Advertisement

ಡಾ|ಗಿರಡ್ಡಿ ತವರಲ್ಲೇ ಗ್ರಂಥಾಲಯಕ್ಕಿಲ್ಲ ಸೂರು

09:40 AM Oct 23, 2019 | Suhan S |

ನರೇಗಲ್ಲ: ಶ್ರೇಷ್ಠ ಸಾಹಿತಿ, ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ತವರು ಅಬ್ಬಿಗೇರಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗಿ 15 ವರ್ಷ ಕಳೆದರೂ ಶಾಶ್ವತ ಸೂರಿಲ್ಲ. ಮೂಲ ಸೌಕರ್ಯಗಳ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವಂತಿಲ್ಲ. ಹೀಗಾಗಿ ಇದು ಒಂದು ರೀತಿಯ ಅನಾಥ ಗ್ರಂಥಾಲಯವೆನಿಸಿದೆ.

Advertisement

ಸಾರ್ವಜನಿಕ ಗ್ರಂಥಾಲಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನದ ಆಲಯ. ಅಪಾರ ಓದುಗರು ಗ್ರಂಥಾಲಯಕ್ಕೆ ಬರುತ್ತಿದ್ದರೂ ಕುಳಿತು ಓದಲು ಸ್ಥಳವಿಲ್ಲ. ಗ್ರಾ.ಪಂ ವಾಣಿಜ್ಯ ಕಟ್ಟಡದ ನೆಲ ಅಂತಸ್ಸಿನಲ್ಲಿ ಈ ಗ್ರಂಥಾಲಯ ನಡೆಯುತ್ತಿದೆ. ಸೂಕ್ತ ಗಾಳಿ, ಬೆಳಕಿನ ಕೊರತೆ ಎದುರಿಸುತ್ತಿದೆ. ಚಿಕ್ಕ ಅಂಗಡಿಯಂತಹ ಒಂದು ಮಳಿಗೆಯಲ್ಲಿ ಗ್ರಂಥಾಲಯವಿದ್ದು, ಬರುವ ಅಪಾರ ಸಂಖ್ಯೆಯ ಓದುಗರಿಗೆ ಈ ವಿಸ್ತೀರ್ಣ ಯಾವುದಕ್ಕೂ ಸಾಲುತ್ತಿಲ್ಲ. ಒಳಗಡೆ ಕುಳಿತರೆ ಉಸಿರುಗಟ್ಟುವ ವಾತಾವರಣ. ಜಾಗವಿಲ್ಲದಕ್ಕೆ ಹೊರಗೆ ನಿಂತು ಓದುವ ಸ್ಥಿತಿ ನಿರ್ಮಾಣವಾಗಿದೆ.

ಮೂಲ ಸೌಕರ್ಯವಿಲ್ಲ : ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಅ ಧಿಕ ಜನಸಂಖ್ಯೆ ಹೊಂದಿದೆ. ಅಲ್ಲದೇ ಶ್ರೇಷ್ಠ ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ, ಡಿ.ಎ. ಉಪಾಧ್ಯ, ಸೋಮಶೇಖರ ಇಮ್ರಾಪುರ, ಕೆ.ಬಿ. ತಳವಗೇರಿ ಸೇರಿದಂತೆ ಮಹಾನ್‌ ಸಾಹಿತಿಗಳು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಷ್ಟೇ ಅಲ್ಲ ಶಾಸನ, ಶಿಲ್ಪ ಕಲೆ, ಪುರಾತನ ದೇವಸ್ಥಾನ, ಕೆಂಪುಕೆರೆ ಗ್ರಾಮದಲ್ಲಿ ಪ್ರಸಿದ್ಧವಾಗಿವೆ. ಗ್ರಂಥಾಲಯಕ್ಕೆ ಬರುವವರಿಗೆ ಕನಿಷ್ಠ ಕುಡಿಯುವ ನೀರಿನ ಸೌಕರ್ಯವಿಲ್ಲ. ಶೌಚಾಲಯವಿಲ್ಲ. ಕಿರಿದಾದ ಸ್ಥಳದಲ್ಲಿ ಗ್ರಂಥಾಲಯ ಇರುವುದರಿಂದ ಓದಲು ಕಿರಿಕಿರಿಯಾಗುತ್ತಿದೆ ಎನ್ನುತ್ತಾರೆ ಓದುಗರು.

