ಹುಬ್ಬಳ್ಳಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ವಿಲೇವಾರಿ ಹಗರಣದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ವಿ.ಜಿ.ಸಿದ್ಧಾರ್ಥ ಪಾಲ್ಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸಮಗ್ರ ವಿಚಾರಣೆ ನಡೆಸಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಂಸ್ಥಾಪಕ ಎಸ್. ಆರ್.ಹಿರೇಮಠ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಕಸ ವಿಲೇವಾರಿಯಲ್ಲಿ ನೂರಾರು ಕೋಟಿ ರೂ.ಗಳ ಹಗರಣ ನಡೆದಿದ್ದು, ಸಮರ್ಪಕ ತನಿಖೆ ನಡೆಸುವಂತೆ ಮೇ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಕಸ ವಿಲೇವಾರಿ ಹಗರಣದಲ್ಲಿ ಡಾ| ಗಣೇಶ, ಪ್ರವೀಣ ಹಾಗೂ ವಿ.ಜಿ.ಸಿದ್ಧಾರ್ಥ ಶಾಮೀಲಾಗಿರುವುದು ಕಂಡು ಬಂದಿದೆ.
ಅಳಿಯನನ್ನು ರಕ್ಷಿಸುವುದಕ್ಕಾಗಿಯೇ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರಿದ್ದಾರೆ ಎಂದರು. ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸಾಕ್ಷಿಗಳನ್ನು ಧ್ವಂಸಮಾಡಿ ಟೆರ್ರಾ ಫಾರ್ಮಾ ಬಯೋ ಟೆಕ್ನಾಲಜಿ ಹಾಗೂ ಇನ್‌ಫ್ರಾಟೆಕ್ ಲಿಮಿಟೆಡ್ ಸಂಸ್ಥೆಗಳು ಕಾನೂನು ಬಾಹಿರವಾಗಿಕೆಲಸ ಮಾಡುತ್ತಿವೆ.
ಬಿಬಿಎಂಪಿಯಲ್ಲಿ ನಡೆದಿರುವ ಹಗರಣ ತುಂಬಾ ಗಂಭೀರವಾಗಿದ್ದು, ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಹಾಗೂ ತಪ್ಪಿತಸ್ಥ ಕಂಪನಿಗಳನ್ನು ಕಪ್ಪು ಪಟ್ಟಿಗೆಸೇರಿಸಬೇಕು ಎಂದು ಆಗ್ರಹಿಸಿದರು.
ಜಾಥಾಕ್ಕೆ ಉತ್ತಮ ಸ್ಪಂದನೆ: ಮಂಡ್ಯದಲ್ಲಿ ಆರಂಭಗೊಂಡು ರಾಯಚೂರಿನಲ್ಲಿ ಮುಕ್ತಾಯಗೊಂಡ ಜನಪರ್ಯಾಯ ಕಟ್ಟೋಣ ಜಾಥಾಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ದುಷ್ಟ ರಾಜಕಾರಣದ ವಿರುದ್ಧ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಾಥಾ ನಡೆಯಿತು.
ಜನಾಂದೋಲನಗಳ ಮಹಾಮೈತ್ರಿಗೆ ಜಾಥಾ ಪೂರಕವಾಗಿದೆ ಎಂದರು. ಪ್ರಬಲ ಚಳವಳಿ ಬೆಳೆಸುವುದು ಹಾಗೂ ಪರ್ಯಾಯ ರಾಜಕೀಯ ಆಂದೋಲನ ಹುಟ್ಟು ಹಾಕುವುದು ಇದರ ಉದ್ದೇಶವಾಗಿದೆ. ಎಲ್ಲ ಜೀವಪರ ಶಕ್ತಿಗಳನ್ನು ಒಗ್ಗೂಡಿಸಿ ಜನರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುವುದೆಂದರು.