ಶಿವಮೊಗ್ಗ: ಸಂಸತ್ ಕಲಾಪ ನಡೆಯಲು ಕಾಂಗ್ರೆಸ್ ಬಿಡುತ್ತಿಲ್ಲ, ಸದನದ ಗೌರವಾನ್ವಿತ ಪೀಠಾಧಿಕಾರಿಯಾದ ಸ್ಪೀಕರ್ ರೊಂದಿಗೆ ಕಲಹಕ್ಕೆ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದೆಲ್ಲೆಡೆ ವಿಜಯ ಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಮರ್ಯಾದೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರು ಮಾತನಾಡುವಾಗ ಮೈಕ್ ಆಫ್ ಆಗುತ್ತದೆ ಎಂಬುದು ಸುಳ್ಳು. ಯಾರು ಮಾತನಾಡುತ್ತಾರೋ ಆಗ ಮೈಕ್ ಆನ್ ಆಗೇ ಇರುತ್ತದೆ. ಇದು ನಾವು ಮಾಡಿದ ವ್ಯವಸ್ಥೆಯಲ್ಲ. ಅವರೇ ಮಾಡಿದ್ದ ಪದ್ಧತಿ ಎಂದರು.
ಅವರು ಕಳೆದ 10 ವರ್ಷದಿಂದ ಅಧಿಕಾರವಿಲ್ಲದೆ ಆತಂಕಗೊಂಡಿದ್ದಾರೆ. ಹೀಗಾಗಿ ಸದನದ ಕಲಾಪದಲ್ಲಿ ಅನಗತ್ಯವಾಗಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.