Advertisement

ಮೆಟ್ರೋ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪತ್ರ

10:56 AM Jul 28, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಹಿಂದಿ ಹೇರಿಕೆಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷಾ ನೀತಿ ಉಲ್ಲಂ ಸಿದ ಬಿಎಂಆರ್‌ಸಿಯ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ.

Advertisement

ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮರುದಿನವೇ ಅಂದರೆ ಬುಧವಾರ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಭಾಷಾ ನೀತಿ ಉಲ್ಲಂ ಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬಿಎಂಆರ್‌ಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ. 

ಮೆಟ್ರೋ ಅಧಿಕಾರಿಗಳು ಆಡಳಿತ ನಿರ್ವಹಣೆಯಲ್ಲಿ ಕನ್ನಡ ಅನುಷ್ಠಾನ ಕುರಿತು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಗೊಂದಲ ಸೃಷ್ಟಿಸಿ, ಸರ್ಕಾರವನ್ನೇ ತಪ್ಪು ದಾರಿಗೆಳೆಯುತ್ತಿದ್ದಾರೆ. 2011ರಿಂದಲೂ ನಿಗಮದ ಆಡಳಿತದಲ್ಲಿ ಮತ್ತು ನಾಮಫ‌ಲಕದಲ್ಲಿ ಭಾಷಾ ನೀತಿಯನ್ನು ಸ್ಪಷ್ಟವಾಗಿ ಉಲ್ಲಂ ಸುತ್ತಾ ಬಂದಿದ್ದಾರೆ. ಈ ಪ್ರಮಾದ ಎಸಗಿರುವ ಮೆಟ್ರೋದ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷರು ಶಿಫಾರಸು ಮಾಡಿದ್ದಾರೆ. 

ನಾಮಫ‌ಲಕಗಳಲ್ಲಿ ದ್ವಿಭಾಷೆ ಅನುಷ್ಠಾನ, ಸರ್ಕಾರದ ಭಾಷಾ ನೀತಿ ಅನ್ವಯ ಸಂಸ್ಥೆಯ ಆಡಳಿತದಲ್ಲಿ ಕನ್ನಡ ಭಾಷಾ ಸಂಸ್ಕೃತಿಯನ್ನು ಬಿಂಬಿಸುವ ವ್ಯವಸ್ಥೆ ಜಾರಿಯಾಗಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರವು ಮೆಟ್ರೋಗೆ ನಿರ್ದೇಶನ ನೀಡಬೇಕು. ಜತೆಗೆ ಸರ್ಕಾರದ ನಿರ್ದೇಶನಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ಬಿಎಂಆರ್‌ಸಿಯು ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಬೇಕು ಎಂದೂ ಪತ್ರದಲ್ಲಿ ಉಲ್ಲೇಖೀಸಲಾಗಿದೆ. 

ದ್ವಿಭಾಷಾ ನೀತಿಯ ಉಲ್ಲಂಘನೆ: ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರಿಶೀಲನಾ ತಂಡದೊಂದಿಗೆ ಭೇಟಿ ನೀಡಿದ ವೇಳೆ ಸಂಸ್ಥೆಯ ಆಡಳಿತದಲ್ಲಿ ಮೇಲ್ನೋಟಕ್ಕೆ ಕಂಡುಬಂದ ಕನ್ನಡ ವಿರೋಧಿಯಾದ ಎಲ್ಲ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಈಗಾಗಲೇ ಪ್ರಾಧಿಕಾರವು ನಿಗಮಕ್ಕೆ ನಿರ್ದೇಶನ ನೀಡಿದೆ. ಆದಾಗ್ಯೂ ಸಂಸ್ಥೆಯ ಕಾರ್ಯನಿರ್ವಹಣೆ ಕುರಿತು ತಕ್ಷಣ ಹಲವು ಸುಧಾರಣಾ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. 

Advertisement

ಸ್ವತಃ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಅವರು 2016ರ ಜುಲೈ 2ರಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಬಿಎಂಆರ್‌ಸಿಯು ರಾಜ್ಯ ಸರ್ಕಾರದ ಸಂಸ್ಥೆ ಎಂಬ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಾಮಫ‌ಲಕಗಳು ಕಡ್ಡಾಯವಾಗಿ ಪ್ರಧಾನ ಭಾಷೆಯಾಗಿ ಕನ್ನಡ ಮತ್ತು ಎರಡನೇ ಭಾಷೆಯಾಗಿ ಇಂಗ್ಲಿಷ್‌ ಇರಬೇಕು. ಆದರೆ, ತ್ರಿಭಾಷಾ ನೀತಿ ಅನುಸರಿಸಲಾಗುತ್ತಿದೆ. ಇದು ದ್ವಿಭಾಷಾ ನೀತಿಯ ಉಲ್ಲಂಘನೆ ಎಂದು ಹೇಳಿದ್ದಾರೆ. 

