Advertisement

ಇದ್ದೂ ಇಲ್ಲದಂತಾಗಿದೆ ಗ್ರಂಥಾಲಯ

02:22 PM Oct 27, 2019 | Suhan S |

ಕಾರಟಗಿ: ನೂತನ ತಾಲೂಕು ಕೇಂದ್ರವಾದ ಕಾರಟಗಿ ಪಟ್ಟಣದಲ್ಲಿ ಗ್ರಂಥಾಲಯವಿದ್ದರೂ ಓದುಗರ ಉಪಯೋಗಕ್ಕಿಲ್ಲವಾಗಿದೆ. ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಓದುಗರಿಗೆ ಅವಶ್ಯ ಪುಸ್ತಕಗಳು, ಸೂಕ್ತ ಸೌಕರ್ಯ ಗ್ರಂಥಾಲಯದಲಿಲ್ಲ. ಪಟ್ಟಣದಲ್ಲಿ ಗ್ರಂಥಾಲಯಕ್ಕೆ ಜನಪ್ರತಿನಿಧಿ  ಗಳಿಂದಾಗಲಿ, ಪುರಸಭೆ ಆಡಳಿತದಿಂದಾಗಲಿ ಹೆಚ್ಚಿನಪ್ರೋತ್ಸಾಹ ಸಿಗದಿರುವುದು ಇಲ್ಲಿನ ಜನತೆಯ ದೌರ್ಭಾಗ್ಯ.

Advertisement

ಯುವ ಪೀಳಿಗೆಯ ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಜೀವನ ರೂಪಿಸಿಕೊಳ್ಳಲು ಗ್ರಂಥಾಲಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ, ಪುರಸಭೆಗೆ ಸಂಬಂಧಿ ಸಿದ ಎರಡು ಅಂತಸ್ತಿನ ಹಳೆಯ ಕಟ್ಟಡಲ್ಲಿ ಗ್ರಂಥಾಲಯವಿದೆ. ಈ ಕಟ್ಟಡ ಮಳೆ ಬಂದರೆ ಸೋರುತ್ತದೆ, ಕಿಟಕಿಗಳು ತುಕ್ಕು ಹಿಡಿದಿವೆ. ಕಟ್ಟಿಗೆಯ ಕದಗಳು ಆಗಲೋ, ಇಗಲೋ ಮುರಿದು ಬೀಳುವ ಸ್ಥಿತಿಯಲ್ಲಿವೆ. ಗ್ರಂಥಾಲಯದಲ್ಲಿ ಕಬ್ಬಿಣದ ಮುರುಕು ಕುರ್ಚಿಗಳು ಎರಡು ಟೆಬಲ್‌ಗ‌ಳಿವೆ. ರ್ಯಾಕ್‌ಗಳಿದ್ದರೂ ಪುಸ್ತಕಗಳನ್ನು ಮಾತ್ರ ಗೋಣಿಚೀಲ, ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಇಟ್ಟಿದ್ದಾರೆ. ಮುಖ್ಯವಾಗಿ ಗ್ರಂಥಾಲಯಕ್ಕೆ ವಿದ್ಯುತ್‌  ಸಂಪರ್ಕವಿಲ್ಲ

. ಜಿಲ್ಲಾ ಗ್ರಂಥಾಲಯದಿಂದ ಮಾಸಿಕ 400 ರೂ. ಮಾತ್ರ ಸಂದಾಯವಾಗುತ್ತಿದ್ದು, ಓದುಗರಿಗೆ ಬೇಕಾದ ದಿನಪತ್ರಿಕೆಗಳು ಲಭ್ಯವಿಲ್ಲ. ಎರಡು ದಿನಪತ್ರಿಕೆಗಳು, ಒಂದು ಮಾಸಿಕ ಪತ್ರಿಕೆ ಈಗ್ರಂಥಾಲಯದಲ್ಲಿ ಲಭ್ಯ ಎನ್ನುತ್ತಾರೆ ಓದುಗರು. ಇನ್ನು ಗ್ರಂಥಾಲಯದಲ್ಲಿ ಕವನ ಸಂಕಲನ, ಕಥೆ, ಕಾದಂಬರಿ, ಮಕ್ಕಳ ಕಥೆಗಳು ಸೇರಿದಂತೆ ಸುಮಾರು 2500 ಪುಸ್ತಕಗಳು ಇದ್ದರೂ ಕೂಡ ಪುಸ್ತಕಗಳ ಓದುಗರ ಸಂಖ್ಯೆ ಅತಿವಿರಳ. ಗ್ರಂಥಾಲಯ ಬೆಳಗ್ಗೆ 9:00 ರಿಂದ 11:00 ಗಂಟೆಯವರೆಗೆ ಹಾಗೂ ಸಂಜೆ 4:00 ರಿಂದ 6:00 ಗಂಟೆಯವರೆಗೆ ತೆರೆದಿರುತ್ತದೆ.

ಮಕ್ಕಳೇ ಇಲ್ಲಿ ಹೆಚ್ಚಾಗಿ ಪತ್ರಿಕೆ ಓದಲು ಬರುತ್ತಾರೆ. ಕೆಲ ಸಾಹಿತ್ಯಾಸಕ್ತ ಓದುಗರಿಗೆ ಬೇಕಾದ ಪುಸ್ತಕಗಳು ಲಭ್ಯವಿಲ್ಲ, ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅವಶ್ಯವಾದ ಯಾವುದೇ ಪುಸ್ತಕಗಳು ಲಭ್ಯವಿಲ್ಲ. ಪುಸ್ತಕಗಳನ್ನು ತರಲು ಇಲಾಖೆ ಅನುದಾನ ಒದಗಿಸಬೇಕು ಎನ್ನುತ್ತಾರೆ ಗ್ರಂಥಪಾಲಕ. ಗ್ರಂಥಾಲಯ ನಿರ್ವಹಣೆ ಸಮರ್ಪಕವಾಗಿಲ್ಲ. ನಿಗದಿತ ಸಮಯಕ್ಕೆ ಗ್ರಂಥಾಲಯ ತೆರೆಯುವುದಿಲ್ಲ. ಎರಡು ಪತ್ರಿಕೆಗಳು ಇಲ್ಲಿ ಓದಲು ಸಿಗುತ್ತವೆ. ಪುರಸಭೆ ಆಡಳಿತ ಮಂಡಳಿ ಕೂಡ ಗ್ರಂಥಾಲಯದ ಕಡೆ ಗಮನಹರಿಸುತ್ತಿಲ್ಲ ಹೀಗಾಗಿ ಓದುಗರ ಸಂಖ್ಯೆ ವಿರಳ ಎನ್ನುತ್ತಾರೆ ಓದುಗರು.

 

Advertisement

-ದಿಗಂಬರ ಕುರುಡೇಕರ

Advertisement

Udayavani is now on Telegram. Click here to join our channel and stay updated with the latest news.

Next