Advertisement
ಈ ವರ್ಷದ ಆರಂಭದಿಂದ ಖಲಿಸ್ಥಾನಿ ಬೆಂಬಲಿಗರ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡತೊಡಗಿದೆ. ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವ ಮೂಲಕ ಬಾಲ ಬಿಚ್ಚತೊಡಗಿದ ಖಲಿಸ್ಥಾನಿ ಪರ ಬೆಂಬಲಿಗರು ಈಗ ವಿಶ್ವದ ಹಲವೆಡೆ ಅದರಲ್ಲೂ ಬ್ರಿಟನ್, ಅಮೆರಿಕದಂತಹ ವಿಶ್ವದ ದಿಗ್ಗಜ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವಂತಹ ಕುಕೃತ್ಯಕ್ಕೆ ಪ್ರಯತ್ನಿಸಿರುವುದು ಖಂಡನೀಯ.
Related Articles
Advertisement
ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದರ ಹಿಂದೆ ಬಲುದೊಡ್ಡ ಷಡ್ಯಂತ್ರವಿರುವಂತೆ ಕಾಣುತ್ತಿದೆ. ಪಂಜಾಬ್‌ನಲ್ಲಿ ಪ್ರತ್ಯೇಕತಾವಾದದ ಹೋರಾಟವನ್ನು ಮುನ್ನೆಲೆಗೆ ತರುವ ಪ್ರಯತ್ನದ ಜತೆಜತೆಯಲ್ಲಿ ಇದನ್ನೊಂದು ಅಂತಾರಾಷ್ಟ್ರೀಯ ವಿಷಯವನ್ನಾಗಿಸಿ ಭಾರತದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ದಶಕಗಳ ಹಿಂದೆಯೇ ಪಂಜಾಬ್‌ನಲ್ಲಿ ಖಲಿಸ್ಥಾನಿಗಳ ಹಿಂಸಾತ್ಮಕ ಹೋರಾಟದ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದು ಪಂಜಾಬ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ್ದ ಭಾರತದ ವಿರುದ್ಧ ಈಗ ತೆರೆಮರೆಯಲ್ಲಿ ಖಲಿಸ್ಥಾನಿ ಬೆಂಬಲಿಗರು ಮಸಲತ್ತು ನಡೆಸುತ್ತಿರುವುದು ಸ್ಪಷ್ಟವಾಗಿದೆ. ಖಲಿಸ್ಥಾನಿ ಹೋರಾಟಗಾರರಿಗೆ ಪಾಕಿಸ್ಥಾನದಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿ ಸಂಘಟನೆಗಳು ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ವಿಚಾರವೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪುಂಡರ ಜಾಲವನ್ನು ಭೇದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕತಾವಾದ ಮತ್ತು ಮಾನವ ಹಕ್ಕುಗಳನ್ನು ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಖಲಿಸ್ಥಾನಿಪರ ಬೆಂಬಲಿಗರನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಭಾರತ ಸರಕಾರ ಮುಂದಾಗಬೇಕು. ಭಾರತದ ನೆಲದಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ, ವಿಭಜನಕಾರಿ ಮತ್ತು ವಿಚ್ಛಿಧ್ರಕಾರಿ ಶಕ್ತಿಗಳಿಗೆ ನೆಲೆಯೂರಲು ಆಸ್ಪದವೇ ಇಲ್ಲವಾಗಿದ್ದು ಇದಕ್ಕೆ ತಮ್ಮ ನೆಲದಲ್ಲೂ ಅವಕಾಶ ನೀಡದಿರುವಂತೆ ಸ್ಪಷ್ಟ ಮಾತುಗಳಲ್ಲಿ ಜಾಗತಿಕ ಸಮುದಾಯಕ್ಕೆ ಸಂದೇಶ ರವಾನಿಸಬೇಕು. ಜತೆಜತೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಮತ್ತು ಹಿಂದೂ ದೇಗುಲಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರಗಳ ಮೇಲೆ ಒತ್ತಡ ಹೇರಬೇಕು.