Advertisement

ಹೆದ್ದಾರಿ 766 ರ ಅಗಲೀಕರಣಕ್ಕೆ ಪ್ರಧಾನಿಗೆ ಪತ್ರ

04:41 PM Jun 29, 2022 | Team Udayavani |

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ದಾರಿ 766 ಮತ್ತು 67ರಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಕಾರಣ, ನಂಜನಗೂಡಿನಿಂದ ಕೇರಳ ಗಡಿಭಾಗದವರೆಗೆ ರಸ್ತೆ ಅಗಲೀಕರಣ ಮತ್ತು ವಿಭಜಕ ಅಳವಡಿಸುವಂತೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.  ಶಾಸಕರ ನಡೆಗೆ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 766 ಬಂಡೀಪುರ ಅರಣ್ಯದ ಮೂಲಕ ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದೆ. ವಾಹನ ದಟ್ಟನೆಯಿಂದಾಗಿ ಅಪಘಾತ ಮಿತಿ ಮೀರುತ್ತಿದೆ. ಈ ಕಾರಣದಿಂದ ರಸ್ತೆ ಅಗಲೀಕರಣ ಮಾಡಿ ರಸ್ತೆ ವಿಭಜಕ ಅಳವಡಿಸಬೇಕು. ಸಾರ್ವಜನಿಕರು ಈ ಸಂಬಂಧ ಒತ್ತಡ ಹೇರುತ್ತಿದ್ದಾರೆ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಂಡೀಪುರ ವನ್ಯಜೀವಿಗಳ ಸೂಕ್ಷ್ಮ ಪ್ರದೇಶವಾಗಿದೆ. ಕಾಡಿನಲ್ಲಿ ರಸ್ತೆ ಅಗಲೀಕರಣ, ವಿಭಜಕ ಅಳವಡಿಸುವ ಮನವಿ ತೀರಾ ಅವೈಜ್ಞಾನಿಕ ಎಂದು ಶಾಸಕ ನಿರಂಜನಕುಮಾರ್‌ ಮನವಿಗೆ ಪರಿಸರ ಪ್ರೇಮಿಗಳು ಕಿಡಿಕಾರಿದ್ದಾರೆ.

ಕೆಲ ವರ್ಷಗಳ ಹಿಂದೆ ರಾತ್ರಿ ವಾಹನ ಸಂಚಾರ ಆರಂಭಿಸುವ ಕ್ರಮಕ್ಕೆ ಶಾಸಕ ನಿರಂಜನ್‌ಕುಮಾರ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಸೂಕ್ಷ್ಮ ಪರಿಸರ ವಲಯದ ರಸ್ತೆ ಅಗಲೀಕರಣಕ್ಕೆ ಪ್ರಧಾನಿಗೆ ಪತ್ರ ಬರೆದಿರುವುದು ಶಾಸಕರ ದ್ವಂದ್ವ ನಿಲುವಿಗೆ ಹಿಡಿದ ಕನ್ನಡಿಯಾಗಿದೆ.

ಅಪಘಾತದ ಕಾರಣ ನೀಡಿ ಶಾಸಕರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ವಿಭಜಕ್ಕೆ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಿರುವ ಕ್ರಮ ಸರಿಯಲ್ಲ. ಅಪಘಾತ ಹೆಚ್ಚಾಗುತ್ತಿದ್ದರೆ ಇದರ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸಬೇಕು. ಜೊತೆಗೆ ಅಪಘಾತ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಕೆಗೆ ಕ್ರಮ ವಹಿಸಬೇಕು. ಆದ್ದರಿಂದ ಪ್ರಧಾನ ಮಂತ್ರಿ ಗಳಿಗೆ ವನ್ಯ ಜೀವಿಗಳು ಹಾಗೂ ಪರಿಸರ ಬಗ್ಗೆ ಕಾಳಜಿ ಇದ್ದರೆ ಶಾಸಕ ನಿರಂಜನಕುಮಾರ್‌ ಸಲ್ಲಿಸಿರುವ ಮನವಿ ಕೈಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ವಿಚಾರ ಬೇರೆ ಸ್ವರೂಪ ಪಡೆದುಕೊಳ್ಳಲಿದೆ. –ಜೋಸೆಫ್ ಹೂವರ್‌, ಪರಿಸರ ಹೋರಾಟಗಾರ.

Advertisement

Udayavani is now on Telegram. Click here to join our channel and stay updated with the latest news.

Next