ತಾವರಗೇರಾ: ಕುಷ್ಟಗಿ ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಹಾಗೂ ಹೆಚ್ಚಿನ ಜನ ಸಾಂದ್ರತೆ ಹೊಂದಿರುವ ತಾವರಗೇರಾ ಪಟ್ಟಣದಲ್ಲಿ ಏಳು ವರ್ಷಗಳಿಂದ ಗ್ರಂಥಾಲಯ ಇಲ್ಲದಿರುವುದು ಇಲ್ಲಿಯ ಓದುಗರಿಗೆ ಹಾಗೂ ಸಾಹಿತ್ಯ ಆಸ್ತಕರಿಗೆ ನಿರಾಸೆ ಮೂಡಿಸಿದೆ.
ಜ್ಞಾನ ವಿಕಾಸಕ್ಕೆ ದಾರಿಯಾಗಿರುವ ಹಾಗೂ ಸಾಮಾನ್ಯ ಜ್ಞಾನ ಹೆಚ್ಚಳಕ್ಕೆ ಗ್ರಂಥಾಲಯ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಹಿಂದೆ ಪ್ರತಿ ಮಂಡಲ ಪಂಚಾಯಿತಿಗೊಂದು ಗ್ರಂಥಾಲಯ ಮಂಜೂರು ಮಾಡಲಾಗಿದೆ. ಅದರಂತೆ ಪಟ್ಟಣದ ಭಜಂತ್ರಿಯವರ ಓಣಿಯಲ್ಲೂ ಈ ಹಿಂದೆ ಜನ ಶಿಕ್ಷಣ ನಿಲಯ ಎಂಬ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯ ನಡೆಸಲಾಗುತ್ತಿತ್ತು. ಅದನ್ನು ಹಿಂದಿನ ಗ್ರಾಪಂ ಆಡಳಿತ ಮಂಡಳಿಯೇ ನಿರ್ವಹಿಸುತ್ತಿತ್ತು. ಜೊತೆಗೆ ಗ್ರಂಥಪಾಲಕನಿಗೆ ಗೌರವ ಧನ ನೀಡುತ್ತಿತ್ತು. ಹಳೆಯ ಕಟ್ಟಡದಲ್ಲಿ ಕೆಲ ಪತ್ರಿಕೆಗಳು ಮಾತ್ರ ಓದುಗರಿಗೆ ಸಿಗುತ್ತಿದ್ದವು. ನಂತರದಲ್ಲಿ ಕಟ್ಟಡವು ಶಿಥಿಲಗೊಂಡು ಬೀಳುವ ಹಂತದಲ್ಲಿದ್ದ ಕಾರಣ ಅಂದಿನ ಗ್ರಂಥಪಾಲಕರು ಎರಡು ವರ್ಷಗಳ ಕಾಲ ಖಾಸಗಿ ಕಟ್ಟಡದಲ್ಲಿ ಗ್ರಂಥಾಲಯ ನಡೆಸಿದರು.
ಆದರೆ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯಿತಿ ಆದ ನಂತರ ಗ್ರಂಥಾಲಯಕ್ಕೆ ಅನುದಾನ ಹಾಗೂ ನಿರ್ವಹಣೆಯ ವೆಚ್ಚ ನೀಡುವುದನ್ನು ನಿಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಗ್ರಂಥಪಾಲಕ ಆರೇಳು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದ ಗ್ರಂಥಾಲಯವನ್ನು ಮುಚ್ಚಿಕೊಂಡು ಹೋಗಿದ್ದಾರೆ.
ಆದರೆ ಗ್ರಂಥಾಲಯದಲ್ಲಿ ಎಷ್ಟು ಪುಸ್ತಕಗಳು ಇದ್ದವು, ಈಗ ಅವೆಲ್ಲ ಪುಸ್ತಕ ಎಲ್ಲಿವೆ ಎಂಬುದು ತಿಳಿಯದಂತಾಗಿದೆ. ಪಟ್ಟಣದಲ್ಲಿ ಸುಮಾರು 15 ಸಾವಿರ ಜನಸಂಖ್ಯೆ ಹಾಗೂ ಒಂದು ಪ್ರಥಮ ದರ್ಜೆ ಕಾಲೇಜು, ನಾಲು ಪಿಯು ಕಾಲೇಜ್, ಹಲವು ಪ್ರೌಢಶಾಲೆ, ವಿವಿಧಸಂಘ, ಸಂಸ್ಥೆಗಳಿವೆ. ಆದರೆ ಎಲ್ಲಕ್ಕಿಂತ ಅಗತ್ಯವಿರುವ ಗ್ರಂಥಾಲಯ ಮಾತ್ರ ಇಲ್ಲದಂತಾಗಿದೆ. ಜೊತೆಗೆ ಇದುವರೆಗೂ ಕೂಡ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಗ್ರಾಪಂನವರು ಪುನಃ ಗ್ರಂಥಾಲಯ ಪ್ರಾರಂಭಿಸುವ ಕುರಿತು ಚಕಾರವೆತ್ತಿಲ್ಲ.
ಈಗಸ್ಥಳೀಯ ಸಾಹಿತ್ಯ ಆಸಕ್ತರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪದಾಧಿ ಕಾರಿಗಳು ಸೇರಿಕೊಂಡು ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಶಾಸಕರಲ್ಲಿಮನವಿ ಮಾಡಿಕೊಂಡಿದ್ದರಿಂದ ಶಾಸಕರ 25 ಲಕ್ಷ ರೂ. ಅನುದಾನ ನೀಡಿದ್ದು, ಈಗ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭದಲ್ಲಿದೆ.ಆದರೆ ಇಷ್ಟೂ ವರ್ಷ ಕಳೆದರೂ ಇಲಾಖೆಯವರು ಮೌನಕ್ಕೆ ಶರಣಾಗಿದ್ದು ಸಾರ್ವಜನಿಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸ್ಥಳೀಯ ಆಸಕ್ತ ಯುವಕರು ಸೇರಿ ಖಾಸಗಿ ಗ್ರಂಥಾಲಯ ನಡೆಸುತ್ತಿರುವುದು ಸ್ವಲ್ಪ ಮಟ್ಟಿಗೆ ಇಲ್ಲಿಯ ಓದುಗರಿಗೆ ಅನುಕೂಲವಾದಂತಾಗಿದೆ.
-ಎನ್. ಶಾಮೀದ್