ಭಾಲ್ಕಿ: ನಮ್ಮ ಗ್ರಂಥಾಲಯಗಳು ದೇವಸ್ಥಾನಗಳಿಗಿಂತಲೂ ಪವಿತ್ರವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಅಭಿಪ್ರಾಯಪಟ್ಟರು.
ಪಟ್ಟಣದ ರಾಜಮಾತಾ ಜೀಜಾವು ಗ್ರಂಥಾಲಯದಲ್ಲಿ ಸಂಭಾಜಿ ಬ್ರಿಗೆಡ್ ಸಂಘಟನೆ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಜೀಜಾ ಮಾತಾ ಮತ್ತು ವಿವೇಕಾನಂದ ಜಯಂತಿ ಮಹೋತ್ಸವ ಉದ್ಘಾಟಿಸಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತೆ ಶಿಕ್ಷಕಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ರಾಜಮಾತಾ ಜೀಜಾವು ಧರ್ಮ ಸಾಮ್ರಾಜ್ಞಿಯಾಗಿದ್ದರು. ಅವರ ಪಾಲನೆ, ಪೋಷಣೆಯಿಂದಲೇ ಶಿವಾಜಿಯಂತಹ ಚೇತನ ನಮಗೆ ದೊರೆತಿದ್ದು. ಅಲ್ಲದೇ ಸ್ವಾಮಿ ವಿವೇಕಾನಂದರು ಭರತ ಖಂಡವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತರಾಗಿದ್ದರು. ಇವರಿಬ್ಬರ ಜಯಂತಿ ಮಹೋತ್ಸವ ನಿಮಿತ್ಯ ಉತ್ತಮ ಶಿಕ್ಷಕಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಇದೇ ವೇಳೆ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತೆ, ರಾಜ್ಯಮಟ್ಟದ ಕುಸ್ತಿ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಶಿಕ್ಷಕಿ ಪೂರ್ಣಿಮಾ ಪಾಟೀಲರನ್ನು ಗೌರವಿಸಲಾಯಿತು. ಪ್ರೌಢಶಾಲೆ ಶಿಕ್ಷಕರ ಸಂಘದ ಕಾರ್ಯದರ್ಶಿ ದತ್ತು ಕಾಟಕರ ಮಾತನಾಡಿದರು. ಸಂಭಾಜಿ ಬ್ರಿಗೆಡ್ ಜಿಲ್ಲಾ ಸಂಚಾಲಕ ಸತೀಶ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು.
ಹರೀಶ ತಮಗ್ಯಾಳೆ, ಮನೋಜಕುಮಾರ ಸೂರ್ಯವಂಶಿ, ಚಂದ್ರಕಾಂತ ಹುಂಡೆಕರ, ಸುಧಾಕರ ನಾನೆ, ಅನಿಲ ಗಣೂರೆ, ಪಿ.ಎಸ್. ಬಿರಾದಾರ, ಶಿವಕುಮಾರ ಘಂಟೆ, ಮನೋಜ ದಾದಾ, ಇಂದ್ರಜಿತ ವಾಡಿಕರ ಇದ್ದರು. ಪವನ ಸೂರ್ಯವಂಶಿ ಸ್ವಾಗತಿಸಿದರು. ಕಿರಣ ಇಂಗಳೆ ನಿರೂಪಿಸಿದರು. ಎಸ್.ಸ್ವಾಮಿ ವಂದಿಸಿದರು.