ನವದೆಹಲಿ : ಮೊಬೈಲ್ ಫೋನ್ ಉತ್ಪಾದನಾ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿ ಒಂದಾಗಿದ್ದ ಎಲ್‍ಜಿ, ಇದೀಗ ಮೊಬೈಲ್ ಉತ್ಪಾದನೆಯನ್ನು ಖಾಯಂ ಆಗಿ ಸ್ಥಗಿತಗೊಳಿಸಿದೆ. ಇಂದು ಮುಂಜಾನೆ ( ಏಪ್ರಿಲ್ 5 ) ಎಲ್‍ಜಿ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಕೆಲ ವರ್ಷಗಳ ಹಿಂದೆ ಮೊಬೈಲ್ ಉತ್ಪಾದನೆಯಲ್ಲಿ ಆ್ಯಪಲ್ ಹಾಗೂ ಸ್ಯಾಮ್‍ಸಂಗ್ ನಂತರದ ಸ್ಥಾನ ಎಲ್‍ಜಿ ಪಡೆದುಕೊಂಡಿತ್ತು. ಆದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿದ ಸ್ಪರ್ಧೆಯಿಂದಾಗಿ ಸಾಕಷ್ಟು ಹೊಡೆತ ಅನುಭವಿಸುವಂತಾಯಿತು. ವರದಿಗಳ ಪ್ರಕಾರ 2015 ರಿಂದ ಸತತ ನಷ್ಟವನ್ನು ಎದುರಿಸುತ್ತಾ ಬಂದಿದೆ. ಇದುವರೆಗೆ ಬರೋಬ್ಬರಿ 33,010 ಕೋಟಿ ರೂಪಾಯಿಗಳಷ್ಟು ನಷ್ಟ ಮೊಬೈಲ್ ಉತ್ಪಾದನೆಯಿಂದ ಎಲ್‍ಜಿ ಅನುಭವಿಸಿದೆಯಂತೆ.
ಕೆಲ ದಿನಗಳ ಹಿಂದೆಯಷ್ಟೆ ಮೊಬೈಲ್ ಫೋನ್ ಉತ್ಪಾದನೆ ನಿಲ್ಲಿಸುವ ಸೂಚನೆ ನೀಡಿತ್ತು. ಇದೀಗ ಅಧಿಕೃತವಾಗಿ ಪ್ರಕಟಿಸಿದ್ದು, ಪ್ರಪಂಚದಾದ್ಯಂತ ಮೊಬೈಲ್ ಉತ್ಪಾದನಾ ಘಟಕಗಳ ಬಾಗಿಲು ಮುಚ್ಚಲಿವೆ ಎಂದು ಎಲ್‍ಜಿ ಹೇಳಿಕೊಂಡಿದೆ.
ಮೊಬೈಲ್ ಉತ್ಪಾದನೆ ಕೈ ಬಿಟ್ಟಿರುವ ಎಲ್‍ಜಿ ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಘಟಕ, ಕನೆಕ್ಟೆಟ್ ಡಿವೈಸ್ ಹಾಗೂ ಸ್ಮಾರ್ಟ್ ಹೋಮ್ಸ್, ರೋಬೋಟಿಕ್ಸ್ ಹಾಗೂ ಆಟೋಮೊಟೀವ್ ಕೇಂದ್ರಿತ ಗ್ರಾಹಕ ಉಪಕರಣಗಳ ವ್ಯವಹಾರದತ್ತ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದೆ.
ಇನ್ನು ಸ್ಮಾರ್ಟ್ ಫೋನ್ ಉತ್ಪಾದನೆಯ ಘಟಕಗಳನ್ನು ಮುಚ್ಚುತ್ತಿದ್ದರೂ ಕೂಡ ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಬೈಲ್‍ಗಳಿಗೆ ಸಾಫ್ಟ್ ವೇರ್ ಸಂಬಂಧಿಸಿದಂತೆ ಇನ್ನಿತರ ಸೇವೆಗಳು ಮುಂದುವರೆಯಲಿವೆ ಎಂದು ಎಲ್‍ಜಿ ಆಡಳಿತ ಮಂಡಳಿ ಹೇಳಿದೆ.