ಹಿರೇಕೆರೂರ: ಇಲ್ಲಿನ ಪಟ್ಟಣ ಪಂಚಾಯತ ಕಾರ್ಯಾಲಯದ ಮೇಲ್ಮಹಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕರ ಗ್ರಂಥಾಲಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪಟ್ಟಣದಲ್ಲಿ 05-01-1981ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಸಾರ್ವಜನಿಕರ ಗ್ರಂಥಾಲಯ ನಂತರ ಸುಮಾರು 25 ವರ್ಷಗಳಿಂದ ಪಪಂ ಕಾರ್ಯಾಲಯದಲ್ಲೇ ಕಾರ್ಯ ನಿರ್ವಹಿಸುತ್ತಿದೆ.
ಮೇಲ್ಮಹಡಿಯಲ್ಲಿ ಗ್ರಂಥಾಲಯ ಇರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಂಥಾಲಯಕ್ಕೆ ತೆರಳುವ ಮೆಟ್ಟಿಲುಗಳ ಬದಿಯಲ್ಲಿ ಸೂಕ್ತ ರಕ್ಷಣೆ ಇಲ್ಲದಾಗಿದೆ. ಶೌಚಾಲಯ ಕೊರತೆಯೂ ಇದೆ. ಪಪಂ ಕಚೇರಿ ಅವಧಿ ಮುಗಿದ ನಂತರ ಮುಖ್ಯ ದ್ವಾರ ಮುಚ್ಚುವುದರಿಂದ ಗ್ರಂಥಾಲಯ ಇರುವುದು ಸಹ ಗೊತ್ತಾಗದ ಸ್ಥಿತಿಯಿದೆ. ಗ್ರಂಥಾಲಯದಲ್ಲಿ ಸಾಕಷ್ಟು ಸ್ಥಳದ ಕೊರತೆಯಿದೆ. ಎರಡು ಕೋಣೆಗಳಿದ್ದು, ಒಂದರಲ್ಲಿ ಓದುಗರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೊಂದು ಇಕ್ಕಟ್ಟಾದ ಕೋಣೆಯಲ್ಲಿ ಪುಸ್ತಗಳಿರುವ ಕಪಾಟು ಇಡಲಾಗಿದೆ.
ಓದುಗರು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥಿತ ಜಾಗವೇ ಇಲ್ಲದಂತಾಗಿದೆ. ಗ್ರಂಥಾಲಯದಲ್ಲಿ 873 ಜನ ಸದಸ್ಯತ್ವ ಪಡೆದಿದ್ದಾರೆ. 200 ರೂ. ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದ್ದು, ಸದಸ್ಯತ್ವ ಪಡೆದವರಿಗೆ ಮೂರು ಪುಸ್ತಕಗಳನ್ನು 15 ದಿನಗಳವರೆಗೆ ನೀಡಲಾಗುತ್ತದೆ. ನಿತ್ಯ ಪತ್ರಿಕೆ ಹಾಗೂ ಪುಸ್ತಕ ಓದಲು 50ಕ್ಕೂ ಅ ಧಿಕ ಓದುಗರು ಬರುತ್ತಿದ್ದಾರೆ. ಗ್ರಂಥಾಲಯದಲ್ಲಿ 14,947 ಪುಸ್ತಕಗಳಿದ್ದು ಇದರಲ್ಲಿ ಕಥೆ, ಕಾದಂಬರಿ, ಕವನ, ಜೀವನ ಚರಿತ್ರೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನಕೂಲವಾಗುವಂತಹ ಪುಸ್ತಕಗಳಿವೆ. ಜತೆಗೆ ದಿನಪ್ರತಿಕೆಗಳು, ವಾರ, ಪಾಕ್ಷಿಕ ಮತ್ತು ಮಾಸಿಕ ಪ್ರತಿಕೆಗಳು ಓದುಗರಿಗೆ ಲಭ್ಯ ಇವೆ.
-ಸಿದ್ಧಲಿಂಗಯ್ಯ ಗೌಡರ