Advertisement

ಮೈಸೂರಿನಲ್ಲೇ ಚಿತ್ರನಗರಿ ನಿರ್ಮಿಸಲು ಪತ್ರ ಚಳವಳಿ

02:55 PM Dec 13, 2019 | Team Udayavani |

ಮೈಸೂರು: ರಾಜ್ಯ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಮೈಸೂರಿನಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ ಪಾತಿ ಫೌಂಡೇಷನ್‌ ಮತ್ತು ವಿಷ್ಣುವರ್ಧನ್‌ ಅಭಿಮಾನಿ  ಗಳ ಬಳಗದ ವತಿಯಿಂದ ಅಂಚೆ ಪತ್ರ ಚಳವಳಿ ನಡೆಸಲಾಯಿತು.

Advertisement

ಗುರುವಾರ ನಗರದ ಜಗನ್ಮೋಹನ ಅರಮನೆಯ ಮುಂಭಾಗವಿರುವ ಅಂಚೆ ಪೆಟ್ಟಿಗೆಗೆ ಮೈಸೂರಿನಲ್ಲೇ ಶಾಶ್ವತವಾಗಿ ಚಿತ್ರನಗರಿ ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪತ್ರ ಹಾಕುವ ಮೂಲಕ ಚಳವಳಿ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕಳೆದ ಬಾರಿ ಚಿತ್ರನಗರಿ ಸ್ಥಾಪನೆಯ ವಿಚಾರವಾಗಿ ಎಷ್ಟೇ ಗೊಂದಲವಿದ್ದರೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಆ ಕುರಿತು ಯಾವುದೇ ಪ್ರಗತಿಯಾಗಿಲ್ಲ. ಕಾರಣಾಂತರಗಳಿಂದ ಮೈಸೂರಿನಿಂದ ಸ್ಥಳಾಂತರ ವಾಗುತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪನವರಿಗೆ ಅಂಚೆ ಪತ್ರದ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು. ಇಲ್ಲಿ 250ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳಿವೆ. ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್‌, ಸಾಹಸಸಿಂಹ ಡಾ.  ವಿಷ್ಣುವರ್ಧನ್‌, ಹಿರಿಯ ಪೋಷಕನಟ ಅಶ್ವಥ್‌, ನಟರಾದ ದರ್ಶನ್‌, ಯಶ್‌ ಸೇರಿದಂತೆ ಚಿತ್ರರಂಗಕ್ಕೆ ಸಾವಿರಾರು ಕಲಾವಿದರನ್ನು ಮೈಸೂರು ನೀಡಿದೆ. ಅಲ್ಲದೇ ಮೈಸೂರು ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸ್ಥಳ. ಈ ಹಿಂದೆ ಚಿತ್ರನಗರಿಯನ್ನು ಮೈಸೂರಿನ ಹಿಮ್ಮಾವಿ ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪಿಸಿದರೆ ಸಾವಿರಾರು ಪ್ರತಿಭಾನ್ವಿತ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ರಸ್ತೆಬದಿ ವ್ಯಾಪಾರಸ್ಥರಿಗೆ, ಆಟೋ ಚಾಲಕರಿಗೆ ಮತ್ತು ಹೋಟೆಲ್‌ ಉದ್ಯಮಕ್ಕೆ, ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗಲಿದೆ. ಹೀಗಾಗಿ ಚಿತ್ರನಗರಿಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದೆ ಮೈಸೂರಿನಲ್ಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ.ಎ, ವಿಕ್ರಂ ಅಯ್ಯಂಗಾರ್‌, ರಘು ಕಿರಣ್‌.ಜೆ, ಕಡಕೊಳ ಜಗದೀಶ್‌, ಚಕ್ರಪಾಣಿ, ಸುಚೀಂದ್ರ, ಗಣೇಶ್‌ ಪ್ರಸಾದ್‌, ಮಂಜು ನಾಥ್‌, ಮಹದೇವು ಧನರಾಜ್‌, ಲಕ್ಷ್ಮಣ್‌, ಪೇಪರ್‌ ಮಂಜು, ದೀಪಕ್‌, ಜಯಸಿಂಹ, ನವೀನ್‌, ಆಶಾಲತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next