Advertisement

ಇನ್ನು ಆನ್‌ಲೈನ್‌ನಲ್ಲೇ ಸಿಗುತ್ತೆ ಲೈಸನ್ಸ್‌

05:09 PM Jun 02, 2018 | Team Udayavani |

ಬೆಳಗಾವಿ: ಇನ್ನು ಮುಂದೆ ವಾಹನ ಚಾಲನಾ ಲೈಸನ್ಸ್‌, ನವೀಕರಣ ಸೇರಿದಂತೆ ಸಾರಿಗೆ ಇಲಾಖೆಯ ಒಟ್ಟು 21 ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ಜೂ. 5ರಿಂದ ವೆಬ್‌ ಆಧಾರಿತ ಗಣಕೀಕೃತ ಸಾರಥಿ-4ರ ಅಡಿಯಲ್ಲಿಯೇ ಪಡೆಯಬಹುದಾಗಿದೆ ಎಂದು ಉಪಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಾರಥಿ-3 ಅಡಿಯಲ್ಲಿ ನೀಡಲಾಗುತ್ತಿದ್ದ ಸೇವೆಗಳನ್ನು ನಿಲ್ಲಿಸಲಾಗುತ್ತಿದ್ದು, ಜೂ.5ರಿಂದ ವೆಬ್‌ ಆಧಾರಿತ ಗಣಕೀಕೃತ ಸಾರಥಿ-4 ರ ಅಡಿಯಲ್ಲಿ ಕಲಿಕಾ ಚಾಲನಾ ಪರೀಕ್ಷೆಯ ಕಾರ್ಯವನ್ನು ಕಡ್ಡಾಯವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. ಸಾರಿಗೆ ಸಚಿವಾಲಯ ವತಿಯಿಂದ ಸಾರಥಿ-4 ಸಾಪ್ಟವೇರ್‌ ಅಡಿಯಲ್ಲಿ ಗಣಕೀಕೃತ ಕಲಿಕಾ, ಪಕ್ಕಾ, ನವೀಕರಣ, ಇತ್ಯಾದಿ ಲೈಸನ್ಸ್‌ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ನಡೆಸಲಾಗುವುದು ಸಾರಥಿ-4 ಸಾಫ್ಟವೇರ್‌ ಅಡಿಯಲ್ಲಿ ಚಾಲನಾ ಪರವಾನಿಗೆ, ಡಿಎಲ್‌ ಸೇರಿದಂತೆ ಒಟ್ಟು 21 ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ವೆಬ್‌ಸೈಟ್‌: https:/parivahan.go.in/ parivahan ದಲ್ಲಿ ಸಾರ್ವಜನಿಕರು ಎಲ್ಲ ಸೇವೆಗಳ ಹಾಗೂ ಅದಕ್ಕೆ ಬೇಕಾಗುವ ದಾಖಲಾತಿಗಳು, ಶುಲ್ಕಗಳ ವಿವರಗಳನ್ನು ಪಡೆಯಬಹುದಾಗಿದೆ. ವಾಟ್ಸ್‌ಅಪ್‌ ನಂ: 9449863459 ಮತ್ತು ಸಹಾಯವಾಣಿ ಕೇಂದ್ರ 080-25436500 ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಲೈಸನ್ಸ್‌ ಶುಲ್ಕದ ಮೊತ್ತವನ್ನು ವೆಬ್‌ಸೈಟ್‌: https:/rtoeservices.karnataka.go.in/khajane ದಲ್ಲಿ ಇ-ಪೇಮೆಂಟ್‌ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸುವುದರಿಂದ ಸಾರ್ವಜನಿಕರು ಮಧ್ಯವರ್ತಿಗಳ ಬಳಿ ಹೋಗಿ ಹಣ ಹಾಗೂ ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.

ಅರ್ಜಿ ಸಲ್ಲಿಕೆ ಹೇಗೆ: ಇನ್ನು ಮುಂದೆ ಸಾರ್ವಜನಿಕರು ಚಾಲನಾ ಪರವಾನಿಗೆಗಾಗಿ ಯಾವುದೇ ದಾಖಲೆಗಳನ್ನು ಸಾರಿಗೆ ಕಚೇರಿಗೆ ತರುವ ಅಗತ್ಯವಿಲ್ಲ. ದಾಖಲಾತಿಗಳ ಮೂಲ ಪ್ರತಿಯನ್ನು ತಂತ್ರಾಂಶದಲ್ಲಿ ಅಪಲೋಡ್‌ ಮಾಡಬೇಕು. ಅಪಲೋಡ್‌ ಮಾಡಿದ ನಂತರ ಅರ್ಜಿಯ ಪ್ರಿಂಟ್‌ಔಟ್‌ ಪಡೆದು ಅದನ್ನು ಮಾತ್ರ ಸಾರಿಗೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು. ನಂತರ ಸಾರಿಗೆ ಇಲಾಖೆಯ ಅಧಿಕಾರಿಗಳು ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಿ ಪರೀಕ್ಷೆಗೆ ಅವಕಾಶ ನೀಡುತ್ತಾರೆ ಎಂದರು.

