ನಿನ್ನ ಮುದ್ದಾದ ಮುಖ, ಹಾಲೆºಳದಿಂಗಳು ಚೆಲ್ಲಿದಂಥ ನಗು, ನಕ್ಕಾಗ ಗುಳಿ ಬೀಳುವ ಕೆನ್ನೆ, ನಗುವಿನ ಸೌಂದರ್ಯ ಹೆಚ್ಚಿಸುವ ಆ ದಂತಪಂಕ್ತಿ, ಅರಸಿಕನನ್ನೂ ಕೆಣಕುವ ಕಣ್ಣುಗಳು, ಕೊಲ್ಲುವ ನೋಟ, ಮಗುವಿನಂಥ ಮುಗ್ಧ ಮನಸ್ಸು, ಜಗತ್ತನ್ನೇ ಗೆಲ್ಲುವ ನೂರಾರು ಕನಸು, ಇನ್ನೊಬ್ಬರ ಕಷ್ಟಕ್ಕೆ ಕರಗಿ ಕಣ್ಣೀರಾದ ನಿನ್ನ ಹೃದಯ ವೈಶಾಲ್ಯತೆ… ಇಷ್ಟು ಸಾಕಿತ್ತು ಕಣೇ ನೀ ನನಗೆ ಇಷ್ಟವಾಗಲು.
ಆ ದಿನ ಮೊದಲ ಬಾರಿ ಭೇಟಿಯಾದಾಗ, ಎರಡು ನಿಮಿಷದ ಔಪಚಾರಿಕ ಮಾತುಕತೆಯಲ್ಲೇ ಹತ್ತಿರವಾದೆವಲ್ಲ? ಅದು ಆ ಕ್ಷಣದ ಪವಾಡವಲ್ಲ, ಅದು ವಿಧಿಯ ಕಟ್ಟಪ್ಪಣೆ. ಹೇಗೋ ಏನೋ, ನಾವಿಬ್ಬರೂ ನಮಗರಿವಿಲ್ಲದೇ ಒಂದಾಗಿದ್ದೇವೆ. ಭವಿಷ್ಯದಲ್ಲಿ, ನಮ್ಮಿಬ್ಬರ ಮಧ್ಯೆ ಒಂದು ಸಣ್ಣ ವೈಮನಸ್ಸೂ ಉಂಟಾಗದಿರಲಿ. ದೊಡ್ಡ ಸಲಿಗೆಯೂ ಸಣ್ಣ ತಪ್ಪಿಗೆಳೆಸದಿರಲಿ, ಆಸ್ತಿ-ಅಂತಸ್ತು, ಜಾತಿ-ಮತ-ಧರ್ಮವೆಂಬ ಕ್ಷುಲ್ಲಕ ಸಂಗತಿಗಳು ನಮ್ಮ ಪ್ರೀತಿಯ ಹತ್ತಿರಕ್ಕೆ ಸುಳಿಯದಿರಲಿ. ಅವರಿವರ ಮಾತಿಗೆ ಕಿವಿಗೊಟ್ಟು ಸಂಶಯದ ಸುನಾಮಿ ಅಪ್ಪಳಿಸಿ ನಮ್ಮ ಪ್ರೀತಿಗೆ ಪ್ರಳಯವಾಗದಿರಲಿ. ನನ್ನ ನಿನ್ನ ಈ ಮುಕ್ತ ಮಾತು-ಕತೆ ನಮ್ಮ ಒಲವಿನ ಬದುಕಿಗೆ ಮುನ್ನುಡಿಯಾಗಲಿ.
ನಿನ್ನ ಪ್ರೇಮ ನಿವೇದನೆ ನನ್ನಲ್ಲಿ ಹೊಸ ಸಂಚಲನ ಮೂಡಿಸಿದೆ. ರೋಗಿ ಬಯಸಿದ್ದೂ, ವೈದ್ಯ ಹೇಳಿದ್ದೂ ಒಂದೇ ಎನ್ನುವಂತಾಗಿದೆ. ನಮ್ಮಿಬ್ಬರ ಆಸೆ-ಕನಸು- ಆಶಯಗಳೆಲ್ಲಾ ಒಂದೇ ಆಗಿರುವುದರಿಂದ, ನಮ್ಮ ದಾಂಪತ್ಯ ನೂರಕ್ಕೆ ನೂರು ಗೆಲ್ಲುತ್ತದೆ ಎಂಬ ಭರವಸೆ ನನಗಿದೆ. ಕನಸು, ಆಸೆ, ಅಭಿರುಚಿ, ಆಸಕ್ತಿ, ಗುರಿ ಎಲ್ಲವೂ ಒಂದೇ ಆಗಿರುವಾಗ ನಮ್ಮನ್ನು ಒಂದು ಮಾಡಿದ ಆ ವಿಧಿಯೇ ಅಡ್ಡ ಬಂದರೂ ನಾ ಹೆದರಲಾರೆ. ನೀನೂ ಹೆದರಬಾರದು!
ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತ ಎಂಬಂಥ ನಮ್ಮ ಜೋಡಿ ಪ್ರೀತಿಯನ್ನು ದ್ವೇಷಿಸುವವರ ಹೊಟ್ಟೆ ಉರಿಸುವಂತಾಗಲಿ. ಅಮರ ಮಧುರ ಪ್ರೀತಿಗೆ ನಮ್ಮಿಬ್ಬರದು ಹೊಸ ಸೇರ್ಪಡೆಯಾಗಲಿ. ಉಸಿರಿರುವವರೆಗೂ ಪ್ರೀತಿಯಿಂದಲೇ ಬದುಕೋಣ. ಪ್ರೀತಿಗೊಂದು ಹೊಸ ಭಾಷ್ಯ ಬರೆಯೋಣ.
ಲವ್ ಯೂ ಕಣೆ!
ನಿನ್ನ ಹೃದಯ ಸಾಮ್ರಾಜ್ಯದ ಸಾಮ್ರಾಟ
ಅಶೋಕ ವಿ. ಬಳ್ಳಾ