ಬೆಂಗಳೂರು: ದೇಶದ ಎರಡನೇ ರಾಜಧಾನಿಯನ್ನಾಗಿ ಬೆಂಗಳೂರನ್ನು ಘೋಷಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪತ್ರ ಬರೆದಿದ್ದಾರೆ. ದೇಶದ ರಾಜಧಾನಿ ದೆಹಲಿ ಉತ್ತರದ ತುದಿಯಲ್ಲಿರುವುದರಿಂದ ದಕ್ಷಿಣ ಭಾರತದ ಜನರ ಅಹವಾಲುಗಳನ್ನು ಕೇಂದ್ರದ ಆಡಳಿತ ವ್ಯವಸ್ಥೆಗೆ ತಲುಪಿಸುವುದು ಕಷ್ಟವಾಗಿದೆ. ಅಲ್ಲದೇ ಭಾಷೆಯ ಸಮಸ್ಯೆಯೂ ತೊಡಕಾಗಿದೆ.
ದಕ್ಷಿಣದ ರಾಜ್ಯಗಳಿಗೆ ಅನುಕೂಲವಾಗುವಂತೆ ಎರಡನೇ ರಾಜಧಾನಿಯನ್ನಾಗಿ ಘೋಷಿಸಲು ಬೆಂಗಳೂರು ಪ್ರಶಸ್ತವಾದ ನಗರವಾಗಿದೆ. ಬೆಂಗಳೂರು ದೇಶದ ಎಲ್ಲ ಭಾಷೆಗಳನ್ನು ಆಡುವ ಜನರನ್ನು ಒಳಗೊಂಡಿದೆ. ಸರ್ವ ಋತುಗಳಲ್ಲಿಯೂ ಉತ್ತಮ ವಾತಾವರಣ ಹೊಂದಿದ ನಗರವಾಗಿದ್ದು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನವೂ ಇಲ್ಲಿಯೇ ಆರಂಭವಾಗಿದೆ.
ಬೆಂಗಳೂರು ತಾಂತ್ರಿಕ, ವೈದ್ಯಕೀಯ, ಮತ್ತಿತರ ಶೈಕ್ಷಣಿಕ ಸಂಸ್ಥೆಗಳಿಗೆ ಆಕರವಾಗಿದೆ. ಕಂಪ್ಯೂಟರ್ ವಿಜ್ಞಾನಿಗಳು, ಶಾಸ್ತ್ರೀಯ ಸಂಗೀತ ಕಲಾವಿದರು ಒಟ್ಟಿಗೆ ಬೆಳೆಯುತ್ತಿರುವ ವಿಶಿಷ್ಠ ನಗರ ಇದಾಗಿದ್ದು, ಇದನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸುವುದರಿಂದ ಸರ್ವೋಚ್ಚ ನ್ಯಾಯಾಲಯದ 2ನೇ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸಬಹುದು. ಯುಪಿಎಸ್ಸಿ ಶಾಖೆ, ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವುದು ಹಾಗೂ ಬೇರೆ ದೇಶಗಳ ವೀಸಾ ಕಚೇರಿಗಳನ್ನು ಇಲ್ಲಿ ಸ್ಥಾಪಿಸಬಹುದು ಎಂದು ದೇಶಪಾಂಡೆ ಪತ್ರದಲ್ಲಿ ತಿಳಿಸಿದ್ದಾರೆ.
ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡುವುದರಿಂದ ವಾಣಿಜ್ಯ ಉದ್ದಿಮೆಗಳ ಅಭಿವೃದ್ಧಿಗೆ ಸಹಾಯಕವಾಗುವುದಲ್ಲದೇ ದಕ್ಷಿಣ ಭಾರತದ ಜನತೆ ಉತ್ತರ ಭಾರತದ ಜನರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ದೇಶಪಾಂಡೆ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.