ಅರ್ಜಿ ಸಲ್ಲಿಸಿದವರಿಗೆ ಸಾರಿಗೆ ಇಲಾಖೆಯ ಕಚೇರಿಯ ಪರೀಕ್ಷಾ ಕೊಠಡಿಯಲ್ಲಿ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಒಟ್ಟು 15 ಪ್ರಶ್ನೆಗಳನ್ನು ಕೊಡಲಾಗುವುದು. ಈ ಪ್ರಶ್ನೆಗಳಲ್ಲಿ ಕನಿಷ್ಠ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡಿದವರು ಉತ್ತೀರ್ಣರಾಗುತ್ತಾರೆ. ಪ್ರಶ್ನೆಗಳು
ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಇರುತ್ತವೆ. ಪ್ರಶ್ನೆಗಳನ್ನು ಕೇಂದ್ರ ಸಾರಿಗೆ ಸಚಿವಾಲಯವೇ ನೇರವಾಗಿ ಆನ್‌ಲೈನ್‌ನಲ್ಲಿ ನೀಡುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಮತ್ತೆ ಶುಲ್ಕ ಪಾವತಿಸಿ, ಪರೀಕ್ಷೆಗೆ ಹಾಜರಾಗಬಹುದು ಎಂದು ವಿವರಿಸಿದರು. ವಾಹನ
ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಹಾಗೂ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಸುರಕ್ಷಿತ ಪ್ರಯಾಣ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು
ಹೇಳಿದರು. ಆರ್‌ಟಿಒ ಇನ್ಸಪೆಕ್ಟರ್‌ ಸಿ.ಎಸ್‌. ಮಠಪತಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಆಟೋರಿಕ್ಷಾ ಚಾಲಕರು ನಿಯಮ ಪಾಲಿಸಲಿ: ಮಗದುಮ್‌ ಎಚ್ಚರಿಕೆ
ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋರಿಕ್ಷಾ ಚಾಲಕರು ನಿಗದಿತ ಮಕ್ಕಳನ್ನು ಮಾತ್ರ ಆಟೋದಲ್ಲಿ ಕರೆದೊಯ್ಯಬೇಕು. ಹೆಚ್ಚು ಮಕ್ಕಳನ್ನು ತುಂಬಿದರೆ ಅಂತಹ ಆಟೋಗಳ ಚಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಚಾಲಕರ ಲೈಸನ್ಸ್‌ ವಶಪಡಿಸಿಕೊಳ್ಳಲಾಗುವುದು. ಈಗಾಗಲೆ ಅರ್‌ಟಿಒ ಇನ್ಸಪೆಕ್ಟರ್‌ಗಳನ್ನು ಆಯಾ ಸ್ಥಳದಲ್ಲಿ ನಿಲ್ಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ 3ರಿಂದ 6 ತಿಂಗಳವರೆಗೆ ಲೈಸನ್ಸ್‌ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆಟೋ ಮೀಟರ್‌ ಕುರಿತು ಸಾರ್ವಜನಿಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಸಾರ್ವಜನಿಕರು ದೂರು ನೀಡಿದರೆ ಹೆಚ್ಚು ಬಾಡಿಗೆ ಪಡೆಯುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌ ತಿಳಿಸಿದರು.

ಡ್ರೈವಿಂಗ್‌ ಟ್ರ್ಯಾಕ್ ನಿರ್ಮಾಣ ಶೀಘ್ರ
ನಗರದ ಹೊರವಲಯದ ಕಣಬರಗಿಯಲ್ಲಿ ನೂತನ ಡ್ರೈವಿಂಗ್‌ ಟ್ರ್ಯಾಕ್ ಇನ್ನು ಕೆಲವು ತಿಂಗಳಲ್ಲಿ ಅಥವಾ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಈ ಡ್ರೈವಿಂಗ್‌ ಟ್ರ್ಯಾಕ್ ಗಣಕೀಕೃತ, ಹಾಗೂ ಸೆನ್ಸರ್‌ವುಳ್ಳದ್ದು ಆಗಿರಲಿದೆ. ಅತ್ಯಾಧುನಿಕ ಸೌಲಭ್ಯಗಳ್ಳುಳ್ಳ ಟ್ರ್ಯಾಕ್ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next