Advertisement

ಬಜೆಟ್‌ 9000 ಕೋಟಿಗೆ ಇಳಿಸಲು ಸರ್ಕಾರಕ್ಕೆ ಪತ್ರ

06:46 AM Mar 03, 2019 | |

ಬೆಂಗಳೂರು: ಬಿಬಿಎಂಪಿಯಲ್ಲಿ 2019-20ನೇ ಸಾಲಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಮಂಡಿಸಿರುವ ಬಜೆಟ್‌ ಗಾತ್ರ ಅವಾಸ್ತವಿಕವಾಗಿದ್ದು, ಗಾತ್ರವನ್ನು ಕಡಿತಗೊಳಿಸುವಂತೆ ಸ್ವತಃ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರೇ ಸರ್ಕಾರಕ್ಕೆ ಪತ್ರ ಬರೆದಿರುವುದು ಆಡಳಿತ ಪಕ್ಷಗಳಿಗೆ ತೀವ್ರ ಮುಜುಗರ ಉಂಟುಮಾಡಿದೆ.

Advertisement

ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಇತ್ತೀಚೆಗೆ ಅನುಮೋದನೆಗೊಂಡ 12,957.79 ಕೋಟಿ ರೂ. ಮೊತ್ತದ ಆಯವ್ಯಯವನ್ನು ಆಯುಕ್ತರು ಸರ್ಕಾರದ ಅನುಮೋದನೆಗೆ ಕಳುಹಿಸಿದ್ದಾರೆ. ಜತೆಗೆ 2017-18 ಹಾಗೂ 2018-19ನೇ ಸಾಲಿನ ವೆಚ್ಚಗಳಿಗೆ ಹೋಲಿಸಿದರೆ 2019-2020ನೇ ಸಾಲಿನ ಬಜೆಟ್‌ ಗಾತ್ರ ವಾಸ್ತವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎಂಬುದನ್ನು ಆಯುಕ್ತರು ಉಲ್ಲೇಖೀಸಿದ್ದಾರೆ.

ಹೀಗಾಗಿ ಬಜೆಟ್‌ ಅನುಷ್ಠಾನಗೊಳಿಸುವುದು ಅಸಾಧ್ಯವಾಗಿದ್ದು, ಆಯವ್ಯಯವನ್ನು 9,000 ಕೋಟಿ ರೂ.ಗಳಿಗೆ ಮಿತಿಗೊಳಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಫೆ.18ರಂದು 10,688.63 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರು. ಈ ವೇಳೆ ಆಡಳಿತ ಪಕ್ಷಗಳು ವಾಸ್ತವಿಕ ಬಜೆಟ್‌ ಮಂಡಿಸಿದ್ದೇವೆ ಎಂದು ಬೆನ್ನು ತಟ್ಟಿಕೊಂಡಿದ್ದವು.

ಆದರೆ, ಬಜೆಟ್‌ ಮೇಲಿನ ಚರ್ಚೆ ಬಳಿಕ ಅಧಿಕಾರಿಗಳ ಗಮನಕ್ಕೆ ತರದೆ ಬಜೆಟ್‌ ಗಾತ್ರವನ್ನು 12,957.79 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಕೇವಲ ಮೂರು ದಿನ ನಡೆದ ಬಜೆಟ್‌ ಮೇಲಿನ ಚರ್ಚೆ ಬಳಿಕ ಬಜೆಟ್‌ಗೆ 1,909 ಕೋಟಿ ರೂ. ಮೊತ್ತದ ಯೋಜನೆಗಳನ್ನು ಸೇರ್ಪಡೆ ಮಾಡಿದ್ದು, ವಿರೋಧ ಪಕ್ಷದೊಂದಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಲವು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ಸದಸ್ಯರು ಕೌನ್ಸಿಲ್‌ ಸಭೆಯಲ್ಲಿಯೇ ಬಾವಿಗಿಳಿದು ಪ್ರತಿಭಟಿಸಿದ್ದರು.

ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆಗೊಂಡ ಬಳಿಕ ಬಜೆಟನ್ನು ಆಯುಕ್ತರು ಶುಕ್ರವಾರ (ಮಾ.1) ಸರ್ಕಾರಕ್ಕೆ ಕಳುಹಿಸಿದ್ದು, ಬಜೆಟ್‌ ಕುರಿತಂತೆ ತಮ್ಮ ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಅದರಂತೆ 2017-18ನೇ ಸಾಲಿನಲ್ಲಿ ವೆಚ್ಚಗಳಿಗೆ ಹೋಲಿಕೆ ಮಾಡಿದರೆ ಬಜೆಟ್‌ ಮೊತ್ತವು ಶೇ.173.61ರಷ್ಟು ಅಧಿಕವಾಗಿದ್ದು, 2018-19ನೇ ಸಾಲಿನ ವೆಚ್ಚಗಳಿಗೆ ಹೋಲಿಸಿದರೆ 148.09ರಷ್ಟು ಅಧಿಕವಾಗಿದೆ. ಹೀಗಾಗಿ ಬಜೆಟ್‌ ಅನುಷ್ಠಾನ ಅಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. 

Advertisement

9 ಸಾವಿರ ಕೋಟಿಗೆ ಬಜೆಟ್‌ ಮಿತಿಗೊಳಿಸಿ: 2019-20ನೇ ಸಾಲಿನಲ್ಲಿ ಹೆಚ್ಚಿನ ಆದಾಯ ಸಂಗ್ರಹಿಸಲು ಪ್ರಸ್ತಾಪಿಸಿರುವ ಅಂಶಗಳ ಆಧಾರದ ಮೇಲೆ 2019-20ನೇ ಸಾಲಿನ ಆಯವ್ಯಯವನ್ನು 9,000 ಕೋಟಿಗಳಿಗೆ ಮಿತಿಗೊಳಿಸಿ ಅನುಮೋದಿಸಬಹುದಾಗಿರುತ್ತದೆ. ಅದರಂತೆ 2017-18ನೇ ಲೆಕ್ಕಗಳಿಗೆ ಹೋಲಿಸಿದರೆ ಶೇ.22.92ರಷ್ಟು ಹಾಗೂ 2018-19ನೇ ಸಾಲಿಗೆ ಹೋಲಿಸಿದರೆ ಶೇ.21.95ರಷ್ಟು ಅಧಿಕವಾಗಲಿದ್ದು, ಅನುಷ್ಠಾನಗೊಳಿಸಬಹುದಾಗಿದೆ. ಒಂದೊಮ್ಮೆ ಪಾಲಿಕೆಯ ಆದಾಯ 9,000 ಕೋಟಿ ರೂ. ಮೀರಿದರೆ ಪೂರಕ ಆಯವ್ಯಯ ಮಂಡಿಸಲು ಅವಕಾಶವಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ. 

ಸಾವಿರಾರು ಕೋಟಿ ಹೊರೆ: ಪಾಲಿಕೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳಿಗೆ 2954.83 ಕೋಟಿ ರೂ. ಬಿಲ್‌ ಪಾವತಿಸಬೇಕಿದೆೆ. ಜತೆಗೆ 4,167 ಕೋಟಿ ರೂ. ಮೊತ್ತದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರ್ಯಾದೇಶ ಪಡೆದು ಪ್ರಾರಂಭವಾಗಬೇ ಕಿರುವ ಕಾಮಗಾರಿಗಳ ಮೊತ್ತ 728.10 ಕೋಟಿ ರೂ. ಮೀರುತ್ತದೆ. ಇದರೊಂದಿಗೆ ಜಾಬ್‌ಕೋಡ್‌ ಸಂಖ್ಯೆ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಮೊತ್ತವು 1996.087 ರೂ., ಜಾಬ್‌ಕೋಡ್‌ ನೀಡಿ ಟೆಂಡರ್‌ ಕರೆಯಲು ಬಾಕಿಯಿರುವ ಕಾಮಗಾರಿಗಳ ಮೊತ್ತ 1801.28 ಕೋಟಿ ರೂ.

