Advertisement

ಭೋಗ ಭೂಮಿಯಿಂದ ಯೋಗ ಭೂಮಿಯತ್ತ ನಡೆಯೋಣ

05:31 PM Jan 20, 2022 | Team Udayavani |

ಮಾಗಡಿ: ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಮಾಗಡಿ ಜೆಎಂಎಫ್ಸಿ ಪ್ರಧಾನ ಸಿವಿಲ್‌ ನ್ಯಾಯಾಧೀಶ ಬಿ.ಟಿ.ಮಹೇಶ್‌ ತಿಳಿಸಿದರು.

Advertisement

ಪಟ್ಟಣದಲ್ಲಿನ ಶಾರದ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಏಳಿಗೆಗಾಗಿ ಈ ದಿನವನ್ನು ಕರ್ತವ್ಯ ಬೋಧನಾ ದಿವಸ್‌ ಎಂದು ಆಚರಿಸಲು ಸಂಕಲ್ಪಿಸಲಾಗಿದೆ. ಸ್ವಾಮಿ ವಿವೇಕಾನಂದ ಅವರ ತತ್ವ ಆದರ್ಶಗಳು ಎಂದೆಂದೂ ಪ್ರಸ್ತುವೆನಿಸಿದೆ. ವ್ಯಕ್ತಿತ್ವ ವಿಕಸನದಿಂದ ಕೂಡಿರುವ ಜೀವನ ಬೇಕೋ ಅಥವಾ ಸಂಕೋಚದಿಂದ ಕೂಡಿರುವ ಮರಣಬೇಕೋ ನೀವೇ ನಿರ್ಧರಿಸಿ ಎಂದರು.

ಸೂಕ್ಷ್ಮತೆ ಬೆಳೆಸಿಕೊಳ್ಳಿ: ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ ಮಾತನಾಡಿ, ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಗುರಿಯೂ ಇಲ್ಲ, ಆಲೋಚನಾ ಶಕ್ತಿಯೂ ಇಲ್ಲವಾ ಗಿದೆ. ಕಾರಣ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಸೂಕ್ಷ್ಮತೆ ಬೆಳಸಿಕೊಳ್ಳಬೇಕು. ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಶಕ್ತಿ ಮೇಲಿದೆ ಎಂದರು.

ನವಭಾರತ ನಿರ್ಮಾಣಕ್ಕೆ ಸನ್ನದ್ಧರಾಗಿ: ವಕೀಲ ಕೆ.ಎಸ್‌.ಪ್ರಕಾಶ್‌ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ನಮ್ಮ ಸಂಸ್ಕೃತಿ ಮೌಲ್ಯ ಗಳನ್ನು ಗೌರವಿಸಬೇಕು. ಆತ್ಮವಿಶ್ವಾಸ ಬೆಳಸಿ ಕೊಂಡು ಆಸಕ್ತಿಯಿಂದ ವ್ಯಕ್ತಿತ್ವವನ್ನು ಯುವಶಕ್ತಿ ರೂಪಿಸಿಕೊಳ್ಳ ಬೇಕು. ನವಭಾರತ ನಿರ್ಮಾಣಕ್ಕೆ ಎಲ್ಲರೂ ಸನ್ನದ್ಧ ರಾಗಬೇಕು. ವಿವೇಕಾನಂದರ ವಾಣಿಯಂತೆ ಭೋಗ ಭೂಮಿಯಿಂದ ಯೋಗ ಭೂಮಿಯತ್ತ ಎಲ್ಲರೂ ನಡೆಯೋಣ ಎಂದು ತಿಳಿಸಿದರು.

ಸಂವಿಧಾನ ನಮಗೆಲ್ಲ ದಾರಿದೀಪ: ವಕೀಲ ನಾರಾಯಣಸ್ವಾಮಿ ಮಾತನಾಡಿ, ಗುಡಿಯಲ್ಲಿನ ದೇವರನ್ನು ಕಾಣುವ ಬದಲು ದೀನದಲಿತರ, ಶೋಷಿತ ರನ್ನು ಸತ್ಕರಿಸುವ ಮೂಲಕ ಅವರಲ್ಲಿ ದೇವರನ್ನು ಕಾಣಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಶ್ರೇಷ್ಠ ಸಂವಿಧಾನ ರಚಿಸಿ ಡಾ.ಅಂಬೇಡ್ಕರ್‌ ನಮ್ಮೆಲ್ಲ ರಿಗೂ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು. ಕಾಲೇಜಿನ ಕಾರ್ಯದರ್ಶಿ ಚೇತನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಂಶುಪಾಲ ಕುಮಾರ್‌, ವಕೀಲ ಸಂಘದ ಉಪಾಧ್ಯಕ್ಷ ಸಿದ್ದರಾಜು, ಸಿಬ್ಬಂದಿ, ಪೋಲಿಸ್‌ ಸಿಬ್ಬಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next