ನಾಮಫಲಕವಿಲ್ಲ: ಇಲ್ಲಿ ಗ್ರಂಥಾಲಯವಿದೆ ಎಂದು ತಿಳಿಸುವ ಕನಿಷ್ಠ ನಾಮಫಲಕವೂ ಇಲ್ಲ. ಇಲ್ಲಿ 164 ಮಂದಿ ಸದಸ್ಯರು ನೊಂದಾಯಿಸಿಕೊಂಡಿದ್ದು, ನಿತ್ಯ ಸುಮಾರು 500ಕ್ಕೂ ಹೆಚ್ಚು ಮಂದಿ ಗ್ರಂಥಾಯಲಕ್ಕೆ ಭೇಟಿ ನೀಡುತ್ತಾರೆ. 3 ದಿನಪತ್ರಿಕೆಗಳು ಮಾತ್ರ ಬರುತ್ತಿದ್ದು, ಇದಕ್ಕೆ ಸರ್ಕಾರದಿಂದ ತಿಂಗಳಿಗೆ 400 ರೂ. ಮಾತ್ರ ಅನುದಾನ. ವಾರಪತ್ರಿಕೆ, ಮಾಸಿಕ ಪತ್ರಿಕೆಗಳು ಲಭ್ಯವಿಲ್ಲ.

3 ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹ: 2004ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಸುಮಾರು ಒಂದು ಸಾವಿರ ಪುಸ್ತಕಗಳಿದ್ದವು. ನಂತರದಲ್ಲಿ ಇಲಾಖೆಯಿಂದ ಆಗೊಮ್ಮೆ-ಈಗೊಮ್ಮೆ ಬರುವ ಪುಸ್ತಕಗಳು ಸೇರಿ 3 ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹವಿದೆ. ಅವುಗಳನ್ನು ಎಲ್ಲಿಡಬೇಕು? ಎಂಬುದೇ ಸಿಬ್ಬಂದಿಗೆ ಸವಾಲಾಗಿದೆ. ಗ್ರಂಥಾಲಯವನ್ನು ಆಧುನೀಕರಣ ಮತ್ತು ಡಿಜಿಟಲೀಕರಣಗೊಳಿಸುವ ಮಾತು ದೂರ. ಹಳೆಯ ಕಾಲದ ಮಾದರಿಯಲ್ಲಿ ಇರುವ ಪುಸ್ತಕಗಳನ್ನು ಓದುಗರಿಗೆ ನೀಡಲಾಗುತ್ತಿದೆ.

Advertisement

ಸಾಹಿತಿ ಅಳಿದರೂ ಸಾಹಿತ್ಯ ಉಳಿಯುವುದು. ಗ್ರಂಥಾಲಯಗಳೇ ಜ್ಞಾನಾರ್ಜನೆ ಸಾಗರ. ಓದುಗರಿಲ್ಲದೇ ಲೇಖಕರು ಇರಲು ಅಸಾಧ್ಯ. ಜೀವನ ಕಟ್ಟುವಲ್ಲಿ ಗ್ರಂಥಾಲಯ ಅವಶ್ಯ. ಬದುಕು ಕಟ್ಟಲು ಅನೇಕ ಕಾದಂಬರಿ ಓದಬೇಕು. ಅದಕ್ಕಾಗಿ ಗ್ರಂಥಾಲಯ ಅಭಿವೃದ್ಧಿ ಅನಿವಾರ್ಯವಾಗಿದೆ.ಸೋಮಣ್ಣ ಹರ್ಲಾಪುರ, ಹಿರಿಯ ಓದುಗ

 

-ಸಿಕಂದರ ಅಲಿ

Advertisement

Udayavani is now on Telegram. Click here to join our channel and stay updated with the latest news.

Next