ಒಟ್ಟು 27 ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ ಎಂದು 2013 ಸೆ 24ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಅನುಮಾನಗಳು: 2016ರಲ್ಲಿ ಕೆಲವು ಪ್ರಭಾವಿಗಳಿಗೆ ಮಣಿದು ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡಿದ್ದರು. ಆದರೆ ಶಾಸಕರು ರೆಸಾರ್ಟ್‌ನಲ್ಲಿ ತಂಗಲು ಬಂದ ತಕ್ಷಣವೇ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಆರ್‌ಟಿಐ ಕಾರ್ಯಕರ್ತ ಚಿಕ್ಕೇಗೌಡ. ಶಾಸಕರು ರೆಸಾರ್ಟ್‌ನಲ್ಲಿ ತಂಗಿದ್ದ ಸಮಯದಲ್ಲಿ, ಗಣಿಸ್ಫೋಟ, ಶಬ್ದ, ಧೂಳು, ಲಾರಿಗಳ ಸಂಚಾರ ಭರಾಟೆ, 15 ದಿನಗಳಿಂದ ಸ್ಥಗಿತಗೊಂಡಿತ್ತು.ಆದರೆ ಈಗ ಮತ್ತೆ ಪ್ರಾರಂಭವಾಗುವ ಸಾಧ್ಯ ತಳ್ಳಿಹಾಕುವಂತಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿದಲೂರು ರಮೇಶ್‌.

ಗಣಿಗಾರಿಕೆಯಿಂದ ಸಾಕಷ್ಟು ಜನ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಶಬ್ದ ಮತ್ತು ಗಣಿಗಾರಿಕೆ ಧೂಳು ಬೆಳೆಗಳ ಮೇಲೆ ಕೂರುವುದರಿಂದ ರೈತರು ಎಷ್ಟೆ ಬೆಳೆ ಬೆಳೆದರೂ ಸಹ ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಗಣಿಗಾರಿಕೆಗೆ ನೀಡಿರುವ ಪರವಾನಗಿ ರದ್ದುಗೊಳಿಸಬೇಕು.
-ನಾಗರಾಜ್‌ ಬಿಜ್ಜವಾರ, ಪ್ರಜಾ ವಿಮೋಚನೆ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ

ತೈಲಗೆರೆ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಗೆ 12 ಮಾಲಿಕರಿಗೆ ಪರವಾನಗಿಯಿದೆ. ಸರ್ಕಾರ 2016ನೇ ಸಾಲಿನಿಂದ ಅನುಮತಿ ನೀಡಿದೆ. ರೆಸಾರ್ಟ್‌ ರಾಜಕಾರಣಕ್ಕೂ ಗಣಿಕಾಮಗಾರಿ ಸ್ಥಗಿತಗೊಳ್ಳುವುದಕ್ಕೂ ಬೇರೆ ಅರ್ಥ ಕಲ್ಪಿಸುವುದು ಅಗತ್ಯವಿಲ್ಲ. ಈ ಹಿಂದೆ ಏನು ನಡೆದಿದೆ ನಮಗೆ ಗೊತ್ತಿಲ್ಲ.
-ಸುರೇಶ್‌ ರಾಮಮೂರ್ತಿ, ಜಿಲ್ಲಾ ಭೂ ಮತ್ತು ಗಣಿ ಉಪನಿರ್ದೇಶಕ

* ಎಸ್‌. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next