ಹಾಗೂ ಆಡಳಿತಾತ್ಮಕ ಅನುಮೋದನೆಗೊಂಡು ಜಾಬ್‌ಕೋಡ್‌ ನೀಡಬೇಕಿರುವ ಸುಮಾರು 1193.66 ಕೋಟಿ ರೂ. ಮೊತ್ತದ ಕಾಮಗಾರಿ ಸೇರಿದಂತೆ ಒಟ್ಟು 12,841 ಕೋಟಿ ರೂ. ಮೊತ್ತವನ್ನು ಪಾಲಿಕೆಯಿಂದ ಪಾವತಿಸಬೇಕಾಗಿದೆ ಎಂಬ ಅಂಕಿಸಂಖ್ಯೆ ಪತ್ರದಲ್ಲಿದೆ.  ಇದರೊಂದಿಗೆ ಎಸ್‌ಬಿಐ ಬ್ಯಾಂಕ್‌ಗೆ ಜನವರಿ ತಿಂಗಳವರೆಗೆ 652.43 ಕೋಟಿ ರೂ. ಹಾಗೂ ಕೆಯುಐಡಿಎಫ್‌ ಸಂಸ್ಥೆಯ ಸಾಲದ ಮೊತ್ತ ಜನವರಿ ವೇಳೆಗೆ 50.91 ಕೋಟಿ ರೂ. ಸೇರಿ ಒಟ್ಟು 703.34 ಕೋಟಿ ರೂ. ಪಾವತಿಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ. 
 
ಸಮರ್ಪಕ ಅನುಷ್ಠಾನವಿಲ್ಲ: ಕಳೆದ ಎಂಟು ವರ್ಷಗಳ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಬಜೆಟ್‌ ಅನುಷ್ಠಾನ ಶೇ.75ರಷ್ಟೂ ಸಮರ್ಪಕವಾಗಿ ಅನುಷ್ಠಾನವಾಗದಿರುವುದು ಕಾಣುತ್ತದೆ. 2010-11ರಲ್ಲಿ ಆಯವ್ಯಯದ ಮೇಲೆ ಶೇ. 37ರಷ್ಟು ಪ್ರಗತಿ ಸಾಧಿಸಿದ್ದ ಪಾಲಿಕೆ 2011-12ರಲ್ಲಿ ಶೇ.43, 2012-13ರಲ್ಲಿ ಶೇ. 39, 2013-14 ಶೇ. 36, 2014-15ರಲ್ಲಿ ಶೇ.70, 2015-16ರಲ್ಲಿ ಶೇ.97, 2016-17ರಲ್ಲಿ ಶೇ.70, 2017-18 ಹಾಗೂ 2018-19ರಲ್ಲಿ ಶೇ. 73 ಪ್ರಗತಿ ಸಾಧಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚು ಆದಾಯದ ಗುರಿ: ಬಿಬಿಎಂಪಿಯ ಸ್ವಂತ ಆದಾಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಸೇರಿದಂತೆ 2017-18ನೇ ಸಾಲಿನಲ್ಲಿ ಒಟ್ಟಾರೆ 7,321.32 ಕೋಟಿ ರೂ. ಆದಾಯ ನಿರೀಕ್ಷಿಸಿದರೆ, 2018-19ನೇ ಸಾಲಿನಲ್ಲಿ ಒಟ್ಟು 7,380.12 ಕೋಟಿ ರೂ. ನಿರೀಕ್ಷಿಸಲಾಗಿತ್ತು. ಆದರೆ, 2019-20ನೇ ಸಾಲಿನಲ್ಲಿ ಬರೋಬ್ಬರಿ 12,957.79 ಕೋಟಿ ರೂ. ಆದಾಯ ನಿರೀಕ್ಷಿಸಿರುವುದು ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. 

ಮುಂದಿನ ವರ್ಷ ಬಿಬಿಎಂಪಿ ಚುನಾವಣೆ ಎದುರಾಗುವುದರಿಂದ ಎರಡು ವರ್ಷಗಳಿಗೆ ಸೇರಿ ಬಜೆಟ್‌ ಮಾಡಲಾಗಿದೆ. ಜತೆಗೆ ಪಾಲಿಕೆಗೆ ಸುಧಾರಣಾ ಶುಲ್ಕದಿಂದ ಹೆಚ್ಚಿನ ಆದಾಯ ಸಂಗ್ರಹವಾಗಲಿರುವ ಹಿನ್ನೆಲೆಯಲ್ಲಿ 12,597 ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದೇವೆ. ಆಯುಕ್ತರು ತಮ್ಮ ಕರ್ತವ್ಯ ನಿರ್ವಹಿಸಿದ್ದು, ಪೂರ್ಣ ಬಜೆಟ್‌ಗೆ ಅನುಮೋದನೆ ನೀಡುವಂತೆ ಸರ್ಕಾರವನ್ನು ಕೋರಲಾಗುವುದು. 
-ಅಬ್ದುಲ್‌ ವಾಜಿದ್‌, ಆಡಳಿತ ಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next