Advertisement

ಲಿಡ್ಕರ್‌ ಮೇಳದಲ್ಲಿ ಕೋಟಿ ರೂ. ವಹಿವಾಟು

12:35 PM Dec 25, 2017 | |

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನ ಜನಾಂಗಳ ಪ್ರದೇಶದಲ್ಲಿ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ರಾಜ್ಯಮಟ್ಟದ ಚರ್ಮ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಭಾನುವಾರ ತೆರೆಬಿದ್ದಿದ್ದು, ಐದು ದಿನಗಳಗಳ ಮೇಳದಲ್ಲಿ ಒಂದು ಕೋಟಿ ರೂ. ವಹಿವಾಟು ನಡೆದಿದೆ.

Advertisement

ಮಹಿಳೆಯರು ಬ್ಯಾಗ್‌, ಪರ್ಸ್‌, ಪಾದರಕ್ಷೆ ಖರೀದಿಯಲ್ಲಿ ತೊಡಗಿದ್ದರೆ. ಯುವಕರು ವಿಭಿನ್ನ ಶೈಲಿಯ ಶೂ, ಬೆಲ್ಟ್, ಜರ್ಕಿನ್‌ ಮತ್ತು ಪಾದರಕ್ಷೆ ಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಕೊಲ್ಲಾಪುರ ಚಪ್ಪಲಿಗಳು ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಈ ಪಾದರಕ್ಷೆಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ತಮಗಿಷ್ಟವಾದ ಬಣ್ಣ , ಅಳತೆಯ ಪಾದರಕ್ಷೆ ದೊರೆಯದೆ ಕೆಲವರು ನಿರಾಶರಾದರು.

ಉಪ್ಪಿನ ಕಾಯಿಗೂ ಬೇಡಿಕೆ: ಮೇಳದಲ್ಲಿ ಮಲೆನಾಡಿನ ಉಪ್ಪಿನ ಕಾಯಿ ಮಾರಾಟಕ್ಕೂ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರು ಮಲೆನಾಡಿನ ಉಪ್ಪಿನ ಕಾಯಿ ಖರೀದಿಯಲ್ಲಿ ತೊಡಗಿದ್ದರು. “ಉಪ್ಪಿನ ಕಾಯಿ ಅಂದ್ರೆ ನನಗಿಷ್ಟ ಅದರಲ್ಲೂ ಮಲೆನಾಡು ಮಿಡಿ ಉಪ್ಪಿನ ಕಾಯಿಗೆ ಪ್ರಸಿದ್ಧಿ, ಈ ಹಿನ್ನೆಲೆಯಲ್ಲಿ ಮಿಡಿ ಉಪ್ಪಿನಕಾಯಿ ಖರೀದಿಸಿದ್ದೇನೆ,’ ಎಂದು ಬೆಂಗಳೂರಿನ ಗಿರಿನಗರ ನಿವಾಸಿ ಅನನ್ಯ ಹೇಳಿದರು.

ಮೈಸೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಚಿಕ್ಕ ಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ ಹಲವೆಡೆಗಳಿಂದ ಬಂದ ಚರ್ಮೋತ್ಪನ್ನ ಮಾರಾಟಗಾರರಿಗಾಗಿ 40 ಮಳಿಗೆಗಳಲ್ಲಿ ಉತ್ಪನ್ನಗಳ ಮಾರಾಟಕ್ಕೆ ಸ್ಥಳವಕಾಶ ನೀಡಲಾಗಿತ್ತು. ಚೆನ್ನೈನ ಸೆಂಟ್ರಲ್‌ ಫ‌ುಟ್‌ವೇರ್‌ ಟ್ರೇನಿಂಗ್‌ ಇನ್ಸ್‌ಟಿಟ್ಯೂಟ್‌ ಕೂಡ ಪಾಲ್ಗೊಂಡಿತ್ತು. ಮಧ್ಯಾಹ್ನ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ನಟರಾಜ, ಪ್ರತಿಯೊಂದು ಮಳಿಗೆಗೂ ಭೇಟಿ ನೀಡಿ ಉತ್ಪನ್ನಗಳ ಮಾರಾಟದ ಬಗ್ಗೆ ಮಾಹಿತಿ ಪಡೆದರು.

ಕುವೆಂಪು, ತೇಜಸ್ವಿ ಕೃತಿಗಳಿಗೆ ಬೇಡಿಕೆ: ಮೇಳದಲ್ಲಿದ್ದ ನವ ಕರ್ನಾಟಕ ಪಬ್ಲಿಕೇಷನ್‌ನ ಮಳಿಗೆಯಲ್ಲಿ ಪುಸ್ತಕ ಪ್ರಿಯರು ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಜಲಗಾರ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪುಗಳು, ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್‌, ಮಾಯಾಲೋಕ ಸೇರಿದಂತೆ ಹಲವು ಕಾದಂಬರಿ ಮತ್ತು ನಾಟಕ ಪುಸ್ತಕಗಳನ್ನು ಖರೀದಿಸಿದರು.

Advertisement

ಕುವೆಂಪು, ತೇಜಸ್ವಿ ಅಷ್ಟೇ ಅಲ್ಲದೆ ಎಸ್‌.ಎಲ್‌.ಬೈರಪ್ಪ ಅವರ ವಂಶ ವೃಕ್ಷ, ಗೃಹಭಂಗ, ಕವಲು, ಆವರಣ, ಯಾನ, ಉತ್ತರಕಾಂಡ ಸೇರಿದಂತೆ ಹಲವು ಪುಸ್ತಕಗಳು ಮಾರಾಟವಾಗಿವೆ. ಪುಸ್ತಕ ಸಂತೆ ಅಲ್ಲದಿದ್ದರೂ ಮೇಳದಲ್ಲಿ ಸುಮಾರು 40 ಸಾವಿರ ರೂ. ವಹಿವಾಟು ನಡೆದಿದೆ ಎಂದು ನವಕರ್ನಾಟಕ ಪಬ್ಲಿಕೇಷನ್‌ ಉದ್ಯೋಗಿ ಬೆಟ್ಟಸ್ವಾಮಿ ಹೇಳಿದರು.

ಕಳೆದ ಬಾರಿ ಕೂಡ ಮೇಳದಲ್ಲಿ ಭಾಗವಹಿಸಿದ್ದೆ. ಆದರೆ ಮಳೆಯ ಹಿನ್ನೆಲೆಯಲ್ಲಿ ಆಗ ಅಷ್ಟೊಂದು ವ್ಯಾಪಾರ ನಡೆದಿರಲಿಲ್ಲ. ಈ ಬಾರಿ ವ್ಯಾಪಾರ ಅಡ್ಡಿಯಿಲ್ಲ.
-ಸುರೇಶ್‌, ಮೈಸೂರಿನ ಚರ್ಮೋತ್ಪನ್ನ ವ್ಯಪಾರಿ

Advertisement

Udayavani is now on Telegram. Click here to join our channel and stay updated with the latest news.

Next