Advertisement

ರಾಜಸ್ಥಾನ ಮಾದರಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸಿಎಂಗೆ ಹೊರಟ್ಟಿ ಪತ್ರ

08:52 PM Feb 23, 2022 | Team Udayavani |

ಬೆಂಗಳೂರು: ರಾಜಸ್ಥಾನ ಸರ್ಕಾರ ಮಂಡಿಸಿದ ಆಯವ್ಯಯ ಪತ್ರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಲ್ಲಿನ ಸ್ಥಳೀಯ ರಾಜ್ಯ ಸರ್ಕಾರಿ ನೌಕರರ ಭವಿಷ್ಯಕ್ಕೆ ಸುರಕ್ಷತೆ ಒದಗಿಸಿದೆ.

Advertisement

ಇದು ಸ್ವಾಗತಾರ್ಹ ಘೋಷಣೆಯಾಗಿದ್ದು, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಈ ಬಾರಿಯ ಆಯವ್ಯಯದಲ್ಲಿ ಘೋಷಣೆ ಮಾಡುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ನಮ್ಮ ರಾಜ್ಯದಲ್ಲಿಯೂ 2006ರ ಏಪ್ರಿಲ್‌ 1 ರ ನಂತರದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ಲಕ್ಷಾಂತರ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯದೇ ಜೀವನೋಪಾಯ ಕಷ್ಟಸಾಧ್ಯವಾಗಿದೆ. ಆದುದರಿಂದ, ರಾಜಸ್ಥಾನ ಸರ್ಕಾರದ ಮಾದರಿಯಂತೆ ಮಾರ್ಚ್‌ 04 ರಂದು ಮಂಡಿಸುವ 2022-23ನೇ ಸಾಲಿನ ಕರ್ನಾಟಕ ರಾಜ್ಯದ ಆಯವ್ಯಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿ, ರಾಜ್ಯ ಸರ್ಕಾರಿ ನೌಕರರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಅದೇ ರೀತಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ ಮತ್ತಿತ್ತರ ಸೌಲಭ್ಯ ನೀಡುವ ನಿಟ್ಟಿನಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿರುವ ತಾರತಮ್ಯಕ್ಕೆ ಅಂತ್ಯ ಹಾಡುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿಕೊಡುವಂತೆಯೂ ಕೋರಿ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next