ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಷೇರು ಮಾರುಕಟ್ಟೆಗೆ ಲಗ್ಗೆಯಿಡುವ ವಿಚಾರ ಎಲ್ಲರಲ್ಲೂ ಭಾರೀ ಕುತೂಹಲ ಹುಟ್ಟಿಸಿದೆ.
ಸದ್ಯದಲ್ಲೇ ಎಲ್‌ಐಸಿ ಷೇರು ಮಾರಾಟ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್‌ಐಸಿ ಪಾಲಿಸಿದಾರರಿಗೆ ಅವರು ಕೊಳ್ಳಬಹುದಾದ ಷೇರುಗಳ ಮೌಲ್ಯದ ಮೇಲೆ ಶೇ. 5ರಷ್ಟು ರಿಯಾಯಿತಿ ಸಿಗಬಹುದು. ಕಂಪನಿಯ ಉದ್ಯೋಗಿಗಳಿಗೂ ಇದೇ ರೀತಿಯ ರಿಯಾಯಿತಿ ಸಿಗಬಹುದು ಎಂದು ಕೆಲವು ಮೂಲಗಳು ತಿಳಿಸಿವೆ.
ಕೇಂದ್ರ ಹಣಕಾಸು ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಕೂಡ ಇದೇ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸಿದ್ದರಾಮಯ್ಯ
“ಎಲ್‌ಐಸಿಯ ಷೇರು ಮಾರಾಟಕ್ಕೆ ಸಂಬಂಧಿಸಿದಂತೆ ಕೆಲವಾರು ಸೌಲಭ್ಯಗಳನ್ನು ಈಗಾಗಲೇ ಆ ಕಂಪನಿಗೆ ಕಲ್ಪಿಸಿಕೊಡಲಾಗಿದೆ. ಅದರಂತೆ, ಒಟ್ಟಾರೆ ಷೇರುಗಳ ಶೇ. 10ರಷ್ಟನ್ನು ಪಾಲಿಸಿದಾರರಿಗೆ ಸ್ಪರ್ಧಾತ್ಮಕವಾಗಿ, ರಿಯಾಯಿತಿ ದರದಲ್ಲಿ ನೀಡಬಹುದು ಎಂದು ಹೇಳಲಾಗಿದೆ. ಎಲ್‌ಐಸಿಯ ಉದ್ಯೋಗಿಗಳಿಗೂ ಇದೇ ಮಾದರಿ ಅನ್ವಯವಾಗಬಹುದು” ಎಂದು ಹೇಳಲಾಗಿದೆ.
ಮತ್ತೊಂದೆಡೆ, ಯಾವುದೇ ಕಂಪನಿ, ಹೊಸತೊಂದು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಾಗ ಬಿಡುಗಡೆ ಮಾಡಲಾಗುವ “ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್’ (ಡಿಆರ್‌ಎಚ್‌ಪಿ) ದಾಖಲೆಯನ್ನು ಎಲ್‌ಐಸಿ, ಫೆ. 10ರಂದು ಸಲ್ಲಿಸುವ ಸಾಧ್ಯತೆಯಿದೆ.