ಮಹಿಷಿ ವರದಿ ಆಶಯವೂ ಉಲ್ಲಂಘನೆ: ಮೆಟ್ರೋ ನಿಗಮವು ಸಿಬ್ಬಂದಿ ನೇಮಕದಲ್ಲಿ ಕೂಡ ಕನ್ನಡೇತರರಿಗೆ ಮಣೆ ಹಾಕಿದೆ. ಈ ಮೂಲಕ ಸರೋಜಿನಿ ಮಹಿಷಿ ವರದಿಯ ಆಶಯವನ್ನೂ ಸ್ಪಷ್ಟವಾಗಿ ಉಲ್ಲಂ ಸಲಾಗಿದೆ ಎಂದು ಪ್ರಾಧಿಕಾರ ಸರ್ಕಾರಕ್ಕೆ ದೂರಿರುವ ಪತ್ರದಲ್ಲಿ ಹೇಳಿದೆ.  

ಬಿಎಂಆರ್‌ಸಿಯಲ್ಲಿ ಸ್ವತ್ಛತೆ, ಭದ್ರತಾ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಹೊರಗುತ್ತಿಗೆ ನೌಕರರು ಕನ್ನಡೇತರರಾಗಿದ್ದಾರೆ. ಅಷ್ಟೇ ಅಲ್ಲ, ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಮುಖ್ಯ ಎಂಜಿನಿಯರ್‌ಗಳು ಕನ್ನಡೇತರರಾಗಿದ್ದಾರೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳನ್ನು ಕರ್ನಾಟಕ ಹೊಂದಿದೆ.

ಅಸಂಖ್ಯ ಎಂಜಿನಿಯರಿಂಗ್‌ ಪದವಿ ಹೊಂದಿದ ಪ್ರತಿಭಾವಂತ ಕನ್ನಡಿಗರು ಲಭ್ಯವಿದ್ದಾರೆ. ಆದಾಗ್ಯೂ ಅನ್ಯಭಾಷಾ ವ್ಯಕ್ತಿಗಳಿಗೆ ಇಷ್ಟೊಂದು ಪ್ರಾತಿನಿಧ್ಯ ನೀಡಿರುವ ಕುರಿತು ಸರ್ಕಾರ ಗಟ್ಟಿನಿಲುವು ತಳೆಯಬೇಕು. ಅದಕ್ಕಿಂತ ಮುಖ್ಯವಾಗಿ ಮೊದಲ ಹಂತದಲ್ಲಿ ಈ ಅನ್ಯಭಾಷೆಯ ಎಂಜಿನಿಯರ್‌ಗಳನ್ನು ಸೇವೆಯಿಂದ ವಿಮುಕ್ತಿಗೊಳಿಸಬೇಕು ಎಂದೂ ಪ್ರಾಧಿಕಾರ ಶಿಫಾರಸು ಮಾಡಿದೆ. 

ವೆಬ್‌ಸೈಟ್‌ ಕೂಡ ಇಂಗ್ಲಿಷ್‌ಮಯ: ನಿಗಮದ ಜಾಲತಾಣದಲ್ಲಿ ಪ್ರಧಾನ ಪುಟವು ಸಂಪೂರ್ಣ ಇಂಗ್ಲಿಷ್‌ಮಯವಾಗಿದ್ದು, ತಕ್ಷಣ ಕನ್ನಡಕ್ಕೆ ಪ್ರಾತಿನಿಧ್ಯ ಕಲ್ಪಿಸುವ ವ್ಯವಸ್ಥೆ ಆಗಬೇಕು. ಕನ್ನಡಕ್ಕೆ ಅಗತ್ಯ ಪ್ರಾತಿನಿಧ್ಯವನ್ನು ಕಲ್ಪಿಸಬೇಕಾದ ಅವಶ್ಯಕತೆಯನ್ನು ಉಪೇಕ್ಷಿಸಲಾಗಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next