Advertisement

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

10:42 AM May 05, 2017 | Team Udayavani |

ಬೀದರ: ಹುದ್ದೆ ತೋರಿಸದ ಕಾಲೇಜು ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮತ್ತು ಸುಮಾರು 11 ವರ್ಷಗಳಿಂದ ವೇತನ ಸಿಗದಿದ್ದಕ್ಕೆ ನೊಂದ ಉಪನ್ಯಾಸಕ ಮತ್ತು ಕುಟುಂಬದವರು ತಮಗೆ ನ್ಯಾಯ ದೊರಕಿಸಿ ಕೊಡಿ, ಇಲ್ಲವಾದಲ್ಲಿ ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

Advertisement

ಔರಾದ ತಾಲೂಕಿನ ಚೊಂಡಿಮುಖೇಡ ಗ್ರಾಮದ ರಮೇಶ ವಾಮನರಾವ್‌ ರಕ್ಷಾಳೆ ನ್ಯಾಯಕ್ಕಾಗಿ ದಯಾಮರಣ ಕೋರಿರುವ ಉಪನ್ಯಾಸಕ. ಅನುದಾನಿತ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಕೊರತೆ ನೆಪವೊಡ್ಡಿ ಉಪನ್ಯಾಸಕ ಹುದ್ದೆ ರದ್ದುಗೊಳಿಸಿದ ಪರಿಣಾಮ ರಮೇಶ ಉದ್ಯೋಗವೂ ಇಲ್ಲದಾಗಿ 2006ರಿಂದ ವೇತನವೂ ದೊರೆತಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ತಮಗೆ ನ್ಯಾಯ ಕೊಡಸುವಂತೆ ಏ. 28ರಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

ವೃತ್ತಿ ಜೀವನದಲ್ಲಿ ಅನುದಾನಿತ ಸಂಸ್ಥೆ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ತಮಗಾದ ಅನ್ಯಾಯ ಮತ್ತು ಅನುಭವಿಸಿದ ನೋವು ಕುರಿತು ವಿವರವಾಗಿ ಪತ್ರದಲ್ಲಿ ಬರೆದಿದ್ದಾರೆ. ದಯಾಮರಣಕ್ಕೆ ಅವಕಾಶ ನೀಡುವಂತೆ ರಮೇಶ ರಕ್ಷಾಳೆ ಜತೆಗೆ ಅವರ ಪತ್ನಿ ಇಂದೂಬಾಯಿ, ಮಕ್ಕಳಾದ ಮನೀಶಾ, ಪ್ರಿಯಾಂಕಾ ಹಾಗೂ ವಿವೇಕಾನಂದ ಅವರೂ ಪತ್ರಕ್ಕೆ ಸಹಿ ಹಾಕಿದ್ದಾರೆ. ರಮೇಶ 11 ವರ್ಷಗಳಿಂದ ವೇತನವನ್ನೂ ಪಡೆದಿಲ್ಲ. ಈ ಕುರಿತು ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವೇತನ ಇಲ್ಲದೇ ಜೀವನ ನಡೆಸುವುದು ದುರ್ಲಭವಾಗಿದೆ ಎಂದು ರಮೇಶ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬದುಕು ಅತಂತ್ರವಾಗಿದೆ: ಉದಯವಾಣಿ ಜತೆಗೆ ಮಾತನಾಡಿದ ಉಪನ್ಯಾಸಕ ರಮೇಶ ರಕ್ಷಾಳೆ, ಶಿಕ್ಷಣ ಸಂಸ್ಥೆ ಮತ್ತು ಪಪೂ ಶಿಕ್ಷಣ ಇಲಾಖೆಯ ಚೆಲ್ಲಾಟದಿಂದ ಉದ್ಯೋಗ ಮತ್ತು ವೇತನ ಸಿಗದೇ ತನ್ನ ಬದುಕು ಅತಂತ್ರವಾಗಿದೆ. ವೇತನ ಸಿಗುವ ಭರವಸೆಯೊಂದಿಗೆ ಹಿರಿಯ ಮಗಳ ಮದುವೆ ಮಾಡಿದ್ದೆ. ಇದಕ್ಕಾಗಿ ಇದ್ದ ಜಮೀನನ್ನು ಸಾಲಕ್ಕೆ ಒತ್ತೆ ಇಟ್ಟಿದ್ದೇನೆ. ಹೊಟ್ಟೆ ಪಾಡಿಗಾಗಿ ಉಪನ್ಯಾಸಕ ಅಥವಾ ಕಚೇರಿಯಲ್ಲಿ ಗುಮಾಸ್ತ ಹುದ್ದೆಯಾದರೂ ಸರಿ ಉದ್ಯೋಗ ಕಲ್ಪಿಸಿ, ಇಲ್ಲವಾದರೆ ಸಾಯಲು ಅನುಮತಿ ನೀಡುವಂತೆ ರಾಷ್ಟ್ರಪತಿಗೆ ಪತ್ರ
ಮೂಲಕ ಮನವಿ ಮಾಡಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next