ಆಳಂದ: ಲಂಬಾಣಿ ತಾಂಡಾದ ನಿವಾಸಿಗಳು ಉದ್ಯೋಗ ಆರಿಸಿ ವಲಸೆ ಹೋಗುವುದನ್ನು ತಡೆಗಟ್ಟಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗೆ ಆಗ್ರಹಿಸಿ ರಾಜ್ಯ ಬಂಜಾರಾ ಕ್ರಾಂತಿ ದಳ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಪತ್ರ ಚಳವಳಿ ಮಾಡಿದರು.
ಕ್ರಾಂತಿದಳ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೊಡ, ಸಹ ಕಾರ್ಯದರ್ಶಿ ಅಶೋಕ ರಾಠೊಡ ನೇತೃತ್ವದಲ್ಲಿ ಪತ್ರ ರವಾನಿಸಲಾಯಿತು.
ಕರ್ನಾಟಕದ ಲಂಬಾಣಿಗರ ವಲಸೆ ತಡೆಗಟ್ಟಲು ಶಾಶ್ವತ ಪರಿಹಾರವಾಗಿ ತಾಂಡಾಗಳ ಸಮಗ್ರ ಅಭಿವೃದ್ಧಿ ಮಾಡಬೇಕು. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷ ಪೂರ್ತಿ ಕೆಲಸ ನೀಡಿ ಕಡ್ಡಾಯವಾಗಿ ವಾರದ ಅಂತ್ಯದಲ್ಲಿ ಕೂಲಿ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ವಲಸೆ ಇತ್ಯಾದಿ ಅಮಾನವೀಯ ಕಾರಣಗಳಿಂದಾಗಿ ತಾಂಡಾದ ಜನರು ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಘನತೆ ಬದುಕಿನಿಂದ ವಂಚಿತರಾಗದಂತೆ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಯಿತು.
ವಾಸಿಸುವವನೆ ನೆಲದೊಡೆಯ ಕಾಯ್ದೆ ಜಾರಿಗೊಳಿಸಿ ಭೂಮಿ ನಿವೇಶನದ ಹಕ್ಕು ಮತ್ತು ನಾಗರಿಕ ಸೌಲಭ್ಯ ಖಾತ್ರಿಗೊಳಿಸಬೇಕು ಹಾಗೂ ವಸತಿ ರಹಿತ ಬಂಜಾರಾ ಜನರಿಗೆ ಬಂಜಾರಾ ನಿಗಮ ಮಂಡಳಿಯಿಂದಲೇ ನೇರವಾಗಿ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಕಾರ್ಯಕರ್ತ ಮಹೇಶ, ಅನೀಲ, ಸಾವನ, ಮಯೂರ, ಗೋಪಾಲ ಮತ್ತು ತಾಂಡಾದ ಯುವಕರು ಪತ್ರ ಚಳವಳಿಯಲ್ಲಿ ಪಾಲ್ಗೊಂಡಿದ್ದರು.