Advertisement

ವಾರಸುದಾರರ ಪತ್ತೆಗೆ ಎಲ್‌ಐಸಿ ನೂತನ ವೆಬ್‌ಸೈಟ್‌

06:00 AM Sep 08, 2018 | Team Udayavani |

ಹುಬ್ಬಳ್ಳಿ: ದೇಶದ ಪ್ರತಿಷ್ಠಿತ ಸುಮಾರು 23 ವಿಮೆ ಕಂಪನಿಗಳಲ್ಲಿ ವಾರಸುದಾರರಿಲ್ಲದೇ 15 ಸಾವಿರ ಕೋಟಿ ರೂ.ಸಂಸ್ಥೆಗಳ ಖಾತೆಯಲ್ಲಿ ಉಳಿದುಕೊಂಡಿದ್ದು (ಅನ್‌ಕ್ಲೇಮ್ಡ್), ಅದನ್ನು ಮರಳಿ ಪಡೆಯದ ಗ್ರಾಹಕರು ಅಥವಾ ಅವರಿಗೆ ಸಂಬಂಧಪಟ್ಟವರು ತಮ್ಮ ಪಾಲಿಸಿ ಕುರಿತು ಸುಲಭವಾಗಿ ಪರಿಶೀಲಿಸಲು ಎಲ್‌ಐಸಿ ನೂತನ ವೆಬ್‌ಸೈಟ್‌ ಬಿಡುಗಡೆಗೊಳಿಸಿದೆ.

Advertisement

ಭಾರತೀಯ ಜೀವ ವಿಮಾ ನಿಗಮ, ಐಸಿಐಸಿಐ, ಎಚ್‌ಡಿಎಫ್‌ಸಿ, ಎಸ್‌ಬಿಐ, ರಿಲಯನ್ಸ್‌ ಸೇರಿದಂತೆ ಒಟ್ಟು 23 ವಿಮಾ ಕಂಪನಿಗಳಲ್ಲಿ ವಾರಸುದಾರರಿಲ್ಲದ 15 ಸಾವಿರ ಕೋಟಿಗೂ ಅಧಿಕ ಹಣ ಉಳಿದುಕೊಂಡಿದೆ. ಪಾಲಿಸಿಗೆ ಸಂಬಂಧಪಟ್ಟ ಗ್ರಾಹಕರು ಅಥವಾ ಅವರ ಕುಟುಂಬಸ್ಥರು ಈ ಹಣವನ್ನು ಮರಳಿ ಪಡೆಯಲು ಹಾಗೂ ಪಾಲಿಸಿ ಕುರಿತು ಮಾಹಿತಿ ಪಡೆಯಲು ವೆಬ್‌ಸೈಟ್‌ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಆರು ತಿಂಗಳಿಗೊಮ್ಮೆ ಗ್ರಾಹಕರ ಮಾಹಿತಿಯನ್ನು ಪರಿಷ್ಕರಿಸಿ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಐಆರ್‌ಡಿಎಐ (ಇನ್ಸೂರೆನ್ಸ್‌ ರೆಗ್ಯುಲೇಟರಿ ಆ್ಯಂಡ್‌ ಡೆವಲಪ್‌ಮೆಂಟ್‌ ಅಥಾರಟಿ ಆಫ್‌ ಇಂಡಿಯಾ) ಎಲ್ಲ ವಿಮೆ ಕಂಪನಿಗಳಿಗೆ ಸೂಚನೆ ನೀಡಿತ್ತು. ಐಆರ್‌ಡಿಎ ನಿರ್ದೇಶನದಂತೆ ಎಲ್‌ಐಸಿ ಅನ್‌ಕ್ಲೇಮ್ಡ್ ಪಾಲಿಸಿ ಡ್ಯುಸ್‌ ( unclaimed policy dues) ಎನ್ನುವ ವೆಬ್‌ಸೈಟ್‌ ಬಿಡುಗಡೆಗೊಳಿಸಿದೆ. ಎಲ್‌ಐಸಿ ಗ್ರಾಹಕರು ತಮಗೆ ಸಂಬಂಧಿಸಿ ಯಾವುದಾದರೂ ಪಾಲಿಸಿ ಹಣ ಮರಳಿ ಬರಬೇಕಿದೆಯೇ ಎನ್ನುವುದನ್ನು ಈ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.

