Advertisement

ಫೋನ್‌ ಕದ್ದಾಲಿಕೆ ತಡೆಯಲು ಕೇಂದ್ರಕ್ಕೆ ಪತ್ರ: ರಾಮಲಿಂಗಾ ರೆಡ್ಡಿ

11:51 AM Sep 21, 2017 | |

ಮಂಗಳೂರು: ಕಾಂಗ್ರೆಸ್‌ ಸರಕಾರದ ಸಚಿವರ ಟೆಲಿಫೋನ್‌ ಸಂಭಾಷಣೆಯನ್ನು ಕೇಂದ್ರ ಸರಕಾರ ಕದ್ದಾಲಿಸುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ. 

Advertisement

ಬುಧವಾರ ಮಂಗಳೂರಿಗೆ ಭೇಟಿ ನೀಡಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಪಕ್ಷ ನಾಯಕರ ದೂರವಾಣಿಯನ್ನು ಕದ್ದಾಲಿಕೆಮಾಡಲಾಗುತ್ತಿದೆ ಎಂಬ ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌ ಅವರ ಆರೋಪಕ್ಕೆ ಪತ್ರಿಕ್ರಿಯಿಸಿದ ಅವರು, ರಾಜ್ಯ ಸರಕಾರಕ್ಕೆ ಬಿಜೆಪಿಯವರ ದೂರವಾಣಿ ಕದ್ದಾಲಿಸುವ ಆವಶ್ಯಕತೆ ಇಲ್ಲ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವುದಿಲ್ಲ. ಅವರಿಗೆ ಭಯ ಆರಂಭವಾಗಿದೆ. ಹಾಗಾಗಿ ರಾಜ್ಯ ಸರಕಾರದ ಮೇಲೆ ಏನೇನೊ ಆರೋಪ ಮಾಡುತ್ತಿದ್ದಾರೆ ಎಂದವರು ವಿವರಿಸಿದರು. 

ಕೇಂದ್ರ ಸರಕಾರವು ಆದಾಯ ತೆರಿಗೆ ಇಲಾಖೆ, ರಿಸರ್ವ್‌ ಬ್ಯಾಂಕ್‌ನ್ನು ದುರುಪಯೋಗ ಪಡಿಸುತ್ತಿದೆ. ಇಂತಹ ಸಂಸ್ಥೆಗಳ ದುರುಪಯೋಗದಲ್ಲಿ ಕೇಂದ್ರದ ಬಿಜೆಪಿ ಸರಕಾರ ನಿಸ್ಸೀಮವಾಗಿದೆ ಎಂದು ಟೀಕಿಸಿದರು. ಕೇಂದ್ರ ಸರಕಾರವು ರಾಜ್ಯ ಸರಕಾರದ ಫೋನ್‌ ಕದ್ದಾಲಿಸುತ್ತಿದೆ ಎಂದು ನಮಗೆ ಮೊದಲೇ ಮಾಹಿತಿ ಇತ್ತು. ಆದರೆ ನಾವು ಈ ಬಗ್ಗೆ ಮಾತಾಡದೆ ಸುಮ್ಮನಾಗಿದ್ದೇವು. ಈಗ ಬಿಜೆಪಿಯವರು ಆರೋಪ ಮಾಡಿದ್ದರಿಂದ ಮಾತನಾಡಬೇಕಾಯಿತು ಎಂದರು.

ಕಾವ್ಯಾ ಸಾವು ಪ್ರಕರಣ: ಕಮಿಷನರ್‌ ತೀರ್ಮಾನ
ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣದ ಬಗ್ಗೆ ಎಸಿಪಿ ತನಿಖೆ ಮತ್ತು ಇತರ ತನಿಖಾ ವರದಿಗಳು ಬಂದಿವೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈ ವಿಚಾರದಲ್ಲಿ ಮಂಗಳೂರಿನ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅತೀ ಶೀಘ್ರದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು. 

Advertisement

ಗೌರಿ ಲಂಕೇಶ್‌ ಹತ್ಯೆ ತನಿಖೆ: ಸರಕಾರದ ಹಸ್ತಕ್ಷೇಪ ಇಲ್ಲ
ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ತನಿಖಾ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ನಮಗೆ ತನಿಖೆಯ ಫಲಿತಾಂಶ ಬೇಕು. ಹತ್ಯೆ ಮಾಡಿದವರು ಯಾರೆಂಬುದು ತಿಳಿಯಬೇಕು. ವಿಶೇಷ ತನಿಖಾ ತಂಡದವರು ಪತ್ತೆಹಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. 

ಪ್ರೊ| ಎಂ.ಎಂ. ಕಲಬುರಗಿ ಹತ್ಯೆ ನಡೆದು 2 ವರ್ಷಗಳು ಕಳೆದಿವೆ. ಅದರ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಳು ಪ್ರತ್ಯೇಕವಾಗಿ ನಡೆಯುತ್ತಿವೆ. ತನಿಖೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. 

ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಇದರ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಮಂಗಳೂರಿನಲ್ಲಿ ಆದಾಯ ತೆರಿಗೆ ಕಚೇರಿಗೆ ದಾಳಿ ಮಾಡಿ ದಾಂಧಲೆ ಎಸಗಿದ ಬಗ್ಗೆ ಕಾಂಗ್ರೆಸ್‌ ಕಾರ್ಪೊರೇಟರ್‌ ಎ.ಸಿ.ವಿನಯರಾಜ್‌ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್‌ ಮೋಹನ್‌, ಪಶ್ಚಿಮ ವಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಉಪಸ್ಥಿತರಿದ್ದರು. 

2014ರ ಬಳಿಕ ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ಕಡಿಮೆ. ಇತ್ತೀಚೆಗೆ ಒಂದು ಕರಪತ್ರ ಲಭಿಸಿದ್ದನ್ನು ಹೊರತುಪಡಿಸಿದರೆ ಬೇರೆ ಪ್ರಕರಣ ದಾಖಲಾಗಿಲ್ಲ.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಿಐಡಿಗೆ ವಹಿಸಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು.

ವಿದೇಶಿ ಪ್ರವಾಸಿಗರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next