ನವದೆಹಲಿ: ಡಿವಿಡೆಂಡ್ ಮೇಲಿನ ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಲೈಫ್ ಇನ್ಸುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(LIC)ದ ಷೇರ್ ಹೋಲ್ಡರ್ಸ್ ಜುಲೈ 19ರೊಳಗೆ ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ PAN (Permanent Account Number) ಸಂಖ್ಯೆಯನ್ನು ಅಪ್ ಡೇಟ್ ಮಾಡುವಂತೆ ಸಲಹೆ ನೀಡಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ FIR ದಾಖಲು: ಆಗಿದ್ದೇನು?
ಆದಾಯ ತೆರಿಗೆ (Income Tax) ಕಾಯ್ದೆ 1961ರ ನಿಬಂಧನೆಗಳ ಅಡಿಯಲ್ಲಿ ಮೂಲ ತೆರಿಗೆ ಕಡಿತಗೊಳಿಸಬೇಕಾದ ಸೂಕ್ತವಾದ ತೆರಿಗೆ ದರ ನಿರ್ಧರಿಸಲು ನಮಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇಶೀಯ ಷೇರುದಾರರು ಮತ್ತು ಅನಿವಾಸಿ ಸದಸ್ಯರು ತಮ್ಮ ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆಯನ್ನು ಅಪ್ ಡೇಟ್ ಮಾಡುವಂತೆ ಎಲ್ ಐಸಿ ಮನವಿ ಮಾಡಿಕೊಂಡಿದೆ.
2024ರ ಜುಲೈ 19ರ ಸಂಜೆ 5ಗಂಟೆ ನಂತರ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಸಂವಹನಕ್ಕೆ ಅವಕಾಶ ಇರುವುದಿಲ್ಲ ಎಂದು ಎಲ್ ಐಸಿ ಪ್ರಕಟನೆ ಸ್ಪಷ್ಟಪಡಿಸಿದೆ. ಒಂದು ವೇಳೆ ವಿವರಗಳನ್ನು ಅಪ್ ಡೇಟ್ ಮಾಡದಿದ್ದಲ್ಲಿ, ಡಿವಿಡೆಂಡ್ ಮೇಲೆ ಅಧಿಕ ಟಿಡಿಎಸ್ ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ.
ಮೇ 27ರಂದು ನಡೆದ ಎಲ್ ಐಸಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ, 2023-24ನೇ ಸಾಲಿನ ತಲಾ 10 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ತಲಾ 6 ರೂಪಾಯಿ ಲಾಭಾಂಶ ನೀಡಲು ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.
ಆಗಸ್ಟ್ 22ರಂದು ನಡೆದ 3ನೇ ವಾರ್ಷಿಕ ಮಹಾಸಭೆಯಲ್ಲೂ ನಿರ್ದೇಶಕ ಮಂಡಳಿಯು ಒಂದೇ ತೆರನಾದ ಶಿಪಾರಸು ಮಾಡಿರುವುದಾಗಿ ವರದಿ ವಿವರಿಸಿದೆ. 30 ದಿನದೊಳಗೆ ಅರ್ಹ ಷೇರುದಾರರಿಗೆ ಡಿವಿಡೆಂಡ್ ಲಾಭಾಂಶ ನೀಡಲಾಗುವುದು ಎಂದು ಎಲ್ ಐಸಿ ತಿಳಿಸಿದೆ.