ಹಣ ಮರಳಿ ಪಡೆಯುವುದು ಹೇಗೆ?: ಈ ವೆಬ್‌ಸೈಟ್‌ನಲ್ಲಿ ಗ್ರಾಹಕರು ಅಥವಾ ಅವರ ಕುಟುಂಬಸ್ಥರು ವಿಮೆಯ ಖಾತೆ ಸಂಖ್ಯೆ, ಪಾನ್‌ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಹಣ ಬಾಕಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ನೀವು ದಾಖಲಿಸಿದ ಮಾಹಿತಿ ಸರಿಯಾಗಿದ್ದು ಜೀವವಿಮೆ ಹಣ ಬಾಕಿ ಇದೆ ಎಂದಾದಲ್ಲಿ ಎಲ್‌ಐಸಿ ಕಚೇರಿಗೆ ತೆರಳಿ ಅಗತ್ಯ ದಾಖಲೆ ಒದಗಿಸಬೇಕು. ನಂತರ, ಮುಂದಿನ ಹಂತದಲ್ಲಿ ಅ ಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಗ್ರಾಹಕರಿಗೆ ಸಿಗಬೇಕಿರುವ ಪಾಲಿಸಿ ಹಣವನ್ನು ಮರಳಿಸುತ್ತಾರೆ. ಸದ್ಯ ಎಲ್‌ಐಸಿ ಈ ವ್ಯವಸ್ಥೆ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ವಿವಿಧ ವಿಮೆ ಸಂಸ್ಥೆಗಳೂ ಇಂತಹ ವೆಬ್‌ಸೈಟ್‌ ಬಿಡುಗಡೆಗೊಳಿಸಿ ಗ್ರಾಹಕರಿಗೆ ಅನುಕೂಲ ಮಾಡಲು ತಯಾರಿ ನಡೆಸುತ್ತಿವೆ.

ಉಳಿದ ಹಣ ಯಾರ ಕೈ ಸೇರಲಿದೆ?:ಪಾಲಿಸಿದಾರರು ಅಥವಾ ಅವರ ಸಂಬಂಧಿ ಕರು ಸೂಕ್ತ ದಾಖಲೆ ಸಲ್ಲಿಸಿ ವಿಮೆ ಹಣ ಮರಳಿ ಪಡೆಯಲು 10 ವರ್ಷ ಕಾಲಾವಕಾಶ ನೀಡಿದೆ. ಈ ಅವಧಿ ನಂತರ ವಾರಸುದಾರರಿಲ್ಲದೆ ಉಳಿದಿರುವ ಹಣವನ್ನು ಐಆರ್‌ಡಿಎಐ ನಿರ್ದೇಶನದಂತೆ ಕೇಂದ್ರ ಸರ್ಕಾರದ ಅ ಧೀನದಲ್ಲಿರುವ ಹಿರಿಯ ನಾಗರಿಕರ ಕಲ್ಯಾಣ ನಿಧಿ ಗೆ ಜಮೆ ಮಾಡಲಾಗುತ್ತದೆ. 25 ವರ್ಷದ ಒಳಗೆ ಈ ಹಣಕ್ಕೆ ವಾರಸುದಾರರು ಪತ್ತೆಯಾಗದಿದ್ದರೆ ಒಟ್ಟು ಹಣ ಕೇಂದ್ರ ಸರ್ಕಾರದ ಅಧೀನಕ್ಕೊಳಪಡಲಿದೆ. ಈ ಪ್ರಕ್ರಿಯೆ ನಂತರ ಪಾಲಿಸಿದಾರರಾಗಲಿ, ಇನ್ಸೂರೆನ್ಸ್‌ ಸಂಸ್ಥೆಗಳಿಗಾಗಲಿ ಹಣ ಮರಳಿ ಪಡೆಯಲಾಗದು.

ಹಲವು ಗ್ರಾಹಕರು ತಮ್ಮ ವಿಳಾಸ ಬದಲಾದರೆ ಮಾಹಿತಿ ನೀಡಿರುವುದಿಲ್ಲ. ಇನ್ನೂ ಕೆಲವರು ಒಂದೆರಡು ವರ್ಷ ಕಂತು ತುಂಬಿ ಬಿಟ್ಟಿರುತ್ತಾರೆ. ಪಾಲಿಸಿ ಕುರಿತು ಕಚೇರಿಗೆ ಬಂದು ಮಾಹಿತಿ ಪಡೆಯಬೇಕು. ಬದಲಾದ ವಿಳಾಸ, ಬ್ಯಾಂಕ್‌ ಖಾತೆ, ಆಧಾರ್‌ ಸಂಖ್ಯೆ ಜೋಡಣೆ ಮೂಲಕ ಕ್ಲೇಮ್‌ ಹಣ ನೇರವಾಗಿ ಖಾತೆಗೆ ಸೇರುವಂತೆ ಮಾಡಿಕೊಳ್ಳಬಹುದು.
– ಶ್ರೀನಿವಾಸ ಪ್ರಸಾದ, ರಿಕ್ಯೂಟ್‌ಮೆಂಟ್‌ ಆ್ಯಂಡ್‌ ಡೆವಲಪಮೆಂಟ್‌ ಆಫೀಸರ್‌(ಎಲ್‌ಐಸಿ).

Advertisement

– ಸೋಮಶೇಖರ ಎಸ್‌.ಹತ್ತಿ

Advertisement

Udayavani is now on Telegram. Click here to join our channel and stay updated with the latest news.

Next