Advertisement

ರಾಮ ಮಂದಿರ ನಿರ್ಮಾಣಕ್ಕೆ ಪತ್ರ ಚಳುವಳಿಯಾಗಲಿ

05:16 PM Dec 22, 2018 | |

ಸಾಗರ: ಪ್ರತಿಯೊಬ್ಬ ಭಾರತೀಯರ ಹೃದಯ ಮಂದಿರದಲ್ಲಿರುವ ರಾಮಚಂದ್ರನಿಗೆ ಸ್ವಾಭಿಮಾನ, ಗೌರವ, ಹೆಮ್ಮೆಯ ಸಂಕೇತವಾದ ಮಂದಿರ ನಿರ್ಮಾಣ ಅಯೋಧ್ಯೆಯಲ್ಲಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲರೂ ಅಂಚೆ ಕಾರ್ಡ್‌ನಲ್ಲಿ ತಕ್ಷಣ ರಾಮಮಂದಿರ ನಿರ್ಮಾಣ ಮಾಡಿ ಎಂದು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವ ಮೂಲಕ ಚಳುವಳಿ ಪ್ರಾರಂಭಿಸಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದರು.

Advertisement

ನಗರದ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ರವೀಂದ್ರ ಪುಸ್ತಕಾಲಯ ಹಾಗೂ ಶೃಂಗೇರಿ ಶಂಕರಮಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಡಾ| ಪಾವಗಡ ಪ್ರಕಾಶ್‌ ಅವರ ರಾಮಾಯಣ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಮನ ಉತ್ಸವ, ಜಾತ್ರೆ, ಆರಾಧನೆ ಇತ್ಯಾದಿಗಳನ್ನು ಮಾಡುತ್ತೇವೆ. ಆದರೆ ರಾಮನ ಜನ್ಮಸ್ಥಾನದಲ್ಲಿ ಇದುವರೆಗೂ ದೇವಸ್ಥಾನ ನಿರ್ಮಾಣವಾಗಿಲ್ಲ ಎನ್ನುವುದು ಹಿಂದೂಗಳ ಪಾಲಿಗೆ ನೋವಿನ ಸಂಗತಿ. ಕೇಂದ್ರದಲ್ಲಿ ಬಿಜೆಪಿ ಆಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ನಿಶ್ಚಿತವಾಗಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗೆಲ್ಲ ಇದೆ ಎಂದರು.

ನನ್ನ ಮೇಲೆ 100ಕ್ಕೂ ಹೆಚ್ಚು ಪ್ರಕರಣಗಳಿವೆ. ಧರ್ಮಕ್ಕೆ ಕೋಮುವಾದದ ಬಣ್ಣ ಹಚ್ಚುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜಗತ್ತಿನಲ್ಲಿ ಇರುವುದು ಮಾನವೀಯತೆ ಎನ್ನುವ ಏಕೈಕ ಧರ್ಮ. ನಾವೆಲ್ಲರೂ ಮಾನವರಾಗಿ ಬದುಕುವ ನಿಟ್ಟಿನಲ್ಲಿ ನಿತ್ಯಜೀವನಕ್ಕೆ ಅಗತ್ಯವಾದ ಉತ್ತಮ ಸಂಗತಿಗಳು ರಾಮಾಯಣದಲ್ಲಿದೆ. ರಾಮಾಯಣವನ್ನು ಕೇಳುವ, ನೋಡುವ, ಓದುವ ಪ್ರವೃತ್ತಿ ನಮಗೆಲ್ಲ ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ ಎಂದು ಹೇಳಿದರು. 

ಡಾ| ಪಾವಗಡ ಪ್ರಕಾಶ್‌ ಮಾತನಾಡಿ, ರಾಮಾಯಣ ತ್ಯಾಗ ಮತ್ತು ಧರ್ಮಪಾಲನೆಯನ್ನು ಬೋಧಿಸುತ್ತದೆ. ಜನಸಾಮಾನ್ಯರಿಗೂ ಅರ್ಥವಾಗುವ ಕಥೆ ರಾಮಾಯಣ. ಇವತ್ತಿನ ಕಾಲಘಟ್ಟಕ್ಕೂ ರಾಮಾಯಣ ಕೃತಿ ಹೆಚ್ಚು ಪ್ರಸ್ತುತ. ರಾಮಾಯಣದ ತತ್ವಾದರ್ಶಗಳ ಅಳವಡಿಕೆ ಅಗತ್ಯ ಎಂದು ಹೇಳಿದರು. ಮಾಜಿ ಶಾಸಕ ಎಲ್‌.ಟಿ. ಹೆಗಡೆ, ರವೀಂದ್ರ ಗ್ರಂಥಾಲಯದ ಎ.ವೈ. ದಂತಿ, ಶೃಂಗೇರಿ ಶಂಕರಮಠದ ಅಶ್ವಿ‌ನಿಕುಮಾರ್‌, ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಐ.ವಿ. ಹೆಗಡೆ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ಆರ್‌.ಎಂ. ಬಾಪಟ್‌ ಇನ್ನಿತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next